ರಿಯೋ ಗೇಮ್ಸ್‌ಗೆ ಟ್ರಯಲ್ಸ್ ನಡೆಸಬೇಕು: ಸುಶೀಲ್ ಕುಮಾರ್
ಹೊಸದಿಲ್ಲಿ, ಮೇ 10: ಮುಂಬರುವ ಒಲಿಂಪಿಕ್ಸ್‌ನಲ್ಲಿ ಪುರುಷರ 74 ಕೆ.ಜಿ. ವಿಭಾಗದಲ್ಲಿ ಭಾರತವನ್ನು ಪ್ರತಿನಿಧಿಸಲು ನರಸಿಂಗ್ ಯಾದವ್ ಸಜ್ಜಾಗಿದ್ದಾರೆ. ಮತ್ತೊಂದೆಡೆ, ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸಲು ಒಲವು ವ್ಯಕ್ತಪಡಿಸಿರುವ ಹಿರಿಯ ಕುಸ್ತಿಪಟು ಸುಶೀಲ್ ಕುಮಾರ್, ರಿಯೋ ಗೇಮ್ಸ್‌ಗೆ ನಮ್ಮಿಬ್ಬರಲ್ಲಿ ಯಾರು ಶ್ರೇಷ್ಠರೆಂದು ಆಯ್ಕೆ ಮಾಡಲು ಟ್ರಯಲ್ಸ್ ನಡೆಸಬೇಕು ಎಂದು ಆಗ್ರಹಿಸಿದ್ದಾರೆ.
ಸುಶೀಲ್ ಹಾಗೂ ನರಸಿಂಗ್ ನಡುವೆ ಪುರುಷರ 74 ಕೆ.ಜಿ. ಫ್ರೀಸ್ಟೈಲ್ ವಿಭಾಗದಲ್ಲಿ ಟ್ರಯಲ್ಸ್ ನಡೆಸಬೇಕೇ, ಬೇಡವೇ ಎಂಬ ಕುರಿತಂತೆ ಭಾರತದ ಕುಸ್ತಿ ಫೆಡರೇಶನ್(ಡಬ್ಲುಎಫ್‌ಐ) ಇನ್ನಷ್ಟೇ ಅಂತಿಮ ನಿರ್ಧಾರ ಕೈಗೊಳ್ಳಬೇಕಾಗಿದೆ.
‘‘ನಾನು ಟ್ರಯಲ್ಸ್ ನಡೆಸಬೇಕೆಂದು ಆಗ್ರಹಿಸುವೆ. ನನ್ನ ಈ ಹಿಂದಿನ ಉತ್ತಮ ದಾಖಲೆಯನ್ನು ಪರಿಗಣಿಸಿ ರಿಯೋಗೆ ಕಳುಹಿಸಿಕೊಡಿ ಎಂದು ಹೇಳಲಾರೆ. ನಾನು ಹಾಗೂ ನರಸಿಂಗ್ ನಡುವೆ ಯಾರು ದೇಶವನ್ನು ಪ್ರತಿನಿಧಿಸಲು ಅರ್ಹರೆಂದು ನಿರ್ಧರಿಸಬೇಕು ಎಂದು ಕೇಳಿಕೊಳ್ಳುತ್ತಿರುವೆ. ಒಲಿಂಪಿಕ್ಸ್ ಸ್ಥಾನ ದೇಶಕ್ಕಾಗಿಯೇ ಇದೆಯೇ ಹೊರತು ಓರ್ವ ವ್ಯಕ್ತಿಗಾಗಿ ಅಲ್ಲ. ಇಬ್ಬರು ಪ್ರಬಲ ಸ್ಪರ್ಧಿಗಳಿರುವಾಗ ಟ್ರಯಲ್ಸ್ ನಡೆಸುವುದೇ ಉತ್ತಮ. ಎಲ್ಲ ನಿಯಮವನ್ನು ತಪ್ಪದೇ ಅನುಸರಿಸಬೇಕು ಎಂದು ಸುಶೀಲ್ ಹೇಳಿದರು.
ವಿಶ್ವದ ಹಾಗೂ ಒಲಿಂಪಿಕ್ಸ್‌ನ ಹಾಲಿ ಚಾಂಪಿಯನ್ ಜೋರ್ಡನ್ ರಿಯೋ ಗೇಮ್ಸ್‌ನಲ್ಲಿ ಅಮೆರಿಕವನ್ನು ಪ್ರತಿನಿಧಿಸಲು ಟ್ರಯಲ್ಸ್‌ಗೆ ಒಳಪಡಲಿದ್ದಾರೆ. ಟ್ರಯಲ್ಸ್ ಎಲ್ಲ ಕಡೆಯೂ ನಡೆಯುತ್ತದೆ. ನನಗೆ ಒಲಿಂಪಿಕ್ಸ್‌ಗೆ ತಯಾರಿ ನಡೆಸಲು ಭಾರತದ ಕ್ರೀಡಾ ಪ್ರಾಧಿಕಾರ ಹಾಗೂ ಸರಕಾರ ಸಾಕಷ್ಟು ಹಣವನ್ನು ವ್ಯಯಿಸಿದೆ. ಒಲಿಂಪಿಕ್ಸ್‌ಗೆ ಉತ್ತಮ ತಯಾರಿ ನಡೆಸಿದ್ದು, ರಿಯೋ ಗೇಮ್ಸ್‌ಗೆ ತೆರಳುವ ವಿಶ್ವಾಸದಲ್ಲಿದ್ದೇನೆ ಎಂದು ಸುಶೀಲ್ ಹೇಳಿದ್ದಾರೆ.