×
Ad

ಐಪಿಎಲ್ ಪ್ಲೇ-ಆಫ್: ಮುಂಚೂಣಿಯಲ್ಲಿ ಗುಜರಾತ್, ಹೈದರಾಬಾದ್

Update: 2016-05-10 22:32 IST

 ನಿರ್ಗಮನದ ಹಾದಿಯಲ್ಲಿ ಪುಣೆ, ಪಂಜಾಬ್

ಹೊಸದಿಲ್ಲಿ, ಮೇ 10: ಬೆಂಗಳೂರಿನಲ್ಲಿ ಮೇ 24 ರಂದು ಮೊದಲ ಕ್ವಾಲಿಫೈಯರ್ ಪಂದ್ಯ ನಡೆಯುವುದರೊಂದಿಗೆ ಈ ವರ್ಷದ ಐಪಿಎಲ್ ಟೂರ್ನಿಯ ಪ್ಲೇ-ಆಫ್ ಪಂದ್ಯಗಳು ಆರಂಭವಾಗುತ್ತವೆ. ಪ್ಲೇ -ಆಫ್ ಹಂತ ಆರಂಭವಾಗುವ ಮೊದಲು ಇನ್ನು 17 ಪಂದ್ಯಗಳು ನಡೆಯಲು ಬಾಕಿಯಿವೆೆ.

ಈ ವರ್ಷದ ಐಪಿಎಲ್‌ನಲ್ಲಿ ಪ್ಲೇ-ಆಫ್ ಹಂತಕ್ಕೇರಲು ಸ್ಪರ್ಧೆಯಲ್ಲಿರುವ ತಂಡಗಳ ಸಾಧನೆಯ ಅವಲೋಕನ ಇಲ್ಲಿದೆ....

 ಗುಜರಾತ್ ಲಯನ್ಸ್: ಸಾಂಪ್ರದಾಯಿಕವಾಗಿ 16 ಅಂಕಗಳನ್ನು ಪಡೆಯುವ ತಂಡ ಪ್ಲೇ-ಆಫ್ ಹಂತಕ್ಕೆ ತೇರ್ಗಡೆಯಾಗುತ್ತದೆ. 9ನೆ ಆವೃತ್ತಿಯ ಐಪಿಎಲ್‌ನ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿರುವ ಗುಜರಾತ್ ಲಯನ್ಸ್ 11 ಪಂದ್ಯಗಳಲ್ಲಿ 14 ಅಂಕವನ್ನು ಗಳಿಸಿದ್ದು, ಮುಂದಿನ ಸುತ್ತಿಗೇರಲು ಸಜ್ಜಾಗಿದೆ. ಗುಜರಾತ್ ತಂಡ ಇನ್ನೂ 3 ಪಂದ್ಯ ಆಡಲು ಬಾಕಿಯಿದೆ. ಇನ್ನೆರಡು ಪಂದ್ಯಗಳಲ್ಲಿ ಜಯ ಸಾಧಿಸಿದರೆ ಪ್ಲೇ-ಆಫ್ ಸ್ಥಾನ ಖಚಿತವಾಗಲಿದೆ.

ಒಂದು ವೇಳೆ ಗುಜರಾತ್ ಇನ್ನುಳಿದ 3 ಪಂದ್ಯಗಳನ್ನು ಸೋತರೆ 14 ಅಂಕದಲ್ಲೇ ಉಳಿಯಲಿದೆ. ಮುಂಬೈ ಇಂಡಿಯನ್ಸ್ ಹಾಗೂ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡಗಳು ಮತ್ತಷ್ಟು ಕಳಪೆ ಪ್ರದರ್ಶನ ನೀಡಿ ಪ್ಲೇ-ಆಫ್ ಸ್ಪರ್ಧೆಯಿಂದ ಹೊರ ನಡೆದರೆ ಗುಜರಾತ್‌ಗೆ ಅವಕಾಶ ಲಭಿಸಲಿದೆ. ಈ ಹಿಂದಿನ ಐಪಿಎಲ್ ಟೂರ್ನಿಯಲ್ಲಿ 14 ಅಂಕವನ್ನು ಗಳಿಸಿದ ತಂಡಗಳು ಪ್ಲೇ-ಆಫ್‌ಗೆ ಏರಿದ ನಿದರ್ಶನವಿದೆ.

