×
Ad

ಡೆಲ್ಲಿಗೆ ಇಂದು ದುರ್ಬಲ ಪಂಜಾಬ್ ಎದುರಾಳಿ

Update: 2016-05-06 23:31 IST

ಮೊಹಾಲಿ, ಮೇ 6: ರೈಸಿಂಗ್ ಪುಣೆ ಸೂಪರ್ ಜಯಂಟ್ಸ್ ವಿರುದ್ಧ ಕಳಪೆ ಪ್ರದರ್ಶನ ನೀಡಿದ್ದ ಡೆಲ್ಲಿ ಡೇರ್ ಡೆವಿಲ್ಸ್ ತಂಡ ಕೆಲವು ಪ್ರಮುಖ ಆಟಗಾರರನ್ನು ಆಡುವ 11ರ ಬಳಗಕ್ಕೆ ಸೇರಿಸಿಕೊಂಡು ಅಂಕಪಟ್ಟಿಯ ಕೆಳ ಸ್ಥಾನದಲ್ಲಿರುವ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡವನ್ನು ಎದುರಿಸಲು ಸಜ್ಜಾಗಿದೆ.

ಕಳೆದ ಮೂರು ಆವೃತ್ತಿಯ ಐಪಿಎಲ್‌ನಲ್ಲಿ ಕಳಪೆ ಪ್ರದರ್ಶನ ನೀಡಿದ್ದ ಡೆಲ್ಲಿ ಈ ಬಾರಿಯ ಐಪಿಎಲ್‌ನಲ್ಲಿ ಮೆಂಟರ್ ರಾಹುಲ್ ದ್ರಾವಿಡ್‌ರ ಮಾರ್ಗದರ್ಶನದಲ್ಲಿ ಗಮನಾರ್ಹ ಪ್ರದರ್ಶನ ನೀಡುತ್ತಿದೆ. ಹಿರಿಯ ಬೌಲರ್ ಝಹೀರ್ ಖಾನ್ ನಾಯಕತ್ವದಲ್ಲಿ ಡೆಲ್ಲಿ ತಂಡ 8 ಪಂದ್ಯಗಳ ಪೈಕಿ ಐದರಲ್ಲಿ ಜಯ ಸಾಧಿಸಿದ್ದು, ಅಂಕಪಟ್ಟಿಯಲ್ಲಿ ಮೂರನೆ ಸ್ಥಾನದಲ್ಲಿದೆ.

 ಡೆಲ್ಲಿಯ ಐದು ಪಂದ್ಯಗಳ ಗೆಲುವಿನಲ್ಲಿ ಎಲ್ಲ ಆಟಗಾರರ ಕೊಡುಗೆ ಇದೆ. ಈ ಅಂಶವು ತಂಡ ಕೇವಲ ಒಂದಿಬ್ಬರು ಆಟಗಾರರ ಪ್ರದರ್ಶನವನ್ನು ನೆಚ್ಚಿಕೊಂಡಿಲ್ಲ ಎಂದು ತೋರಿಸಿಕೊಟ್ಟಿದೆ. ಲೆಗ್ ಸ್ಪಿನ್ನರ್ ಅಮಿತ್ ಮಿಶ್ರಾ, ವಿಕೆಟ್‌ಕೀಪರ್ ಸಂಜು ಸ್ಯಾಮ್ಸನ್ ಹಾಗೂ ಅಗ್ರ ಕ್ರಮಾಂಕದ ಆಟಗಾರ ಕರುಣ್ ನಾಯರ್ ಎಲ್ಲ 8 ಪಂದ್ಯಗಳಲ್ಲಿ ಆಡಿದ್ದಾರೆ. ಇನ್ನುಳಿದ ಆಟಗಾರರು ಕೆಲವು ಪಂದ್ಯಗಳಲ್ಲಿ ವಿಶ್ರಾಂತಿ ಪಡೆದಿದ್ದರು.

