×
Ad

ಕೋಲ್ಕತಾ ವಿರುದ್ಧ ಆರ್‌ಸಿಬಿಗೆ ಭರ್ಜರಿ ಗೆಲುವು

Update: 2016-05-16 23:44 IST

ಕೊಹ್ಲಿ-ವಿಲಿಯರ್ಸ್ ಶತಕದ ಜೊತೆಯಾಟ

ಕೋಲ್ಕತಾ, ಮೇ 16: ನಾಯಕ ವಿರಾಟ್ ಕೊಹ್ಲಿ(ಔಟಾಗದೆ 75, 51 ಎಸೆತ)ಹಾಗೂ ಎಬಿ ಡಿವಿಲಿಯರ್ಸ್(ಔಟಾಗದೆ 59, 31 ಎಸೆತ) ಅವರ ಶತಕದ ಜೊತೆಯಾಟದ ಸಹಾಯದಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧ 9 ವಿಕೆಟ್‌ಗಳ ಅಂತರದಿಂದ ಭರ್ಜರಿ ಗೆಲುವು ಸಾಧಿಸಿದೆ.

 ಸೋಮವಾರ ಇಲ್ಲಿನ ಈಡನ್‌ಗಾರ್ಡನ್ ಸ್ಟೇಡಿಯಂನಲ್ಲಿ ನಡೆದ 48ನೆ ಐಪಿಎಲ್ ಪಂದ್ಯದಲ್ಲಿ ಗೆಲ್ಲಲು 184 ರನ್ ಗುರಿ ಪಡೆದ ಆರ್‌ಸಿಬಿಗೆ ಕ್ರಿಸ್ ಗೇಲ್(49) ಹಾಗೂ ಕೊಹ್ಲಿ ಮೊದಲ ವಿಕೆಟ್‌ಗೆ 71 ರನ್ ಸೇರಿಸುವ ಮೂಲಕ ಭದ್ರ ಬುನಾದಿ ಹಾಕಿಕೊಟ್ಟರು.

ಕೇವಲ ಒಂದು ರನ್‌ನಿಂದ ಅರ್ಧಶತಕ ವಂಚಿತರಾದ ಗೇಲ್(31 ಎಸೆತ, 5 ಬೌಂಡರಿ, 4 ಸಿಕ್ಸರ್) ಸುನೀಲ್ ನರೇನ್‌ಗೆ ವಿಕೆಟ್ ಒಪ್ಪಿಸಿದರು. ಗೇಲ್ ಔಟಾದ ಬಳಿಕ ಕೊಹ್ಲಿ(ಔಟಾಗದೆ 75, 51 ಎಸೆತ, 5 ಬೌಂಡರಿ, 3 ಸಿಕ್ಸರ್) ಅವರೊಂದಿಗೆ ಕೈಜೋಡಿಸಿದ ಎಬಿ ಡಿವಿಲಿಯರ್ಸ್(59ರನ್, 31 ಎಸೆತ, 5 ಬೌಂಡರಿ, 3 ಸಿಕ್ಸರ್) ಎರಡನೆ ವಿಕೆಟ್‌ಗೆ ಮುರಿಯದ ಜೊತೆಯಾಟದಲ್ಲಿ 115 ರನ್ ಗಳಿಸಿ ಆರ್‌ಸಿಬಿ 18.4 ಓವರ್‌ಗಳಲ್ಲಿ 1 ವಿಕೆಟ್ ನಷ್ಟಕ್ಕೆ 186 ರನ್ ಗಳಿಸಲು ನೆರವಾದರು.

ಈ ವರ್ಷದ ಐಪಿಎಲ್‌ನಲ್ಲಿ 5ನೆ ಬಾರಿ ಶತಕದ ಜೊತೆಯಾಟ ನಡೆಸಿ ಗಮನ ಸೆಳೆದ ಕೊಹ್ಲಿ-ವಿಲಿಯರ್ಸ್ ಜೋಡಿ ಆರ್‌ಸಿಬಿ ಪ್ಲೇ-ಆಫ್ ಹಂತಕ್ಕೇರುವ ಅವಕಾಶವನ್ನು ಜೀವಂತವಾಗಿರಿಸಿದ್ದಾರೆ.

