ಪಂಜಾಬ್ ಕೋಚ್ ಬಂಗಾರ್ ವಿರುದ್ಧ ಸಿಟ್ಟಿಗೆದ್ದ ಪ್ರೀತಿ ಝಿಂಟಾ
ಮೊಹಾಲಿ, ಮೇ 12: ಈಗ ನಡೆಯುತ್ತಿರುವ 9ನೆ ಆವೃತ್ತಿಯ ಐಪಿಎಲ್‌ನಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ 10 ಪಂದ್ಯಗಳ ಪೈಕಿ ಕೇವಲ 3ರಲ್ಲಿ ಜಯ ಸಾಧಿಸಿದ್ದು ಪ್ಲೇ-ಆಫ್ ಆಸೆಯನ್ನು ಕೈಬಿಟ್ಟಿದೆ. ತಂಡದ ಕಳಪೆ ಪ್ರದರ್ಶನದಿಂದ ಬೇಸತ್ತಿರುವ ತಂಡದ ಸಹ ಮಾಲಕಿ ಪ್ರೀತಿ ಝಿಂಟಾ ಕೋಚ್ ಸಂಜಯ್ ಬಂಗಾರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸೋಮವಾರ ಮೊಹಾಲಿಯಲ್ಲಿ ನಡೆದ ಆರ್‌ಸಿಬಿ ವಿರುದ್ಧ ಪಂದ್ಯದಲ್ಲಿ ಪಂಜಾಬ್ ತಂಡ ನಾಯಕ ಮುರಳಿ ವಿಜಯ್ ಬಾರಿಸಿದ 89 ರನ್ ಹೊರತಾಗಿಯೂ ಕೇವಲ 1 ರನ್ ಅಂತರದಿಂದ ಸೋತಿತ್ತು. ಪಂಜಾಬ್ ತಂಡದ ಬ್ಯಾಟಿಂಗ್ ಕ್ರಮಾಂಕದ ಆಯ್ಕೆಯಲ್ಲಿ ಸಂಜಯ್ ತಪ್ಪು ಮಾಡಿರುವುದು ಪ್ರೀತಿಯ ಸಿಟ್ಟಿಗೆ ಕಾರಣವಾಗಿದೆ.
ಆರ್‌ಸಿಬಿ ವಿರುದ್ಧದ ಪಂದ್ಯದಲ್ಲಿ ಅಕ್ಷರ್ ಪಟೇಲ್‌ಗಿಂತ ಮುಂಚಿತವಾಗಿ ಫರ್ಹಾನ್ ಬೆಹರ್ದಿನ್‌ರನ್ನು ಬ್ಯಾಟಿಂಗ್‌ಗೆ ಕಳುಹಿಸಿರುವ ಬಂಗಾರ್ ನಿರ್ಧಾರ ಪ್ರೀತಿಯ ಅಸಮಾಧಾನಕ್ಕೆ ಕಾರಣವಾಗಿದೆ. ಆರ್‌ಸಿಬಿ ವಿರುದ್ಧ ಪಂದ್ಯದಲ್ಲಿ 7 ಎಸೆತಗಳನ್ನು ಎದುರಿಸಿದ್ದ ಬೆಹರ್ದಿನ್ ಔಟಾಗದೆ 9 ರನ್ ಗಳಿಸಿದ್ದರು. ಪಟೇಲ್‌ಗೆ ಬ್ಯಾಟಿಂಗ್ ಮಾಡಲು ಅವಕಾಶವೇ ಸಿಕ್ಕಿರಲಿಲ್ಲ.
ಗುಜರಾತ್ ಆಲ್‌ರೌಂಡರ್ ಪಟೇಲ್ ಪಂದ್ಯಕ್ಕೆ ಅಂತ್ಯ ಹಾಡುವುದರಲ್ಲಿ ನಿಪುಣರು ಎನ್ನುವುದು ಪ್ರೀತಿಯ ವಾದವಾಗಿದೆ. ಭಾರತದ ಮಾಜಿ ಆಟಗಾರ ಬಂಗಾರ್ 2002 ರಿಂದ 2004ರ ತನಕ ಭಾರತದ ಪರ 12 ಟೆಸ್ಟ್, 15 ಏಕದಿನ ಪಂದ್ಯಗಳನ್ನು ಆಡಿದ್ದಾರೆ.