×
Ad

ಕೊಹ್ಲಿಗೆ ಏಕದಿನ ನಾಯಕತ್ವ ನೀಡಬೇಕು: ಗಂಗುಲಿ ಆಗ್ರಹ

Update: 2016-05-10 22:35 IST

ಹೊಸದಿಲ್ಲಿ, ಮೇ 10: ಭಾರತದ ಏಕದಿನ ಹಾಗೂ ಟ್ವೆಂಟಿ-20 ಕ್ರಿಕೆಟ್ ತಂಡದ ನಾಯಕನ ಸ್ಥಾನಕ್ಕೆ ವಿರಾಟ್ ಕೊಹ್ಲಿ ಸೂಕ್ತ ಅಭ್ಯರ್ಥಿ ಎಂದು ಹೇಳಿರುವ ಭಾರತದ ಮಾಜಿ ನಾಯಕ ಸೌರವ್ ಗಂಗುಲಿ, 2019ರಲ್ಲಿ ನಡೆಯಲಿರುವ ಐಸಿಸಿ ಏಕದಿನ ವಿಶ್ವಕಪ್‌ನಲ್ಲಿ ಹಾಲಿ ನಾಯಕ ಎಂಎಸ್ ಧೋನಿ ಭಾರತವನ್ನು ಮುನ್ನಡೆಸುವ ಬಗ್ಗೆ ಪ್ರಶ್ನೆ ಎತ್ತಿದ್ದಾರೆ.

 ‘‘ವಿಶ್ವದ ಪ್ರತಿಯೊಂದೂ ಕ್ರಿಕೆಟ್ ತಂಡ ಭವಿಷ್ಯದ ಬಗ್ಗೆ ಯೋಜನೆ ರೂಪಿಸುತ್ತಿವೆ. ಏಕದಿನ ವಿಶ್ವಕಪ್‌ಗೆ ಇನ್ನು ಮೂರ್ನಾಲ್ಕು ವರ್ಷ ಬಾಕಿ ಉಳಿದಿದ್ದು, ಅಲ್ಲಿಯ ತನಕ ಎಂಎಸ್ ಧೋನಿ ಭಾರತದ ನಾಯಕನಾಗಿಯೇ ಇರುತ್ತಾರೆಯೇ ಎಂಬ ಪ್ರಶ್ನೆಗೆ ಆಯ್ಕೆಗಾರರೇ ಉತ್ತರ ನೀಡಬೇಕು’’ ಎಂದು ‘ಇಂಡಿಯಾ ಟುಡೆ’ಗೆ ನೀಡಿದ ಸಂದರ್ಶನದಲ್ಲಿ ಗಂಗುಲಿ ಆಗ್ರಹಿಸಿದ್ದಾರೆ.

‘‘ಧೋನಿ ಕಳೆದ 9 ವರ್ಷಗಳಿಂದ ನಾಯಕನಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇದೊಂದು ದೀರ್ಘಾವಧಿ. ಅವರಿಗೆ ಇನ್ನೂ ನಾಲ್ಕು ವರ್ಷ ಮುಂದುವರಿಯಲು ಅವಕಾಶ ನೀಡಲಾಗುತ್ತದೆಯೇ? ಅವರು ಈಗಾಗಲೇ ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತಿಯಾಗಿದ್ದು, ಕೇವಲ ಏಕದಿನ ಹಾಗೂ ಟ್ವೆಂಟಿ-20 ಕ್ರಿಕೆಟ್‌ನಲ್ಲಿ ಮಾತ್ರ ಆಡುತ್ತಿದ್ದಾರೆ’’ ಎಂದು ಗಂಗುಲಿ ಹೇಳಿದ್ದಾರೆ.

‘‘ವಿರಾಟ್ ಕೊಹ್ಲಿ ಪ್ರತಿ ಸಲವೂ ಶ್ರೇಷ್ಠ ಪ್ರದರ್ಶನ ನೀಡುತ್ತಾರೆ. ಸ್ಥಿರ ಪ್ರದರ್ಶನ ನೀಡುವುದರಲ್ಲಿ ಅವರು ವಿಶ್ವದಲ್ಲೇ ಶ್ರೇಷ್ಠರು. ಅವರ ಮಾನಸಿಕ ಶಕ್ತಿ ಅದ್ಭುತ. ಟೆಸ್ಟ್ ನಾಯಕನಾಗಿ ಅವರ ದಾಖಲೆಯೂ ಅತ್ಯುತ್ತಮವಾಗಿದೆ. ಇತ್ತೀಚೆಗೆ ಕೊನೆಗೊಂಡ ಟ್ವೆಂಟಿ-20 ವಿಶ್ವಕಪ್‌ನಲ್ಲಿ ಸರಣಿ ಶ್ರೇಷ್ಠ ಗೌರವಕ್ಕೆ ಪಾತ್ರವಾಗಿರುವ ಕೊಹ್ಲಿ, ಪ್ರಸ್ತುತ ನಡೆಯುತ್ತಿರುವ ಐಪಿಎಲ್ ಟೂರ್ನಿಯಲ್ಲೂ ಗರಿಷ್ಠ ಸ್ಕೋರರ್ ಆಗಿದ್ದಾರೆ’’ ಎಂದು ಗಂಗುಲಿ ಶ್ಲಾಘಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News