ಐಸಿಸಿ ಕ್ರಿಕೆಟ್ ಸಮಿತಿ ಮುಖ್ಯಸ್ಥರಾಗಿ ಅನಿಲ್ ಕುಂಬ್ಳೆ ಮರು ಆಯ್ಕೆ
ರಾಹುಲ್ ದ್ರಾವಿಡ್ ಉನ್ನತ ಸಮಿತಿಯ ಸದಸ್ಯ
ದುಬೈ, ಮೇ 13: ಭಾರತದ ಮಾಜಿ ನಾಯಕ ಅನಿಲ್ ಕುಂಬ್ಳೆ ಐಸಿಸಿ ಕ್ರಿಕೆಟ್ ಸಮಿತಿಯ ಮುಖ್ಯಸ್ಥರಾಗಿ ಎರಡನೆ ಅವಧಿಗೆ ಮರು ಆಯ್ಕೆಯಾಗಿದ್ದಾರೆ. ಕುಂಬ್ಳೆಯವರ ಒಂದುಕಾಲದ ಸಹ ಆಟಗಾರ ಹಾಗೂ ಮಹಾಗೋಡೆ ಖ್ಯಾತಿಯ ರಾಹುಲ್ ದ್ರಾವಿಡ್ ಉನ್ನತ ಸಮಿತಿಯ ಸದಸ್ಯರಾಗಿ ಆಯ್ಕೆಯಾಗಿದ್ದಾರೆ.
ಭಾರತದ ಪರ ಗರಿಷ್ಠ ವಿಕೆಟ್ ಉರುಳಿಸಿ ಸಾರ್ವಕಾಲಿಕ ಶ್ರೇಷ್ಠ ಬೌಲರ್ ಆಗಿರುವ ಕುಂಬ್ಳೆ 2012ರಲ್ಲಿ ಮೊದಲ ಬಾರಿ ಐಸಿಸಿ ಕ್ರಿಕೆಟ್ ಸಮಿತಿಗೆ ಚೇರ್‌ಮನ್ ಆಗಿ ಆಯ್ಕೆಯಾಗಿದ್ದರು. ಶುಕ್ರವಾರ ಮರು ಆಯ್ಕೆಯಾಗಿರುವ ಕುಂಬ್ಳೆ 2018ರ ತನಕ ಅಧ್ಯಕ್ಷರಾಗಿ ಮುಂದುವರಿಯಲಿದ್ದಾರೆ.
ಇದೇ ವೇಳೆ, ಭಾರತದ ಮಾಜಿ ನಾಯಕ ದ್ರಾವಿಡ್ ಹಾಗೂ ಶ್ರೀಲಂಕಾದ ಮಾಜಿ ನಾಯಕ ಮಹೇಲ ಜಯವರ್ಧನೆ ಐಸಿಸಿ ಕ್ರಿಕೆಟ್ ಸಮಿತಿಗೆ ಆಯ್ಕೆಯಾಗಿದ್ದಾರೆ. ದ್ರಾವಿಡ್ ಹಾಗೂ ಜಯವರ್ಧನೆ 1996 ರಿಂದ 2015ರ ತನಕ 1,161 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ. ಈ ಇಬ್ಬರು ಮೂರು ವರ್ಷದ ಅವಧಿಗೆ ಐಸಿಸಿ ಕ್ರಿಕೆಟ್ ಸಮಿತಿಯ ಉನ್ನತ ಸಮಿತಿಯ ಸದಸ್ಯರಾಗಿ ಆಯ್ಕೆಯಾಗಿದ್ದಾರೆ.
ಸ್ಕಾಟ್ಲೆಂಡ್‌ನಲ್ಲಿ ಐಸಿಸಿ ವಾರ್ಷಿಕ ಸಮ್ಮೇಳನ ನಡೆಯುವ ಮೂರು ವಾರಗಳ ಮುಂಚಿತವಾಗಿ ಮೇ 31 ಹಾಗೂ ಜೂ.1 ರಂದು ಲಾರ್ಡ್ಸ್‌ನಲ್ಲಿ ನಡೆಯಲಿರುವ ಮೊದಲಸಭೆಯಲ್ಲಿ ದ್ರಾವಿಡ್, ಜಯವರ್ಧನೆ ಹಾಜರಾಗಲಿದ್ದಾರೆ.