ಬೆಂಗಳೂರಿಗೆ 184 ರನ್ ಸವಾಲು :

ಇದಕ್ಕೆ ಮೊದಲು ಬೆಂಗಳೂರು ತಂಡದಿಂದ ಬ್ಯಾಟಿಂಗ್‌ಗೆ ಆಹ್ವಾನಿಸಲ್ಪಟ್ಟ ಕೋಲ್ಕತಾ ತಂಡ ಆ್ಯಂಡ್ರೆ ರಸಲ್(ಔಟಾಗದೆ 39) ಹಾಗೂ ಶಾಕಿಬ್ ಅಲ್ ಹಸನ್(ಔಟಾಗದೆ 18) ಅಂತಿಮ 3 ಓವರ್‌ಗಳಲ್ಲಿ ಸೇರಿಸಿದ 38 ರನ್‌ಗಳ ನೆರವಿನಿಂದ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ವಿರುದ್ಧ ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್‌ಗಳ ನಷ್ಟಕ್ಕೆ 183 ರನ್ ಗಳಿಸಿತು.

3ನೆ ಓವರ್‌ನಲ್ಲಿ ಆರಂಭಿಕ ದಾಂಡಿಗ ರಾಬಿನ್ ಉತ್ತಪ್ಪ(02) ಅವರನ್ನು ಅಲ್ಪ ಮೊತ್ತಕ್ಕೆ ಕಳೆದುಕೊಂಡಿತು. ಉತ್ತಪ್ಪರನ್ನು ಸ್ಪಿನ್ನರ್ ಇಕ್ಬಾಲ್ ಅಬ್ದುಲ್ಲಾ ಪೆವಿಲಿಯನ್‌ಗೆ ಕಳುಹಿಸಿದರು. ಆಗ ಜೊತೆಯಾದ ನಾಯಕ ಗಂಭೀರ್(51ರನ್, 34 ಎಸೆತ, 7 ಬೌಂಡರಿ) ಹಾಗೂ ಮನೀಷ್ ಪಾಂಡೆ(50 ರನ್, 35 ಎಸೆತ, 5 ಬೌಂಡರಿ, 2 ಸಿಕ್ಸರ್)2ನೆ ವಿಕೆಟ್‌ಗೆ ಕೇವಲ 49 ಎಸೆತಗಳಲ್ಲಿ 76 ರನ್ ಸೇರಿಸಿ ತಂಡವನ್ನು ಆಧರಿಸಿದರು.

 32 ಎಸೆತಗಳಲ್ಲಿ 31ನೆ ಅರ್ಧಶತಕ ಬಾರಿಸಿದ ತಕ್ಷಣ ಗಂಭೀರ್ ವ್ಯಾಟ್ಸನ್ ಎಸೆದ ನೇರ ಎಸೆತಕ್ಕೆ ರನೌಟಾದರು. ಆಗ ತಂಡದ ಸ್ಕೋರ್ 10.3 ಓವರ್‌ಗಳಲ್ಲಿ 2 ವಿಕೆಟ್‌ಗೆ 90 ರನ್.

ಕರ್ನಾಟಕದ ದಾಂಡಿಗ ಪಾಂಡೆ 35 ಎಸೆತಗಳಲ್ಲಿ ಈ ಋತುವಿನಲ್ಲಿ ಎರಡನೆ ಅರ್ಧಶತಕ ಬಾರಿಸಿದ ಬೆನ್ನಿಗೇ ವೇಗದ ಬೌಲರ್ ಎಸ್. ಅರವಿಂದ್ ಎಸೆತದಲ್ಲಿ ಔಟಾದರು. ಕೋಲ್ಕತಾ 11 ರಿಂದ 15 ಓವರ್‌ಗಳ ನಡುವೆ ಕೇವಲ 37 ರನ್ ಗಳಿಸಿತು. ಯೂಸುಫ್ ಪಠಾಣ್(06) ಹಾಗೂ ಯಾದವ್(05) ವಿಕೆಟ್ ಕಳೆದುಕೊಂಡಿತು.

