×
Ad

ಬಿಸಿಸಿಐಗೆ ಅನುರಾಗ್ ಅಧ್ಯಕ್ಷ, ಶುಕ್ಲಾ ಕಾರ್ಯದರ್ಶಿ?

Update: 2016-05-11 23:30 IST

ಮುಂಬೈ, ಮೇ 11: ಶಶಾಂಕ್ ಮನೋಹರ್ ದಿಢೀರ್ ರಾಜೀನಾಮೆಯಿಂದ ತೆರವಾಗಿರುವ ಬಿಸಿಸಿಐ ಅಧ್ಯಕ್ಷ ಸ್ಥಾನಕ್ಕೆ ಅನುರಾಗ್ ಠಾಕೂರ್ ಪ್ರಬಲ ಅಭ್ಯರ್ಥಿಯಾಗಿ ಹೊರಹೊಮ್ಮಿದ್ದಾರೆ ಎಂದು ಕ್ರಿಕೆಟ್ ಮಂಡಳಿಯ ಉನ್ನತಾಧಿಕಾರಿಗಳು ಆಂಗ್ಲಪತ್ರಿಕೆಗೆ ತಿಳಿಸಿದ್ದಾರೆ.

ಲೋಧಾ ಸಮಿತಿಯ ಶಿಫಾರಸುಗಳನ್ನು ಜಾರಿಗೊಳಿಸಬೇಕೆಂದು ಸುಪ್ರೀಂಕೋರ್ಟ್‌ನಿಂದ ತೀವ್ರ ಒತ್ತಡವನ್ನು ಎದುರಿಸುತ್ತಿರುವ ಬಿಸಿಸಿಐ ಮಂಗಳವಾರ ಮನೋಹರ್ ರಾಜೀನಾಮೆಯಿಂದ ಕಂಗಾಲಾಗಿತ್ತು. ಇಕ್ಕಟ್ಟಿನ ಪರಿಸ್ಥಿತಿಯಲ್ಲಿ ಕಳೆದ ವರ್ಷ ಬಿಸಿಸಿಐ ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದ ಠಾಕೂರ್ ಅವರೇ ಅಧ್ಯಕ್ಷ ಸ್ಥಾನದ ಜವಾಬ್ದಾರಿ ವಹಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ.

41ರಹರೆಯದ ಬಿಜೆಪಿ ಸಂಸದ ಠಾಕೂರ್ ಬಿಸಿಸಿಐ ಅಧ್ಯಕ್ಷ ಹುದ್ದೆ ವಹಿಸಿಕೊಳ್ಳಲಿರುವ ಯುವ ಅಭ್ಯರ್ಥಿ ಎನಿಸಿಕೊಳ್ಳಲಿದ್ದಾರೆ. ಕ್ರಿಕೆಟ್ ಮಂಡಳಿಯ ಹಿರಿಯ ಸದಸ್ಯ ರಾಜೀವ್ ಶುಕ್ಲಾ ಕಾರ್ಯದರ್ಶಿ ಹುದ್ದೆಗೆ ಸ್ಪರ್ಧಿಸಲು ಒಪ್ಪಿದ್ದಾರೆ.

ಪೂರ್ವ ವಲಯದಲ್ಲಿ ಪೂರ್ಣ ಸದಸ್ಯತ್ವವಿರುವ ಬಂಗಾಳ, ಜಾರ್ಖಂಡ್, ಒಡಿಶಾ, ತ್ರಿಪುರಾ, ಅಸ್ಸಾಂ ಹಾಗೂ ನ್ಯಾಶನಲ್ ಕ್ರಿಕೆಟ್ ಕ್ಲಬ್(ಕೋಲ್ಕತಾ)ಗಳು ಶಶಾಂಕ್ ಮನೋಹರ್ ರಾಜೀನಾಮೆಯಿಂದ ತೆರವಾಗಿರುವ ಬಿಸಿಸಿಐ ಅಧ್ಯಕ್ಷ ಸ್ಥಾನಕ್ಕೆ ಸೂಕ್ತ ಅಭ್ಯರ್ಥಿಗಳನ್ನು ನಾಮನಿರ್ದೇಶನ ಮಾಡುವ ಹಕ್ಕನ್ನು ಹೊಂದಿವೆ. ಏಳು ತಿಂಗಳ ಹಿಂದೆ ಮುಂಬೈನಲ್ಲಿ ನಡೆದಿದ್ದ ವಾರ್ಷಿಕ ಮಹಾಸಭೆ(ಎಜಿಎಂ)ಯಲ್ಲಿ ದಾಲ್ಮಿಯಾ ಹಠಾತ್ ನಿಧನದಿಂದ ತೆರವಾದ ಬಿಸಿಸಿಐ ಅಧ್ಯಕ್ಷ ಸ್ಥಾನಕ್ಕೆ ಮನೋಹರ್ ಅವರನ್ನು ಉತ್ತರ ವಲಯದ ಸದಸ್ಯರು ಅವಿರೋಧವಾಗಿ ಆಯ್ಕೆ ಮಾಡಿದ್ದರು.

ಮಾ, 2, 2015ರಲ್ಲಿ ನಡೆದ ಎಜಿಎಂನಲ್ಲಿ ದಾಲ್ಮಿಯಾ ಎರಡನೆ ಬಾರಿ ಬಿಸಿಸಿಐ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಐಸಿಸಿ ಅಧ್ಯಕ್ಷ ಸ್ಥಾನ ಆಕಾಂಕ್ಷಿಯಾಗಿರುವ ಮನೋಹರ್ ಮೇ 10, 2016ರಂದು ಬಿಸಿಸಿಐ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಹಿನ್ನೆಲೆಯಲ್ಲಿ ಬಿಸಿಸಿಐ 16 ತಿಂಗಳಲ್ಲಿ ಮೂರನೆ ಬಾರಿ ಅಧ್ಯಕ್ಷರನ್ನು ಆಯ್ಕೆ ಮಾಡಬೇಕಾದ ಪರಿಸ್ಥಿತಿ ಎದುರಿಸುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News