ಪ್ಲೇ-ಆಫ್ ಸ್ಥಾನಕ್ಕೆ ಅಗ್ರ ಆರು ತಂಡಗಳ ಸ್ಪರ್ಧೆ
ಹೊಸದಿಲ್ಲಿ, ಮೇ 17: ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ರವಿವಾರ ನಡೆದಿದ್ದ ಐಪಿಎಲ್ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್‌ನ ವಿರುದ್ದ ಸೋಲುವುದರೊಂದಿಗೆ ಪುಣೆ ಸೂಪರ್‌ಜಯಂಟ್ಸ್ ಬಳಿಕ ಪ್ಲೇ-ಆಫ್ ಸ್ಪರ್ಧೆಯಿಂದ ಹೊರಬಿದ್ದ ಎರಡನೆ ತಂಡವಾಗಿದೆ.
ಈ ವರೆಗೆ ಯಾವ ತಂಡವೂ ಪ್ಲೇ-ಆಫ್ ಸ್ಥಾನವನ್ನು ದೃಢಪಡಿಸಿಲ್ಲ. ಅಗ್ರ ಆರು ತಂಡಗಳು ಪ್ಲೇ-ಆಫ್ ಸ್ಪರ್ಧೆಯಲ್ಲಿವೆ. 8 ಪಂದ್ಯಗಳಲ್ಲಿ ಜಯ ಸಾಧಿಸಿರುವ ಸನ್‌ರೈಸರ್ಸ್ ತಂಡ ಪ್ಲೇ-ಆಫ್ ಹೊಸ್ತಿಲಲ್ಲಿದ್ದು, ನೆಟ್‌ರನ್‌ರೇಟ್ +0.400 ಇದೆ. ಇನ್ನು ಎರಡು ಪಂದ್ಯ ಆಡಲು ಬಾಕಿಯಿದೆ.
ಈ ಹಿಂದಿನ ಆವೃತ್ತಿಯಂತೆ ಈ ವರ್ಷ 8 ಪಂದ್ಯಗಳನ್ನು ಜಯಿಸಿದ್ದ ತಂಡ ಪ್ಲೇ-ಆಫ್ ಸ್ಥಾನವನ್ನು ಖಚಿತಪಡಿಸಲು ಸಾಧ್ಯವಾಗಿಲ್ಲ. 2016ರ ಆವೃತ್ತಿಯ ಐಪಿಎಲ್‌ನಲ್ಲಿ ಆರು ತಂಡಗಳು ಪ್ಲೇ-ಆಫ್ ಸ್ಥಾನದ ಸ್ಪರ್ಧೆಯಲ್ಲಿದ್ದು, ಒಂದು ವೇಳೆ 6 ತಂಡಗಳು ತಲಾ 16 ಅಂಕಗಳನ್ನು ಪಡೆದರೆ, ನೆಟ್ ರನ್‌ರೇಟ್ ನಿರ್ಣಾಯಕ ಪಾತ್ರವಹಿಸಲಿದೆ.
ಪ್ಲೇ-ಆಫ್ ಹಂತಕ್ಕೆ ಅರ್ಹತೆ ಸ್ಪರ್ಧೆಯಲ್ಲಿರುವ ಆರು ತಂಡಗಳು..
ಸನ್‌ರೈಸರ್ಸ್ ಹೈದರಾಬಾದ್: ಈ ತಂಡಕ್ಕೆ ಪ್ಲೇ- ಆಫ್ ಹಂತಕ್ಕೆ ತೇರ್ಗಡೆಯಾಗಲು ಉಳಿದ 2 ಪಂದ್ಯಗಳಲ್ಲಿ ಒಂದನ್ನು ಜಯಿಸಲೇಬೇಕಾಗಿದೆ. ಉಳಿದೆರಡು ಪಂದ್ಯಗಳನ್ನು ಕಡಿಮೆ ಅಂತರದಿಂದ ಸೋತರೆ, ಉತ್ತಮ ರನ್‌ರೇಟ್ ತಂಡಕ್ಕೆ ನೆರವಾಗಲಿದೆ.