ದ್ರಾವಿಡ್ ಅವರು ಶ್ರೀಲಂಕಾ ಮಾಜಿ ನಾಯಕ ಕುಮಾರ ಸಂಗಕ್ಕರ ಅವರಿಂದ ತೆರವಾದ ಸ್ಥಾನವನ್ನು ತುಂಬಿದರೆ, ಜಯವರ್ಧನೆ ಆಸ್ಟ್ರೇಲಿಯದ ಮಾಜಿ ನಾಯಕ ಮಾರ್ಕ್ ಟೇಲರ್ ಸ್ಥಾನಕ್ಕೆ ಆಯ್ಕೆಯಾಗಿದ್ದಾರೆ. ಸಂಗಕ್ಕರ ಹಾಗೂ ಟೇಲರ್ ಮೂರು ವರ್ಷಗಳ ಅಧಿಕಾರವಧಿಯನ್ನು ಪೂರೈಸಿದ್ದಾರೆ.
ರಾಹುಲ್ ದ್ರಾವಿಡ್‌ರ ಬಾಕಿ ವೇತನ ಪಾವತಿಸಿದ ಬಿಸಿಸಿಐ
ಹೊಸದಿಲ್ಲಿ, ಮೇ 13: ಭಾರತದ ಅಂಡರ್-19 ಹಾಗೂ ‘ಎ’ ತಂಡದ ಕೋಚ್ ಆಗಿದ್ದ ಮಾಜಿ ನಾಯಕ ರಾಹುಲ್ ದ್ರಾವಿಡ್‌ಗೆ ನೀಡಬೇಕಾಗಿದ್ದ ವೇತನ ಬಾಕಿ 1.30 ಕೋಟಿ ರೂ. ಪಾವತಿಸಲಾಗಿದೆ ಎಂದು ಬಿಸಿಸಿಐ ತಿಳಿಸಿದೆ.
ಕೋಚ್ ಆಗಿ ಕಾರ್ಯನಿರ್ವಹಿಸಿರುವ ದ್ರಾವಿಡ್‌ಗೆ 2.61 ಕೋಟಿ ರೂ. ಪಾವತಿಸಬೇಕಾಗಿತ್ತು. ಮಾರ್ಚ್‌ನಲ್ಲಿ ಮೊದಲ ಕಂತಿನ ವೇತನವನ್ನು ನೀಡಲಾಗಿದ್ದು, ಇದೀಗ ಪೂರ್ಣ ವೇತನವನ್ನು ನೀಡಲಾಗಿದೆ. ಮಾಜಿ ನಾಯಕ ಸುನೀಲ್ ಗವಾಸ್ಕರ್‌ಗೆ ವೀಕ್ಷಕವಿವರಣೆಗಾಗಿ ಜನವರಿ-ಮಾರ್ಚ್‌ನಲ್ಲಿ ನೀಡಬೇಕಾದ 89.75 ಲಕ್ಷ ರೂ., ಎಲ್. ಶಿವರಾಮಕೃಷ್ಣನ್‌ಗೆ 26.12 ಲಕ್ಷ ರೂ. ಪಾವತಿಸಲಾಗಿದೆ ಎಂದು ಬಿಸಿಸಿಐ ಹೇಳಿದೆ. ದೇಶೀಯ ಟೂರ್ನಿಗಳನ್ನು, ಶಿಬಿರಗಳನ್ನು ಆಯೋಜಿಸಿದ್ದ ವಿವಿಧ ರಾಜ್ಯ ಕ್ರಿಕೆಟ್ ಸಂಸ್ಥೆಗಳಿಗೂ ಬಿಸಿಸಿಐ ಹಣ ಬಿಡುಗಡೆ ಮಾಡಿದೆ.