×
Ad

ಮುಸ್ತಫಿಝುರ್ರಹ್ಮಾನ್ ಆಗಮನದ ವಿಶ್ವಾಸದಲ್ಲಿ ಸಸೆಕ್ಸ್

Update: 2016-05-11 23:26 IST

ಲಂಡನ್, ಮೇ 11: ಬಾಂಗ್ಲಾದೇಶದ ಯುವ ವೇಗದ ಬೌಲರ್ ಮುಸ್ತಫಿಝುರ್ರಹ್ಮಾನ್ ಈ ಋತುವಿನಲ್ಲಿ ಸಸೆಕ್ಸ್ ತಂಡದಲ್ಲಿ ಆಡುವ ವಿಶ್ವಾಸ ನಮಗಿದೆ ಎಂದು ಸಸೆಕ್ಸ್ ತಂಡದ ಕೋಚ್ ಮಾರ್ಕ್ ಡೇವಿಸ್ ಹೇಳಿದ್ದಾರೆ.

ನಾವು ಈ ಕ್ಷಣದಲ್ಲಿ ಏನನ್ನೂ ದೃಢಪಡಿಸಲಾರೆವು. ಆದರೆ, ರಹ್ಮಾನ್ ತಂಡವನ್ನು ಸೇರಿಕೊಳ್ಳಲಿದ್ದಾರೆಂಬ ವಿಶ್ವಾಸ ನಮಗಿದೆ. ಈ ಸಂದರ್ಭದಲ್ಲಿ ಅವರು ವಿಶ್ವದ ಶ್ರೇಷ್ಠ ಬೌಲರ್. ಅವರ ಆಗಮನದ ನಿರೀಕ್ಷೆಯಲ್ಲಿದ್ದೇವೆ. ಮುಂದಿನ ಕೆಲವೇ ವಾರದಲ್ಲಿ ಏನಾಗುತ್ತದೆಂದು ಗೊತ್ತಾಗುತ್ತದೆ ಎಂದು ಡೇವಿಸ್ ಹೇಳಿದ್ದಾರೆ.

ಮುಸ್ತಫಿಝುರ್ರಹ್ಮಾನ್ ನಮ್ಮ ತಂಡದೊಂದಿಗೆ ಸಹಿ ಹಾಕಿರುವ ಎರಡನೆ ವಿದೇಶಿ ಆಟಗಾರನಾಗಿದ್ದು, ಅವರು 2016ರ ಋತುವಿನ ನಾಟ್‌ವೆಸ್ಟ್ ಟ್ವೆಂಟಿ-20 ಬ್ಲಾಸ್ಟ್ ಹಾಗೂ ರಾಯಲ್ ಲಂಡನ್ ಏಕದಿನ ಕಪ್‌ನಲ್ಲಿ ಭಾಗವಹಿಸುತ್ತಾರೆ ಎಂದು ಸಸೆಕ್ಸ್ ಕೌಂಟಿ ತಂಡ ಮಾರ್ಚ್‌ನಲ್ಲಿ ಘೋಷಣೆ ಮಾಡಿತ್ತು.

ಸಸೆಕ್ಸ್ ತಂಡದ ಘೋಷಣೆಯ ಬೆನ್ನಿಗೆ ಮುಸ್ತಫಿಝುರ್ರಹ್ಮಾನ್ ಗಾಯದ ಸಮಸ್ಯೆಗೆ ಸಿಲುಕಿದ್ದು, ಬಾಂಗ್ಲಾದೇಶ ಆಡಿದ್ದ ಏಶ್ಯಾಕಪ್ ಹಾಗೂ ಟ್ವೆಂಟಿ-20 ಟೂರ್ನಿಯ ಹೆಚ್ಚಿನ ಪಂದ್ಯಗಳಿಂದ ಹೊರಗುಳಿದಿದ್ದರು. ಇದೀಗ ಅವರು ಐಪಿಎಲ್ ಟೂರ್ನಿಯಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡದಲ್ಲಿ ಆಡುತ್ತಿದ್ದು, 6.18ರ ಇಕಾನಮಿರೇಟ್‌ನಲ್ಲಿ ಒಟ್ಟು 13 ವಿಕೆಟ್‌ಗಳನ್ನು ಉರುಳಿಸಿದ್ದಾರೆ. ಸನ್‌ರೈಸರ್ಸ್ ತಂಡ ಐಪಿಎಲ್‌ನ ನಾಕೌಟ್ ಹಂತದಲ್ಲಿ ಆಡುವ ಸಾಧ್ಯತೆಯಿರುವ ಕಾರಣ ಮುಸ್ತಫಿಝುರ್ರಹ್ಮಾನ್ ಸಸೆಕ್ಸ್ ತಂಡವನ್ನು ತಡವಾಗಿ ಸೇರಿಕೊಳ್ಳಬಹುದು. ಅವರು ಮೇ ಅಂತ್ಯದ ವರೆಗೆ ಭಾರತದಲ್ಲೇ ಉಳಿಯಬೇಕಾಗುತ್ತದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News