×
Ad

ರೋಮ್ ಮಾಸ್ಟರ್ಸ್‌ ಆ್ಯಂಡಿ ಮರ್ರೆಗೆ ಸಿಂಗಲ್ಸ್ ಪ್ರಶಸ್ತಿ

Update: 2016-05-16 23:53 IST

ರೋಮ್, ಮೇ 16: ತನ್ನ 29ನೆ ಹುಟ್ಟುಹಬ್ಬದಂದೇ ವಿಶ್ವದ ನಂ.1 ಆಟಗಾರ ನೊವಾಕ್ ಜೊಕೊವಿಕ್‌ರನ್ನು ನೇರ ಸೆಟ್‌ಗಳಿಂದ ಮಣಿಸಿದ ಬ್ರಿಟನ್‌ನ ಆ್ಯಂಡಿ ಮರ್ರೆ ರೋಮ್ ಮಾಸ್ಟರ್ಸ್‌ ಪ್ರಶಸ್ತಿಯನ್ನು ಗೆದ್ದುಕೊಂಡಿದ್ದಾರೆ.

 ರವಿವಾರ ಇಲ್ಲಿ ನಡೆದ ಮಳೆಬಾಧಿತ ಪುರುಷರ ಸಿಂಗಲ್ಸ್‌ನ ಫೈನಲ್ ಪಂದ್ಯದಲ್ಲಿ ಜೊಕೊವಿಕ್‌ರನ್ನು 6-3, 6-3 ಸೆಟ್‌ಗಳ ಅಂತರದಿಂದ ಮಣಿಸಿರುವ ಮರ್ರೆ ಕಳೆದ ವಾರ ಮ್ಯಾಡ್ರಿಡ್ ಓಪನ್ ಫೈನಲ್ ಸೋಲಿಗೆ ಸೇಡು ತೀರಿಸಿಕೊಂಡರು. ಮೂರನೆ ಶ್ರೇಯಾಂಕದ ಮರ್ರೆಗೆ ಟ್ರೋಫಿಯ ಜೊತೆಗೆ ಬರ್ತ್‌ಡೇ ಕೇಕ್‌ನ್ನು ನೀಡಲಾಯಿತು. ಮರ್ರೆ ರೋಮ್‌ನಲ್ಲಿ ಗೆದ್ದುಕೊಂಡಿರುವ ಮೊದಲ ಪ್ರಶಸ್ತಿಯಾಗಿದೆ. ಫ್ರೆಂಚ್ ಓಪನ್ ಆರಂಭಕ್ಕೆ ಒಂದು ವಾರದ ಮುಂಚಿತವಾಗಿ ಪ್ರಶಸ್ತಿಯನ್ನು ಜಯಿಸಿದ್ದಾರೆ.

 1931ರಲ್ಲಿ ಪ್ಯಾಟ್ ಹ್ಯೂಸ್ ರೋಮ್‌ನಲ್ಲಿ ಪ್ರಶಸ್ತಿ ಜಯಿಸಿದ್ದ ಮೊದಲ ಬ್ರಿಟನ್ ಆಟಗಾರನಾಗಿದ್ದಾರೆ. ಇದೀಗ ಮರ್ರೆ ಅವರು ಹ್ಯೂಸ್ ಸಾಧನೆಯನ್ನು ಸರಿಗಟ್ಟಿದ್ದಾರೆ.

ಇದೇ ವೇಳೆ, ಮಹಿಳೆಯರ ಸಿಂಗಲ್ಸ್‌ನಲ್ಲಿ ತನ್ನದೇ ದೇಶದ ಮ್ಯಾಡಿಸನ್ ಕೇಯ್ಸಾರನ್ನು 7-6(5), 6-3 ಸೆಟ್‌ಗಳ ಅಂತರದಿಂದ ಮಣಿಸಿರುವ ಸೆರೆನಾ ವಿಲಿಯಮ್ಸ್ 9 ತಿಂಗಳ ಪ್ರಶಸ್ತಿಯ ಬರವನ್ನು ನೀಗಿಸಿಕೊಂಡರು. ವಿಲಿಯಮ್ಸ್ ಆಗಸ್ಟ್‌ನಲ್ಲಿ ಸಿನ್ಸಿನಾಟಿ ಓಪನ್‌ನಲ್ಲಿ ಕೊನೆಯ ಬಾರಿ ಪ್ರಶಸ್ತಿ ಜಯಿಸಿದ್ದರು.