ಡೆಲ್ಲಿ ತಂಡ ಹರಾಜಿನಲ್ಲಿ 8.5 ಕೋಟಿ ರೂ. ನೀಡಿ ಖರೀದಿಸಿದ್ದ ಆಲ್‌ರೌಂಡರ್ ಪವನ್ ನೇಗಿ ನಿರೀಕ್ಷಿತ ಪ್ರದರ್ಶನ ನೀಡದೇ ನಿರಾಸೆಗೊಳಿಸಿದ್ದಾರೆ. ನೇಗಿ 6 ಇನಿಂಗ್ಸ್‌ಗಳಲ್ಲಿ 51 ರನ್ ಗಳಿಸಿದ್ದಾರೆ. 6 ಓವರ್ ಬೌಲಿಂಗ್‌ನಲ್ಲಿ 65 ರನ್ ನೀಡಿ ಒಂದೂ ವಿಕೆಟ್ ಪಡೆದಿಲ್ಲ. ಮೇಲ್ನೋಟಕ್ಕೆ ಡೇರ್ ಡೆವಿಲ್ಸ್ ತಂಡ ಪಂಜಾಬ್ ವಿರುದ್ಧ ಗೆಲ್ಲುವ ಫೇವರಿಟ್ ತಂಡವಾಗಿ ಕಾಣಿಸಿಕೊಳ್ಳುತ್ತಿದೆ. ಪಂಜಾಬ್ ತಂಡ ಪ್ರತಿ ಪಂದ್ಯದಲ್ಲೂ ತಪ್ಪನ್ನು ಪುನರಾವರ್ತಿಸುತ್ತಿದೆ. ಡೇವಿಡ್ ಮಿಲ್ಲರ್‌ರನ್ನು ನಾಯಕನ ಸ್ಥಾನದಿಂದ ಕೆಳಗಿಳಿಸಿದರೂ ತಂಡದ ಅದೃಷ್ಟದಲ್ಲಿ ಯಾವುದೇ ಮಹತ್ವದ ಬದಲಾವಣೆಯಾಗಿಲ್ಲ.

ಡೆಲ್ಲಿ ತಂಡದ ನಾಯಕ ಝಹೀರ್ ಪುಣೆ ವಿರುದ್ಧದ ಪಂದ್ಯದಲ್ಲಿ ವಿಶ್ರಾಂತಿ ಪಡೆದಿದ್ದರು. ಝಹೀರ್ ಪಂದ್ಯದ ಆರಂಭದಲ್ಲೇ ವಿಕೆಟ್ ಉರುಳಿಸುವ ಸಾಮರ್ಥ್ಯ ಹೊಂದಿದ್ದು, ಡೆತ್ ಓವರ್‌ನಲ್ಲೂ ಚೆನ್ನಾಗಿ ಬೌಲಿಂಗ್ ಮಾಡುತ್ತಾರೆ.

ಈ ವರ್ಷದ ಐಪಿಎಲ್‌ನಲ್ಲಿ ಸ್ಥಿರ ಪ್ರದರ್ಶನ ನೀಡುತ್ತಿರುವ ಕ್ವಿಂಟನ್ ಡಿಕಾಕ್ ಪುಣೆ ವಿರುದ್ಧದ ಪಂದ್ಯದಲ್ಲಿ ಆಡಿರಲಿಲ್ಲ. ಪಂಜಾಬ್ ವಿರುದ್ಧ ಪಂದ್ಯದಲ್ಲಿ ತಂಡಕ್ಕೆ ವಾಪಸಾಗಲಿದ್ದಾರೆ. ಯುವ ಆಟಗಾರರಾದ ಸ್ಯಾಮ್ಸನ್ ಹಾಗೂ ರಿಷಬ್ ಪಂತ್ ಲಭಿಸಿದ ಅವಕಾಶವನ್ನು ಬಳಸಿಕೊಳ್ಳಬೇಕಾಗಿದೆ.

ಪಂದ್ಯದ ಸಮಯ: ರಾತ್ರಿ 8:00

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News