6ನೆ ವಿಕೆಟ್‌ಗೆ 28 ಎಸೆತಗಳಲ್ಲಿ 58 ರನ್ ಜೊತೆಯಾಟವನ್ನು ನಡೆಸಿದ ರಸಲ್ ಹಾಗೂ ಶಾಕಿಬ್ ಕೋಲ್ಕತಾ ತಂಡ ಸವಾಲಿನ ಮೊತ್ತ ಸೇರಿಸಲು ನೆರವಾದರು. ಈ ಜೋಡಿ ಅಂತಿಮ 3 ಓವರ್‌ಗಳಲ್ಲಿ 38 ರನ್ ಗಳಿಸಿತು. ಬೆಂಗಳೂರಿನ ಪರ ಶ್ರೀನಾಥ್ ಅರವಿಂದ್(2-41) ಯಶಸ್ವಿ ಬೌಲರ್ ಎನಿಸಿಕೊಂಡರು.

ಸ್ಕೋರ್ ವಿವರ

ಕೋಲ್ಕತಾ ನೈಟ್ ರೈಡರ್ಸ್

20 ಓವರ್‌ಗಳಲ್ಲಿ 183/5

ರಾಬಿನ್ ಉತ್ತಪ್ಪ ಸಿ ಮತ್ತು ಬಿ ಇಕ್ಬಾಲ್ ಅಬ್ದುಲ್ಲಾ 02

ಗೌತಮ್ ಗಂಭೀರ್ ರನೌಟ್ 51

ಮನೀಷ್ ಪಾಂಡೆ ಸಿ ವಿಲಿಯರ್ಸ್ ಬಿ ಅರವಿಂದ್ 50

ಯೂಸುಫ್ ಪಠಾಣ್ ಸ್ಟಂ.ರಾಹುಲ್ ಬಿ ಚಾಹಲ್ 06

ರಸೆಲ್ ಔಟಾಗದೆ 39

ಸೂರ್ಯಯಾದವ್ ಸಿ ಇಕ್ಬಾಲ್ ಬಿ ಅರವಿಂದ್ 05

ಶಾಕಿಬ್ ಅಲ್‌ಹಸನ್ ಔಟಾಗದೆ 18

ಇತರ 12

ವಿಕೆಟ್ ಪತನ: 1-14, 2-90, 3-113, 4-118, 5-125

ಬೌಲಿಂಗ್ ವಿವರ:

ಸ್ಟುವರ್ಟ್ ಬಿನ್ನಿ 1-0-8-0

ಅರವಿಂದ್ 4-0-41-2

ಇಕ್ಬಾಲ್ ಅಬ್ದುಲ್ಲಾ 4-0-22-1

ಶೇನ್ ವ್ಯಾಟ್ಸನ್ 4-0-46-0

ಚಾಹಲ್ 4-0-38-1

ಜೋರ್ಡನ್ 3-0-22-0.

ರಾಯಲ್ ಚಾಲೆಂಜರ್ಸ್‌ ಬೆಂಗಳೂರು

18.4 ಓವರ್‌ಗಳಲ್ಲಿ 186/1

ಕ್ರಿಸ್ ಗೇಲ್ ಬಿ ನರೇನ್ 49

ವಿರಾಟ್ ಕೊಹ್ಲಿ ಔಟಾಗದೆ 75

ಎಬಿ ಡಿವಿಲಿಯರ್ಸ್ ಔಟಾಗದೆ 59

ಇತರ 03

ವಿಕೆಟ್‌ಪತನ: 1-71

ಬೌಲಿಂಗ್‌ವಿವರ:

ರಸೆಲ್ 2.3-0-32-0

ಮೊರ್ಕೆಲ್ 2-0-20-0

ನರೇನ್ 4-0-34-1

ಚಾವ್ಲಾ 3.1-0-32-0

ರಾಜ್‌ಪೂತ್ 3-0-28-0

ಹಸನ್ 4-0-39-0

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News