×
Ad

ಮ್ಯಾಡ್ರಿಡ್ ಓಪನ್: ಜೊಕೊವಿಕ್, ನಡಾಲ್, ಮರ್ರೆ ಕ್ವಾ.ಫೈನಲ್‌ಗೆ

Update: 2016-05-06 23:58 IST

  ಮ್ಯಾಡ್ರಿಡ್, ಮೇ 6: ವಿಶ್ವದ ನಂ.1 ಆಟಗಾರ ನೊವಾಕ್ ಜೊಕೊವಿಕ್, ಸ್ಪೇನ್‌ನ ರಫೆಲ್ ನಡಾಲ್ ಹಾಗೂ ಹಾಲಿ ಚಾಂಪಿಯನ್ ಆ್ಯಂಡಿ ಮರ್ರೆ ಮ್ಯಾಡ್ರಿಡ್ ಓಪನ್ ಟೆನಿಸ್ ಟೂರ್ನಿಯಲ್ಲಿ ಕ್ವಾರ್ಟರ್‌ಫೈನಲ್‌ಗೆ ತಲುಪಿದ್ದಾರೆ.

 ಗುರುವಾರ ನಡೆದ ಪುರುಷರ ಸಿಂಗಲ್ಸ್‌ನ ಪ್ರಿ-ಕ್ವಾರ್ಟರ್‌ಫೈನಲ್‌ನಲ್ಲಿ ಜೊಕೊವಿಕ್ ಸ್ಪೇನ್‌ನ ರಾಬರ್ಟೊ ಬೌಟಿಸ್ಟಾ ಅಗುಟ್‌ರನ್ನು 6-2, 6-1 ಸೆಟ್‌ಗಳ ಅಂತರದಿಂದ ಮಣಿಸಿದರು. ರಫೆಲ್ ನಡಾಲ್ ಹಾಗೂ ಆ್ಯಂಡಿ ಮರ್ರೆ ಕ್ರಮವಾಗಿ ಸ್ಯಾಮ್ ಕ್ಯೂರಿ ಹಾಗೂ ಗಿಲ್ಲೆಸ್ ಸೈಮನ್‌ರನ್ನು ನೇರ ಸೆಟ್‌ಗಳಿಂದ ಮಣಿಸಿ ಅಂತಿಮ 8ರ ಹಂತ ತಲುಪಿದ್ದಾರೆ.

ಮೂರು ವರ್ಷಗಳ ಬಳಿಕ ಮ್ಯಾಡ್ರಿಡ್ ಓಪನ್ ಆಡಿರುವ ಜೊಕೊವಿಕ್ ಮುಂದಿನ ಸುತ್ತಿನಲ್ಲಿ ಕೆನಡಾದ ಮಿಲಾಸ್ ರಾವೊನಿಕ್‌ರನ್ನು ಎದುರಿಸಲಿದ್ದಾರೆ. ರಾವೊನಿಕ್ ಫ್ರಾನ್ಸ್‌ನ ಜೋ-ವಿಲ್ಫ್ರೆಡ್ ಸೋಂಗರನ್ನು 6-4, 6-4 ಸೆಟ್‌ಗಳ ಅಂತರದಿಂದ ಮಣಿಸಿದ್ದರು.

 14 ಬಾರಿಯ ಗ್ರಾನ್‌ಸ್ಲಾಮ್ ಚಾಂಪಿಯನ್ ನಡಾಲ್ ಅವರು ಕ್ಯೂರಿ ಅವರನ್ನು 6-4, 6-2 ನೇರ ಸೆಟ್‌ಗಳಿಂದ ಸೋಲಿಸಿದರು. ಈ ಮೂಲಕ ನಡಾಲ್ ಸತತ 6ನೆ ಪಂದ್ಯವನ್ನು ಗೆದ್ದುಕೊಂಡರು. ನಡಾಲ್ ಮುಂದಿನ ಸುತ್ತಿನಲ್ಲಿ ಪೋರ್ಚುಗಲ್‌ನ ಜಾವೊ ಸೌಸಾರನ್ನು ಎದುರಿಸಲಿದ್ದಾರೆ.

ಮತ್ತೊಂದು ಕ್ವಾರ್ಟರ್ ಫೈನಲ್‌ನಲ್ಲಿ ಗಿಲ್ಲೆಸ್ ಸೈಮನ್‌ರನ್ನು 6-4, 6-2 ಸೆಟ್‌ಗಳ ಅಂತರದಿಂದ ಸೋಲಿಸಿದ ಮರ್ರೆ ಸೈಮನ್ ವಿರುದ್ಧ ಗೆಲುವಿನ ದಾಖಲೆಯನ್ನು (16-2)ಉತ್ತಮ ಪಡಿಸಿಕೊಂಡರು. ಎರಡು ಬಾರಿಯ ಗ್ರಾನ್‌ಸ್ಲಾಮ್ ಚಾಂಪಿಯನ್ ಮರ್ರೆ ಕ್ವಾರ್ಟರ್ ಫೈನಲ್‌ನಲ್ಲಿ ಝೆಕ್‌ನ ಥಾಮಸ್ ಬೆರ್ಡಿಕ್‌ರನ್ನು ಎದುರಿಸಲಿದ್ದಾರೆ. ಬೆರ್ಡಿಕ್ ಅವರು ಡೇವಿಡ್ ಫೆರರ್‌ರನ್ನು 7-6(10/8), 7-5 ಸೆಟ್‌ಗಳಿಂದ ಸೋಲಿಸಿ ಅಂತಿಮ 8ರ ಘಟ್ಟಕ್ಕೆ ಏರಿದ್ದರು.

..............

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News