ಸಾನಿಯಾ-ಹಿಂಗಿಸ್ ಮುಡಿಗೆ ರೋಮ್ ಮಾಸ್ಟರ್ಸ್‌ ಪ್ರಶಸ್ತಿ

ರೋಮ್, ಮೇ 16: ರೋಮ್ ಮಾಸ್ಟರ್ಸ್‌ನ ಮಹಿಳೆಯರ ಡಬಲ್ಸ್ ಫೈನಲ್‌ನಲ್ಲಿ ರಶ್ಯದ ಎಲೆನಾ ವೆಸ್ನಿನಾ ಹಗೂ ಎಕಟೆರಿನಾ ಮಕರೋವಾರನ್ನು ಮಣಿಸಿದ ವಿಶ್ವದ ನಂ.1 ಜೋಡಿ ಸಾನಿಯಾ ಮಿರ್ಝಾ ಹಾಗೂ ಮಾರ್ಟಿನಾ ಹಿಂಗಿಸ್ ತಮ್ಮ ಮುಡಿಗೆ ಮತ್ತೊಂದು ಗರಿ ಸೇರಿಸಿಕೊಂಡಿದ್ದಾರೆ.

ರವಿವಾರ ಒಂದು ಗಂಟೆ, 30 ನಿಮಿಷಗಳ ಕಾಲ ನಡೆದ ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ಇಂಡೋ-ಸ್ವಿಸ್ ಜೋಡಿ ರಶ್ಯದ ಎದುರಾಳಿಗಳ ತೀವ್ರ ಹೋರಾಟವನ್ನು ಹಿವ್ಮೆುಟ್ಟಿಸಿ 6-1, 6(5)-7, 10-3 ಸೆಟ್‌ಗಳ ಅಂತರದಿಂದ ಗೆಲುವು ಸಾಧಿಸಿದರು.

ಸಾನಿಯಾ ಹಾಗೂ ಹಿಂಗಿಸ್ ಈ ವರ್ಷ ಗೆದ್ದುಕೊಂಡ ಐದನೆ ಡಬಲ್ಸ್ ಪ್ರಶಸ್ತಿ ಇದಾಗಿದೆ. ಈ ಋತುವಿನ ಆರಂಭದಲ್ಲಿ ಸಿಡ್ನಿ, ಬ್ರಿಸ್ಬೇನ್, ಆಸ್ಟ್ರೇಲಿಯ ಹಾಗೂ ಸೈಂಟ್ ಪೀಟರ್ಸ್‌ಬರ್ಗ್‌ನಲ್ಲಿ ಪ್ರಶಸ್ತಿಯನ್ನು ಜಯಿಸಿದ್ದರು. ಆವೆಮಣ್ಣಿನ ಟೆನಿಸ್ ಅಂಗಳದಲ್ಲಿ ಸಾನಿಯಾ-ಹಿಂಗಿಸ್‌ಗೆ ಒಲಿದ ಮೊದಲ ಟ್ರೋಫಿ ಇದಾಗಿದೆ. ರೋಮ್ ಮಾಸ್ಟರ್ಸ್‌ ಪ್ರಶಸ್ತಿಯು ಮುಂದಿನ ವಾರ ಆರಂಭವಾಗಲಿರುವ ಫ್ರೆಂಚ್ ಓಪನ್ ಪ್ರಶಸ್ತಿ ಗೆಲುವಿಗೆ ಉತ್ತೇಜನಕಾರಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News