×
Ad

ಹಾಲೆಂಡ್‌ಗೆ ಹಾರಿದ ಸುರೇಶ್ ರೈನಾ

Update: 2016-05-09 23:08 IST

 ಬರೋಡ, ಮೇ 9: ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧ ರವಿವಾರ ನಡೆದ ಐಪಿಎಲ್ ಪಂದ್ಯ ಕೊನೆಗೊಂಡ ತಕ್ಷಣ ಗುಜರಾತ್ ಲಯನ್ಸ್ ತಂಡದ ನಾಯಕ ಸುರೇಶ್ ರೈನಾ ಗರ್ಭಿಣಿ ಪತ್ನಿ ಪ್ರಿಯಾಂಕಾರನ್ನು ನೋಡಲು ಹಾಲೆಂಡ್‌ಗೆ ಪ್ರಯಾಣ ಬೆಳೆಸಿದ್ದಾರೆ.

ರೈನಾ ಈ ವರ್ಷದ ಐಪಿಎಲ್‌ನ ಹೊಸ ತಂಡವಾಗಿರುವ ಗುಜರಾತ್‌ನ್ನು ಸಮರ್ಥವಾಗಿ ಮುನ್ನಡೆಸಿದ್ದು, ಲಯನ್ಸ್ ತಂಡ ಈತನಕ ಆಡಿರುವ 11 ಪಂದ್ಯಗಳ ಪೈಕಿ 7ರಲ್ಲಿ ಜಯ ಸಾಧಿಸಿ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನಕ್ಕೆ ಲಗ್ಗೆ ಇಟ್ಟಿದೆ.

ರೈನಾ 2008ರಲ್ಲಿ ಐಪಿಎಲ್ ಟೂರ್ನಿ ಆರಂಭವಾದ ನಂತರ ಒಂದೂ ಪಂದ್ಯವನ್ನು ತಪ್ಪಿಸಿಕೊಂಡಿಲ್ಲ. ಐಪಿಎಲ್‌ನಲ್ಲಿ ಗರಿಷ್ಠ ಪಂದ್ಯಗಳನ್ನು(143) ಆಡಿರುವ ರೈನಾ ಅತ್ಯಂತ ಹೆಚ್ಚು ರನ್(3985) ಗಳಿಸಿದ ಹೆಗ್ಗಳಿಕೆ ಹೊಂದಿದ್ದಾರೆ.

ರೈನಾ ಮುಂದಿನ ತಿಂಗಳು ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದು, ಪತ್ನಿ ಪ್ರಿಯಾಂಕಾರನ್ನು ನೋಡಿಕೊಳ್ಳಲು ಐಪಿಎಲ್‌ನ್ನು ತೊರೆದು ಹಾಲೆಂಡ್ ವಿಮಾನ ಏರಿದ್ದಾರೆ.

ರೈನಾರ ಅನುಪಸ್ಥಿತಿಯಲ್ಲಿ ಮೇ 14 ರಂದು ಬೆಂಗಳೂರಿನಲ್ಲಿ ನಡೆಯಲಿರುವ ಬೆಂಗಳೂರು ತಂಡದ ವಿರುದ್ಧದ ಪಂದ್ಯದಲ್ಲಿ ಗುಜರಾತ್ ತಂಡವನ್ನು ಆ್ಯರೊನ್ ಫಿಂಚ್ ಮುನ್ನಡೆಸಲಿದ್ದಾರೆ. ಐಪಿಎಲ್‌ನಲ್ಲಿ ನಾಯಕನಾಗಿ ಯಶಸ್ಸು ಸಾಧಿಸಲು ತನ್ನ ಪತ್ನಿಯೇ ಕಾರಣ ಎಂದು ಹೇಳಿರುವ ರೈನಾ, ಮದುವೆಯಾದ ಬಳಿಕ ನನಗೆ ಹೆಚ್ಚು ಜವಾಬ್ದಾರಿ ಬಂದಿದೆ. ನನ್ನಲ್ಲಿ ತಾಳ್ಮೆಯ ಗುಣವೂ ಹೆಚ್ಚಾಗಿದೆ ಎಂದು ಹೇಳಿದ್ದಾರೆ.

ರೈನಾ ಕಳೆದ ವರ್ಷದ ಎಪ್ರಿಲ್‌ನಲ್ಲಿ ಬಾಲ್ಯದ ಗೆಳತಿ ಪ್ರಿಯಾಂಕಾರನ್ನು ವಿವಾಹವಾಗಿದ್ದರು.

ಬೆಂಗಳೂರು ತಂಡದ ಪರ ಆಡುತ್ತಿರುವ ವೆಸ್ಟ್‌ಇಂಡೀಸ್‌ನ ಬ್ಯಾಟ್ಸ್‌ಮನ್ ಕ್ರಿಸ್ ಗೇಲ್ ಐಪಿಎಲ್‌ನಿಂದ ಬ್ರೇಕ್ ಪಡೆದು ಹೆಣ್ಣು ಮಗುವಿಗೆ ಜನ್ಮ ನೀಡಿದ ಗೆಳತಿಯನ್ನು ನೋಡಲು ಸ್ವದೇಶಕ್ಕೆ ವಾಪಸಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News