×
Ad

ಇಂಗ್ಲೆಂಡ್ ಮಹಿಳಾ ತಂಡದ ನಾಯಕಿ ಚಾರ್ಲೊಟ್ ಎಡ್ವರ್ಡ್ ನಿವೃತ್ತಿ

Update: 2016-05-11 23:04 IST

 ಲಂಡನ್, ಮೇ 11: ಇಂಗ್ಲೆಂಡ್ ಮಹಿಳಾ ಕ್ರಿಕೆಟ್ ತಂಡದ ನಾಯಕಿ ಚಾರ್ಲೊಟ್ ಎಡ್ವರ್ಡ್ ಬುಧವಾರ ತನ್ನ 20 ವರ್ಷಗಳ ಯಶಸ್ವಿ ವೃತ್ತಿಜೀವನಕ್ಕೆ ತೆರೆ ಎಳೆದಿದ್ದಾರೆ.

36ರ ಹರೆಯದ ಎಡ್ವರ್ಡ್ ಇಂಗ್ಲೆಂಡ್ ಮಹಿಳಾ ತಂಡ ಆ್ಯಶಸ್, ವಿಶ್ವಕಪ್ ಹಾಗೂ ಐಸಿಸಿ ಟ್ವೆಂಟಿ-20 ವಿಶ್ವಕಪ್ ಟ್ರೋಫಿ ಗೆಲ್ಲುವಲ್ಲಿ ಪ್ರಮುಖ ಪಾತ್ರವಹಿಸಿದ್ದು, ತನ್ನ ದೇಶದ ಪರ 309 ಪಂದ್ಯಗಳನ್ನು ಆಡುವ ಮೂಲಕ ವಿಶ್ವ ದಾಖಲೆಯನ್ನು ನಿರ್ಮಿಸಿದ್ದರು. ಎಲ್ಲ ಮೂರು ಪ್ರಕಾರದ ಪಂದ್ಯಗಳಲ್ಲಿ 10,000ಕ್ಕೂ ಅಧಿಕ ರನ್ ಕಲೆ ಹಾಕಿದ್ದಾರೆ.

ನಾನು ಇಂಗ್ಲೆಂಡ್ ಪರವಾಗಿ ಆಡಲು ಎಷ್ಟೊಂದು ಇಷ್ಟಪಡುತ್ತಿದ್ದೆ ಎಂದು ಎಲ್ಲರಿಗೂ ಗೊತ್ತಿದೆ. ಇದೀಗ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿಯಾಗುವುದು ಅತ್ಯಂತ ಕಠಿಣ ನಿರ್ಧಾರವಾಗಿದೆ. ಇಂಗ್ಲೆಂಡ್‌ನ ಕೋಚ್(ಮಾರ್ಕ್ ರಾಬಿನ್‌ಸನ್) ಹಾಗೂ ಇಂಗ್ಲೆಂಡ್ ಮಹಿಳಾ ಕ್ರಿಕೆಟ್‌ನ ನಿರ್ದೇಶಕ ಕ್ಲಾರ್ ಕಾನ್ನರ್ ಅವರೊಂದಿಗೆ ಚರ್ಚಿಸಿದ ನಂತರ ನಿವೃತ್ತಿಯ ನಿರ್ಧಾರಕ್ಕೆ ಬಂದಿದ್ದೇನೆ. ನಾನು 20 ವರ್ಷಗಳ ಕಾಲ ಇಂಗ್ಲೆಂಡ್ ತಂಡದಲ್ಲಿ ಆಡಿದ್ದೇನೆ. ಆಟಗಾರ್ತಿ ಹಾಗೂ ನಾಯಕಿಯಾಗಿ ದೊಡ್ಡ ಕೊಡುಗೆ ನೀಡಿರುವ ಹೆಮ್ಮೆ ನನಗಿದೆ ಎಂದು ಎಡ್ವರ್ಡ್ ಹೇಳಿದ್ದಾರೆ.

ಎಡ್ವರ್ಡ್ಸ್ 220 ಪಂದ್ಯಗಳಲ್ಲಿ ಇಂಗ್ಲೆಂಡ್ ತಂಡವನ್ನು ನಾಯಕಿಯಾಗಿ ಮುನ್ನಡೆಸಿದ್ದಾರೆ. 2008, 2013 ಹಾಗೂ 2014ರಲ್ಲಿ ಆಸ್ಟ್ರೇಲಿಯ ವಿರುದ್ಧ ಪ್ರತಿಷ್ಠಿತ ಆ್ಯಶಸ್ ಸರಣಿ ಜಯಿಸಿದ್ದು, 2009ರಲ್ಲಿ ವಿಶ್ವಕಪ್ ಹಾಗೂ ಟ್ವೆಂಟಿ-20 ವಿಶ್ವಕಪ್‌ನ್ನು ಗೆದ್ದುಕೊಂಡಿರುವುದು ಎಡ್ವರ್ಡ್ಸ್ ನಾಯಕತ್ವದ ಹೈಲೈಟ್ಸ್ ಆಗಿದೆ.

ಎಡ್ವರ್ಡ್ಸ್ 2008ರಲ್ಲಿ ಐಸಿಸಿ ವರ್ಷದ ಮಹಿಳಾ ಆಟಗಾರ್ತಿ ಹಾಗೂ 2014ರಲ್ಲಿ ವರ್ಷದ ವಿಸ್ಡನ್ ಕ್ರಿಕೆಟರ್ ಆಗಿ ಆಯ್ಕೆಯಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News