ಐಪಿಎಲ್‌ನ ಒಂದೇ ಆವೃತ್ತಿಯಲ್ಲಿ ಗರಿಷ್ಠ ರನ್ : ಉತ್ತಪ್ಪ ದಾಖಲೆ ಮುರಿದ ಕೊಹ್ಲಿ
ಬೆಂಗಳೂರು, ಮೇ 14: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ವಿರಾಟ್ ಕೊಹ್ಲಿ ಐಪಿಎಲ್‌ನ ಒಂದೇ ಆವೃತ್ತಿಯಲ್ಲಿ ಗರಿಷ್ಠ ರನ್ ಗಳಿಸಿರುವ ರಾಬಿನ್ ಉತ್ತಪ್ಪ ದಾಖಲೆಯನ್ನು ಪುಡಿಗಟ್ಟಿದ್ದಾರೆ.
ಉತ್ತಪ್ಪ 2 ವರ್ಷಗಳ ಹಿಂದೆ ನಿರ್ಮಿಸಿದ್ದ ದಾಖಲೆ ಮುರಿಯಲು ಕೊಹ್ಲಿಗೆ 5 ರನ್ ಅಗತ್ಯವಿತ್ತು. ಗುಜರಾತ್ ಲಯನ್ಸ್ ವಿರುದ್ಧ ಶನಿವಾರ ನಡೆದ ಪಂದ್ಯದಲ್ಲಿ 55 ಎಸೆತಗಳಲ್ಲಿ 109 ರನ್ ಗಳಿಸಿದ ಕೊಹ್ಲಿ 2014ರಲ್ಲಿ ಒಟ್ಟು 660 ರನ್ ಗಳಿಸಿದ್ದ ಉತ್ತಪ್ಪ ದಾಖಲೆಯನ್ನು ಮುರಿದರು. ಒಂದೇ ಐಪಿಎಲ್‌ನಲ್ಲಿ ಮೂರು ಶತಕಗಳನ್ನು ಸಿಡಿಸಿದ ಏಕೈಕ ದಾಂಡಿಗ ಎನಿಸಿಕೊಂಡಿರುವ ಕೊಹ್ಲಿ ಈ ವರ್ಷದ ಐಪಿಎಲ್‌ನ 11 ಇನಿಂಗ್ಸ್‌ಗಳಲ್ಲಿ ಒಟ್ಟು 677 ರನ್ ಗಳಿಸಿದ್ದಾರೆ. ಕ್ರಿಸ್ ಗೇಲ್ ಹಾಗೂ ಮೈಕ್ ಹಸ್ಸಿ ಕ್ರಮವಾಗಿ 2012 ಹಾಗೂ 2013ರ ಐಪಿಎಲ್‌ನಲ್ಲಿ 733 ರನ್ ಗಳಿಸುವ ಮೂಲಕ ಗರಿಷ್ಠ ಸ್ಕೋರರ್ ಎನಿಸಿಕೊಂಡಿದ್ದಾರೆ. ಕೊಹ್ಲಿ ಪ್ರಸ್ತುತ ಐಪಿಎಲ್ ಟೂರ್ನಿಯಲ್ಲಿ 75, 79, 33, 80, 100, 14, 52, 108, 20, 7 ಹಾಗೂ 109 ರನ್ ಗಳಿಸಿದ್ದಾರೆ. ಗುಜರಾತ್ ವಿರುದ್ಧ ಈ ಋತುವಿನಲ್ಲಿ ಎರಡನೆ ಶತಕ ಬಾರಿಸಿದ್ದಾರೆ. ಎ.24 ರಂದು ನಡೆದಿದ್ದ ಪಂದ್ಯದಲ್ಲಿ ಗುಜರಾತ್‌ನ ವಿರುದ್ಧ ಔಟಾಗದೆ 100 ರನ್ ಗಳಿಸಿದ್ದರು. ಅದು ಅವರ ಚೊಚ್ಚಲ ಟ್ವೆಂಟಿ-20 ಶತಕವಾಗಿತ್ತು. ಕೊಹ್ಲಿ ಕೆಲವೇ ವಾರಗಳಲ್ಲಿ 3 ಶತಕ ಸಿಡಿಸಿದ್ದಾರೆ.
18ನೆ ಓವರ್‌ನಲ್ಲಿ ಕೊಹ್ಲಿ 65 ರನ್ ಗಳಿಸಿದ್ದರು. ಶಿವಿಲ್ ಕೌಶಿಕ್ ಎಸೆದ 19ನೆ ಓವರ್‌ನಲ್ಲಿ 4 ಸಿಕ್ಸರ್ ಹಾಗೂ 1 ಬೌಂಡರಿ ಸಿಡಿಸಿದ ಕೊಹ್ಲಿ 20ನೆ ಓವರ್‌ನಲ್ಲಿ ಐಪಿಎಲ್‌ನಲ್ಲಿ 3ನೆ ಶತಕ ಪೂರೈಸಿದರು.