ಸನ್‌ರೈಸರ್ಸ್ ಹೈದರಾಬಾದ್: ಇದೀಗ ಐಪಿಎಲ್ ಅಂಕಪಟ್ಟಿಯಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡ ಎರಡನೆ ಸ್ಥಾನದಲ್ಲಿದೆ. ಹೈದರಾಬಾದ್ 9 ಪಂದ್ಯಗಳಲ್ಲಿ 6ರಲ್ಲಿ ಜಯ ಸಾಧಿಸಿದೆ. ತಂಡದ ನೆಟ್ ರನ್‌ರೇಟ್(+0.61) ಉಳಿದೆಲ್ಲಾ ತಂಡಗಳಿಗಿಂತ ಉತ್ತಮವಾಗಿದೆ. ಹೈದರಾಬಾದ್‌ಗೆ ಇನ್ನೂ 5 ಪಂದ್ಯಗಳು ಆಡಲು ಬಾಕಿಯಿದೆ. ತಂಡದ ಈಗಿನ ಫಾರ್ಮ್‌ನ್ನು ಗಮನಿಸಿದರೆ ಮುಂದಿನ ಸುತ್ತಿಗೆ ತಲುಪುವುದರಲ್ಲಿ ಸಂಶಯವೇ ಇಲ್ಲ.

ಕೋಲ್ಕತಾ ನೈಟ್ ರೈಡರ್ಸ್ : 10 ಪಂದ್ಯಗಳಲ್ಲಿ 12 ಅಂಕವನ್ನು ಗಳಿಸಿರುವ ಕೋಲ್ಕತಾ ನೈಟ್ ರೈಡರ್ಸ್ ತಂಡ ಅಂಕಪಟ್ಟಿಯಲ್ಲಿ 3ನೆ ಸ್ಥಾನವನ್ನು ಕಾಯ್ದುಕೊಂಡಿದೆ. ಎರಡು ಬಾರಿಯ ಐಪಿಎಲ್ ಚಾಂಪಿಯನ್ ಕೆಕೆಆರ್ ಈ ವಾರ ಕೇವಲ ಒಂದು ಪಂದ್ಯವನ್ನು ಆಡುತ್ತದೆ. ಆರು ದಿನಗಳ ಅಂತರದಲ್ಲಿ ಉಳಿದ 3 ಪಂದ್ಯಗಳನ್ನು ಆಡುತ್ತದೆ. ಇನ್ನೆರಡು ಪಂದ್ಯಗಳಲ್ಲಿ ಜಯ ಸಾಧಿಸಿದರೆ 16 ಅಂಕವನ್ನು ಗಳಿಸಲಿದೆ. ಇದು ಮುಂದಿನ ಸುತ್ತಿಗೇರಲು ಅನುಕೂಲಕರವಾಗಲಿದೆ.

  ಡೆಲ್ಲಿ ಡೇರ್ ಡೆವಿಲ್ಸ್ : ಮತ್ತೊಂದೆಡೆ, ಡೆಲ್ಲಿ ಡೇರ್ ಡೆವಿಲ್ಸ್ ತಂಡ 9 ಪಂದ್ಯಗಳಲ್ಲಿ 10 ಅಂಕವನ್ನು ಗಳಿಸಿ ಅಂಕಪಟ್ಟಿಯಲ್ಲಿ ನಾಲ್ಕನೆ ಸ್ಥಾನದಲ್ಲಿದೆ. ಮುಂದಿನ ಸುತ್ತಿಗೆ ಅರ್ಹತೆ ಗಳಿಸಲು ಉಳಿದ 5 ಪಂದ್ಯಗಳ ಪೈಕಿ ಕನಿಷ್ಠ ಮೂರರಲ್ಲಿ ಜಯ ಸಾಧಿಸಬೇಕಾಗಿದೆ. ಒಂದು ವೇಳೆ ಡೆಲ್ಲಿ ಹಿನ್ನಡೆ ಅನುಭವಿಸಿದರೆ, ಮುಂಬೈ ಹಾಗೂ ಆರ್‌ಸಿಬಿ ಪ್ಲೇ-ಆಫ್‌ನ ನಾಲ್ಕನೆ ಸ್ಥಾನಕ್ಕಾಗಿ ಸ್ಪರ್ಧೆಗೆ ಇಳಿಯಲಿವೆ.

