ಕೋಲ್ಕತಾಕ್ಕೆ ಇಂದು ಪುಣೆ ಎದುರಾಳಿ
ಕೋಲ್ಕತಾ, ಮೇ 13: ಪ್ಲೇ-ಆಫ್ ಸ್ಪರ್ಧೆಯಿಂದ ಹೊರಗುಳಿದಿರುವ ರೈಸಿಂಗ್ ಪುಣೆ ಸೂಪರ್ ಜಯಂಟ್ಸ್ ಶನಿವಾರ ಇಲ್ಲಿ ನಡೆಯಲಿರುವ ಐಪಿಎಲ್ ಪಂದ್ಯದಲ್ಲಿ ಕೋಲ್ಕತಾ ನೈಟ್ ರೈಡರ್ಸ್ ತಂಡವನ್ನು ಎದುರಿಸಲಿದೆ.
ಕಳೆದ ಪಂದ್ಯದಲ್ಲಿ ಹೈದರಾಬಾದ್ ವಿರುದ್ಧ ಸೋತಿರುವ ಎಂಎಸ್ ಧೋನಿ ನೇತೃತ್ವದ ಪುಣೆ 9ನೆ ಆವೃತ್ತಿಯ ಐಪಿಎಲ್‌ನಿಂದ ನಿರ್ಗಮಿಸುತ್ತಿರುವ ಮೊದಲ ತಂಡವೆನಿಸಿಕೊಂಡಿದೆ. ಪುಣೆ ತಂಡಕ್ಕೆ ಇನ್ನು ಕೇವಲ 3 ಪಂದ್ಯ ಆಡಲು ಬಾಕಿಯಿದೆ. ಮತ್ತೊಂದೆಡೆ ಕೋಲ್ಕತಾ ತಂಡ ಐದು ದಿನಗಳ ವಿಶ್ರಾಂತಿಯ ಬಳಿಕ ತವರು ನೆಲದಲ್ಲಿ ಪುಣೆ ವಿರುದ್ಧ ಆಡಲು ಸಜ್ಜಾಗಿದೆ.
ಈ ವರ್ಷದ ಐಪಿಎಲ್‌ನಲ್ಲಿ ಅಂತಿಮ ನಾಲ್ಕರ ಘಟ್ಟಕ್ಕೇರುವ ನೆಚ್ಚಿನ ತಂಡವಾಗಿರುವ ಕೋಲ್ಕತಾ ಕಳೆದ ಪಂದ್ಯದಲ್ಲಿ ಗುಜರಾತ್‌ನ ವಿರುದ್ಧ ಸೋಲುವ ಮೂಲಕ ಅಂಕಪಟ್ಟಿಯಲ್ಲಿ 4ನೆ ಸ್ಥಾನಕ್ಕೆ ಕುಸಿದಿದೆ. ಇದೀಗ ಅಗ್ರ ನಾಲ್ಕನೆ ಸ್ಥಾನದಿಂದ ಹೊರಗುಳಿಯುವ ಭೀತಿಯಲ್ಲಿದೆ.
ಕೋಲ್ಕತಾ 2012 ಹಾಗೂ 2014ರಲ್ಲಿ ಆಫ್ ಸ್ಪಿನ್ನರ್ ಸುನೀಲ್ ನರೇನ್ ಅಮೋಘ ಪ್ರದರ್ಶನ ನೆರವಿನಿಂದ ಪ್ರಶಸ್ತಿ ಜಯಿಸಿತ್ತು. ನರೇನ್ ಕಳೆದ 4 ಐಪಿಎಲ್‌ನಲ್ಲಿ 74 ವಿಕೆಟ್‌ಗಳನ್ನು ಪಡೆದಿದ್ದಾರೆ. ಶಂಕಾಸ್ಪದ ಬೌಲಿಂಗ್ ಆರೋಪದಲ್ಲಿ ಸಿಲುಕಿದ ಬಳಿಕ ಐಪಿಎಲ್ ತಂಡಕ್ಕೆ ವಾಪಸಾಗಿರುವ ನರೇನ್ 6 ಪಂದ್ಯಗಳಲ್ಲಿ 6 ವಿಕೆಟ್ ಪಡೆದಿದ್ದಾರೆ. ಈ ಬಾರಿ ದೊಡ್ಡ ಕೊಡುಗೆ ನೀಡಲು ವಿಫಲರಾಗಿದ್ದಾರೆ.
