ನಾಲ್ಕು ಸಾವಿರ ರನ್ ಮೈಲುಗಲ್ಲು ತಲುಪಲು ರೈನಾ ಸಿದ್ಧತೆ
ಮುಂಬೈ, ಮೇ 10: ಗುಜರಾತ್ ಲಯನ್ಸ್ ತಂಡದ ನಾಯಕ ಸುರೇಶ್ ರೈನಾ ಐಪಿಎಲ್ ಇತಿಹಾಸದಲ್ಲಿ 4,000 ರನ್ ಮೈಲುಗಲ್ಲು ತಲುಪಿದ ಮೊದಲ ಆಟಗಾರ ಎನಿಸಿಕೊಳ್ಳಲು ಸಜ್ಜಾಗಿದ್ದಾರೆ.
ಉತ್ತರ ಪ್ರದೇಶದ ಎಡಗೈ ದಾಂಡಿಗ ರೈನಾ ಈ ವರ್ಷ ತನ್ನ ಎಂದಿನ ಫಾರ್ಮ್‌ನಲ್ಲಿಲ್ಲ. ರೈನಾ ಇನ್ನು 15 ರನ್ ಗಳಿಸಿದರೆ ಭರ್ತಿ ನಾಲ್ಕು ಸಾವಿರ ರನ್ ಗಳಿಸಲಿದ್ದಾರೆ. 143 ಪಂದ್ಯಗಳಲ್ಲಿ 3,985 ರನ್ ಗಳಿಸಿರುವ ರೈನಾ ಈ ವರ್ಷ ಹೊಸ ಫ್ರಾಂಚೈಸಿ ಗುಜರಾತ್ ಲಯನ್ಸ್‌ನ ಸಾರಥ್ಯವಹಿಸಿಕೊಂಡಿದ್ದಾರೆ.
ಚೆನ್ನೈ ಸೂಪರ್ ಕಿಂಗ್ಸ್ ಪರ 132 ಪಂದ್ಯಗಳನ್ನು ಆಡಿರುವ ರೈನಾ 1 ಶತಕ, 25 ಅರ್ಧಶತಕಗಳ ಸಹಿತ ಒಟ್ಟು 3,699 ರನ್ ಗಳಿಸಿದ್ದಾರೆ. ಈ ವರ್ಷ ಲಯನ್ಸ್ ಪರ 1 ಅರ್ಧಶತಕ ಸಹಿತ 286 ರನ್ ಗಳಿಸಿದ್ದಾರೆ.
ಮೊದಲ ಮಗುವಿನ ತಂದೆಯಾಗುವ ಖುಷಿಯಲ್ಲಿರುವ ರೈನಾ ಪತ್ನಿ ಪ್ರಿಯಾಂಕಾರನ್ನು ನೋಡಲು ಹಾಲೆಂಡ್‌ಗೆ ತೆರಳಿದ್ದಾರೆ. ಮೇ 14 ರಂದು ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಲಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಪಂದ್ಯದ ವೇಳೆ ಲಯನ್ಸ್ ತಂಡವನ್ನು ಸೇರಿಕೊಳ್ಳುವ ಸಾಧ್ಯತೆಯಿದೆ.
ಲಯನ್ಸ್ ತಂಡ ಕಾನ್ಪುರದಲ್ಲಿ ಮೇ 19 ಹಾಗೂ 21ರಂದು ಬೆನ್ನುಬೆನ್ನಿಗೆ ಪಂದ್ಯಗಳನ್ನು ಆಡಲಿದ್ದು, ತವರು ಮೈದಾನದಲ್ಲಿ ರೈನಾ ಸ್ಮರಣೀಯ ಇನಿಂಗ್ಸ್ ಆಡಲು ಉತ್ಸುಕರಾಗಿದ್ದಾರೆ. ಕಾನ್ಪುರದಲ್ಲಿ ಲಯನ್ಸ್ ಜಯ ಸಾಧಿಸಿದರೆ ಪ್ಲೇ-ಆಫ್ ಸ್ಥಾನ ಖಚಿತಪಡಿಸಲಿದೆ.