ಮುಂಬೈ ಇಂಡಿಯನ್ಸ್: ಹಾಲಿ ಚಾಂಪಿಯನ್ ಮುಂಬೈ ಈ ವರ್ಷ ಸ್ಥಿರ ಪ್ರದರ್ಶನ ನೀಡಲು ಪರದಾಡುತ್ತಿದೆ. ಮುಂಬೈ ಅಂಕಪಟ್ಟಿಯಲ್ಲಿ 3ನೆ ಸ್ಥಾನದಿಂದ 5ನೆ ಸ್ಥಾನಕ್ಕೆ ಕುಸಿದಿದೆ. 10 ಪಂದ್ಯಗಳಲ್ಲಿ ಕೇವಲ 5ರಲ್ಲಿ ಜಯ ಸಾಧಿಸಿ 10 ಅಂಕ ಗಳಿಸಿದೆ. ಮುಂಬೈ ಮುಂದಿನ ಸುತ್ತಿಗೇರಲು ಇನ್ನುಳಿದ 4 ಪಂದ್ಯಗಳಲ್ಲಿ ಕನಿಷ್ಠ 3 ಪಂದ್ಯಗಳನ್ನಾದರೂ ಗೆಲ್ಲಬೇಕಾಗಿದೆ. ನಾಲ್ಕೂ ಪಂದ್ಯಗಳನ್ನು ಜಯಿಸಿದರೆ 18 ಅಂಕ ಲಭಿಸಲಿದೆ.

ಆರ್‌ಸಿಬಿ: ವಿರಾಟ್ ಕೊಹ್ಲಿ ನೇತೃತ್ವದ ಬೆಂಗಳೂರು ತಂಡ ಸೋಮವಾರ ಪಂಜಾಬ್ ವಿರುದ್ಧ 1 ರನ್‌ನಿಂದ ರೋಚಕವಾಗಿ ಜಯ ಸಾಧಿಸಿ ಪ್ಲೇ-ಆಫ್‌ಗೆ ತಲುಪುವ ವಿಶ್ವಾಸವನ್ನು ಜೀವಂತವಾಗಿರಿಸಿದೆ. ಕೊಹ್ಲಿ ಪಡೆ ಮುಂದಿನ ಸುತ್ತಿಗೇರಬೇಕಾದರೆ ಉಳಿದ 5 ಪಂದ್ಯಗಳನ್ನು ಗೆಲ್ಲಲೇಬೇಕಾಗಿದೆ. ಅಥವಾ ಕನಿಷ್ಠ ಪಕ್ಷ ನಾಲ್ಕು ಪಂದ್ಯಗಳನ್ನಾದರೂ ಗೆದ್ದುಕೊಳ್ಳಬೇಕು. ಕೊಹ್ಲಿ ಬಳಗ 9 ಪಂದ್ಯಗಳಲ್ಲಿ 8 ಅಂಕವನ್ನು ಗಳಿಸಿದೆ.

ಪುಣೆ ಹಾಗೂ ಪಂಜಾಬ್: ಈ ವರ್ಷದ ಐಪಿಎಲ್‌ನಲ್ಲಿ ಅತ್ಯಂತ ದುರ್ಬಲ ತಂಡಗಳೆಂದರೆ ಕಿಂಗ್ಸ್ ಇಲೆವೆನ್ ಪಂಜಾಬ್ ಹಾಗೂ ರೈಸಿಂಗ್ ಪುಣೆ ಸೂಪರ್‌ಜಯಂಟ್ಸ್. 10 ಪಂದ್ಯಗಳಲ್ಲಿ ಕೇವಲ 6 ಅಂಕವನ್ನು ಗಳಿಸಿರುವ ಉಭಯ ತಂಡಗಳು ಟೂರ್ನಿಯಿಂದ ಹೊರಬೀಳುವ ಹಂತದಲ್ಲಿವೆ.

ಧೋನಿ ನೇತೃತ್ವದ ಪುಣೆ ತಂಡ ಉಳಿದ 4 ಪಂದ್ಯಗಳಲ್ಲಿ ನಾಲ್ಕೂ ಪಂದ್ಯಗಳನ್ನು ಜಯಿಸಿದರೂ ಪ್ಲೇ-ಆಫ್ ಸ್ಥಾನ ಸಿಗುವುದು ಗ್ಯಾರಂಟಿಯಿಲ್ಲ. ಪುಣೆ 14 ಅಂಕವನ್ನು ಗಳಿಸಿದರೆ, ಉಳಿದ ತಂಡಗಳ ಫಲಿತಾಂಶ ತನ್ನ ಪರವಾಗಿ ಬರುವುದನ್ನು ನಿರೀಕ್ಷಿಸಬೇಕಾಗುತ್ತದೆ. ಪುಣೆ ಮಂಗಳವಾರ ಹೈದರಾಬಾದ್ ತಂಡವನ್ನು ಎದುರಿಸಲಿದೆ. 2014ರ ಐಪಿಎಲ್‌ನಲ್ಲಿ ಫೈನಲ್‌ಗೆ ತಲುಪಿದ್ದ ಪಂಜಾಬ್ 2015ರಲ್ಲಿ ಕೊನೆಯ ಸ್ಥಾನಕ್ಕೆ ಕುಸಿದಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News