ಒಲಿಂಪಿಕ್ಸ್ ಟಿಕೆಟ್‌ಗಾಗಿ ಸುಶೀಲ್-ನರಸಿಂಗ್ ‘ಕುಸ್ತಿ’!
ಹೊಸದಿಲ್ಲಿ, ಮೇ 7: ಬ್ರೆಝಿಲ್‌ನಲ್ಲಿ ಆಗಸ್ಟ್‌ನಲ್ಲಿ ಆರಂಭವಾಗಲಿರುವ ರಿಯೋ ಒಲಿಂಪಿಕ್ಸ್ ಟಿಕೆಟ್‌ಗಾಗಿ ಹಿರಿಯ ಕುಸ್ತಿಪಟು ಸುಶೀಲ್ ಕುಮಾರ್ ಹಾಗೂ ನರಸಿಂಗ್ ಸಿಂಗ್ ಯಾದವ್ ನಡುವೆ ಕುಸ್ತಿ ಏರ್ಪಟ್ಟಿದೆ.
ಕಳೆದ ವರ್ಷ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಕಂಚಿನ ಪದಕವನ್ನು ಜಯಿಸಿದ್ದ ನರಸಿಂಗ್ ರಿಯೋ ಗೇಮ್ಸ್‌ಗೆ ಸ್ಥಾನ ಗಿಟ್ಟಿಸಿಕೊಂಡ ಭಾರತದ ಮೊದಲ ಕುಸ್ತಿಪಟು ಎನಿಸಿಕೊಂಡಿದ್ದರು. ಆದರೆ, ಅವರ ಈ ಸಾಧನೆಯೇ ವಿವಾದವನ್ನು ಸೃಷ್ಟಿಸಿದೆ. ರಿಯೋ ಗೇಮ್ಸ್‌ನಲ್ಲಿ 74 ಕೆಜಿ ವಿಭಾಗದಲ್ಲಿ ಯಾದವ್ ಅಥವಾ ಎರಡು ಬಾರಿ ಒಲಿಂಪಿಕ್ಸ್‌ನಲ್ಲಿ ಪದಕವನ್ನು ಜಯಿಸಿದ್ದ ಸುಶೀಲ್ ಕುಮಾರ್‌ರನ್ನು ಸ್ಪರ್ಧೆಗಿಳಿಸಬೇಕೋ ಎಂಬ ಬಗ್ಗೆ ಗೊಂದಲ ಉಂಟಾಗಿದೆ. ಈ ಕುರಿತು ರಾಷ್ಟ್ರೀಯ ಕುಸ್ತಿ ಫೆಡರೇಶನ್ ಆಯ್ಕೆ ಅಂತಿಮ ನಿರ್ಧಾರ ಕೈಗೊಳ್ಳಲಿದೆ. ಒಟ್ಟಾರೆ ಈ ಇಬ್ಬರ ನಡುವೆ ಬ್ರೆಝಿಲ್‌ನಲ್ಲಿ ನಡೆಯಲಿರುವ ಒಲಿಂಪಿಕ್ಸ್ ಟಿಕೆಟ್‌ಗಾಗಿ ‘ಕುಸ್ತಿ’ಏರ್ಪಟ್ಟಿದೆ.
32ರ ಹರೆಯದ ಮಾಜಿ ವಿಶ್ವ ಚಾಂಪಿಯನ್ ಹಾಗೂ ಎರಡು ಬಾರಿ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಚಿನ್ನದ ಪದಕವನ್ನು ಗೆದ್ದುಕೊಂಡಿರುವ ಸುಶೀಲ್ ಒಲಿಂಪಿಕ್ಸ್‌ನಲ್ಲಿ ಯಶಸ್ಸು ಸಾಧಿಸಿದವರು. ರಿಯೋ ಒಲಿಂಪಿಕ್ಸ್‌ನಲ್ಲಿ 66 ಕೆಜಿ ವಿಭಾಗದಲ್ಲಿ ಭಾರತದ ಪ್ರಬಲ ಸ್ಪರ್ಧಿಯಾಗಿದ್ದರು. ಆದರೆ, ಅಂತಾರಾಷ್ಟ್ರೀಯ ಕುಸ್ತಿ ಸಂಸ್ಥೆ 2013ರಲ್ಲಿ ಒಲಿಂಪಿಕ್ಸ್‌ನ ತೂಕದ ಮಟ್ಟವನ್ನು 66ಕೆಜಿಯಿಂದ 74 ಕೆಜಿಗೆ ಬದಲಾಯಿಸಿದೆ.
ಕಳೆದ ಎರಡು ವರ್ಷಗಳಲ್ಲಿ 26 ವರ್ಷದ ನರಸಿಂಗ್ ಸ್ಥಿರವಾದ ಪ್ರದರ್ಶನ ನೀಡುತ್ತಿದ್ದಾರೆ. ಸುಶೀಲ್ 2014ರ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಕೊನೆಯ ಬಾರಿ 66 ಕೆಜಿ ವಿಭಾಗದಲ್ಲಿ ಚಿನ್ನ ಜಯಿಸಿದ್ದರು. ಆದರೆ, ಎರಡು ವರ್ಷಗಳಿಂದ ಯಾವುದೇ ಟೂರ್ನಿಯಲ್ಲಿ ಭಾಗವಹಿಸಿಲ್ಲ. ಅವರು ಹಿಂದಿನ ಸಾಧನೆಯ ಆಧಾರದಲ್ಲೇ ಒಲಿಂಪಿಕ್ಸ್‌ಗೆ ಆಯ್ಕೆಯಾಗಬೇಕಾಗಿದೆ.
ಅಂಕಿ-ಅಂಶ ಹಾಗೂ ಸದ್ಯದ ಸಾಧನೆಯು ಯಾದವ್ ಪರವಾಗಿದೆ. ಒಲಿಂಪಿಕ್ಸ್ ಕೋಟಾ ಸ್ಥಾನವನ್ನು ಗಿಟ್ಟಿಸಿರುವ ಕುಸ್ತಿಪಟು ಮಾತ್ರ ಒಲಿಂಪಿಕ್ಸ್‌ನಲ್ಲಿ ಭಾರತವನ್ನು ಪ್ರತಿನಿಧಿಸುವ ಅವಕಾಶವಿರುವ ಹಿನ್ನೆಲೆಯಲ್ಲಿ ಯಾದವ್‌ಗೆ ಒಲಿಂಪಿಕ್ಸ್ ಟಿಕೆಟ್ ಲಭಿಸುವ ಸಾಧ್ಯತೆಯೇ ಅಧಿಕವಿದೆ.