ತಂದೆಯ ನಿಧನದಿಂದಾಗಿ ಟೂರ್ನಿಯ ಮೊದಲೆರಡು ಪಂದ್ಯಗಳನ್ನು ತಪ್ಪಿಸಿಕೊಂಡಿದ್ದ ನರೇನ್ ಬೆಂಗಳೂರು ಹಾಗೂ ಗುಜರಾತ್ ವಿರುದ್ಧ ಕಳೆದೆರಡು ಪಂದ್ಯಗಳನ್ನು ಬೆರಳು ನೋವಿನಿಂದಾಗಿ ಆಡಿಲ್ಲ. ಪುಣೆ ವಿರುದ್ಧದ ಪಂದ್ಯಕ್ಕೆ ಬ್ರಾಡ್ ಹಾಗ್ ಬದಲಿಗೆ ಕಣಕ್ಕಿಳಿಯಲು ಈಗಾಗಲೇ ಅಭ್ಯಾಸ ಆರಂಭಿಸಿದ್ದಾರೆ.
ಕೋಲ್ಕತಾಗೆ ಪ್ಲೇ-ಆಫ್‌ನಲ್ಲಿ ಸ್ಥಾನ ಪಡೆಯಲು ಉಳಿದಿರುವ 4 ಪಂದ್ಯಗಳ ಪೈಕಿ ಎರಡರಲ್ಲಿ ಜಯ ಸಾಧಿಸಬೇಕಾಗಿದೆ. ನಾಯಕ ಗೌತಮ್ ಗಂಭೀರ್ ವಿಂಡೀಸ್‌ನ ಆಲ್‌ರೌಂಡರ್ ಆ್ಯಂಡ್ರೆ ರಸಲ್‌ಗೆ ಬ್ಯಾಟಿಂಗ್‌ನಲ್ಲಿ ಭಡ್ತಿ ನೀಡಲು ಯೋಚಿಸುತ್ತಿದ್ದಾರೆ. ಗುಜರಾತ್ ವಿರುದ್ಧದ ಕಳೆದ ಪಂದ್ಯದಲ್ಲಿ ಕೋಲ್ಕತಾ ಪವರ್‌ಪ್ಲೇಗೆ ಮೊದಲೇ 24 ರನ್‌ಗೆ 4 ವಿಕೆಟ್ ಕಳೆದುಕೊಂಡಿರುವುದೇ ಇದಕ್ಕೆ ಕಾರಣ.
ಮತ್ತೊಂದೆಡೆ ಧೋನಿ ನೇತೃತ್ವದ ಪುಣೆ ತಂಡ ಕೆಲವೊಂದು ಎಡವಟ್ಟು ನಿರ್ಧಾರದಿಂದಾಗಿ ಪಂದ್ಯವನ್ನು ಸೋತಿದೆ. ಬ್ಯಾಟಿಂಗ ಜವಾಬ್ದಾರಿಯನ್ನು ತೆಗೆದುಕೊಂಡು ಟೀಕಾಕಾರರ ಬಾಯಿ ಮುಚ್ಚಿಸಲು ಧೋನಿಗೆ ಈಗ ಸಮಯ ಕೂಡಿ ಬಂದಿದೆ.
ಧೋನಿ ತನ್ನ ಒಂದು ಕಾಲದ ನಂಬಿಕಸ್ತ ಆರ್. ಅಶ್ವಿನ್‌ಗೆ ಹೆಚ್ಚು ಓವರ್‌ಗಳ ಬೌಲಿಂಗ್ ನೀಡದೇ ಇರುವುದು ಟೀಕೆಗೆ ಗುರಿಯಾಗಿದೆ. ಅಶ್ವಿನ್ ಕಳೆದ 10 ಟ್ವೆಂಟಿ-20 ಪಂದ್ಯಗಳಲ್ಲಿ ಅಶ್ವಿನ್ 4 ಕೋಟಾ ಓವರ್‌ನ್ನು ಪೂರ್ತಿಗೊಳಿಸಿಲ್ಲ. ಇದರಲ್ಲಿ ಪುಣೆ ಪರ ಆಡಿರುವ 5 ಪಂದ್ಯಗಳು ಸೇರಿವೆ.
ಪಂದ್ಯದ ಸಮಯ: ರಾತ್ರಿ 8:00