ತಂಡ ಆಡಲಿರುವ ಪಂದ್ಯ: ಡೆಲ್ಲಿ ಡೇರ್ ಡೆವಿಲ್ಸ್, ಕೋಲ್ಕತಾ ನೈಟ್ ರೈಡರ್ಸ್.
ಕೋಲ್ಕತಾ ನೈಟ್ ರೈಡರ್ಸ್: ಈ ತಂಡ ಪ್ಲೇ-ಆಫ್‌ಗೆ ತೇರ್ಗಡೆಯಾಗಲು 2 ಪಂದ್ಯಗಳಲ್ಲಿ ಎರಡನ್ನೂ ಗೆಲ್ಲಬೇಕು. ಉಳಿದೆರಡು ಪಂದ್ಯಗಳನ್ನು ಸೋತರೆ, 14 ಅಂಕ ಹಾಗೂ ಉತ್ತಮ ನೆಟ್ ರನ್‌ರೇಟ್ ಮೂಲಕ ಮುಂದಿನ ಸುತ್ತಿಗೇರಬಹುದು. ಆದರೆ, ತಂಡದ ಅದೃಷ್ಟ ಉಳಿದ ಫಲಿತಾಂಶವನ್ನು ಅವಲಂಬಿಸಿರುತ್ತದೆ.
ತಂಡ ಆಡಲಿರುವ ಪಂದ್ಯ: ಗುಜರಾತ್, ಹೈದರಾಬಾದ್
ಮುಂಬೈ ಇಂಡಿಯನ್ಸ್: ಹೈದರಾಬಾದ್ ಹಾಗೂ ಕೋಲ್ಕತಾ ತಂಡಗಳಂತೆ ಮುಂಬೈನ ನೆಟ್‌ರನ್‌ರೇಟ್ ಉತ್ತಮವಾಗಿಲ್ಲ. 14 ಅಂಕ ಗಳಿಸಿರುವ ಮುಂಬೈನ ರನ್‌ರೇಟ್ -0.082. ಮುಂಬೈ ತಂಡ ಗುಜರಾತ್ ಲಯನ್ಸ್ ವಿರುದ್ಧದ ಕೊನೆಯ ಪಂದ್ಯವನ್ನು ದೊಡ್ಡ ಅಂತರದಿಂದ ಜಯಿಸಿ ನೆಟ್‌ರೇಟ್ ಹೆಚ್ಚಿಸಿಕೊಳ್ಳಬೇಕು.
ತಂಡ ಆಡಲಿರುವ ಪಂದ್ಯ:ಗುಜರಾತ್ ಲಯನ್ಸ್
ಗುಜರಾತ್ ಲಯನ್ಸ್: ಲಯನ್ಸ್ ತಂಡ ಉಳಿದಿರುವ ಎರಡೂ ಪಂದ್ಯಗಳನ್ನು ಜಯಿಸಿದರೆ ಅಂತಿಮ ನಾಲ್ಕರ ಘಟ್ಟ ತಲುಪಬಹುದು. ಒಂದು ಗೆಲುವು ತಂಡಕ್ಕೆ ನೆರವಾಗಬಹುದು. ಆದರ, ಇತರ ಫಲಿತಾಂಶ ತಂಡದ ಪರವಾಗಿರಬೇಕು. ಆರ್‌ಸಿಬಿ ವಿರುದ್ಧ 144 ರನ್ ಅಂತರದಿಂದ ಸೋತ ಬಳಿಕ ಲಯನ್ಸ್ ರನ್‌ರೇಟ್ -0.747ಕ್ಕೆ ಕುಸಿದಿದೆ. ಅಂಕಗಳು ಟೈ ಆದಾಗ ಕನಿಷ್ಠ ರನ್‌ರೇಟ್ ಮುಳುವಾಗಬಹುದು.
ತಂಡ ಆಡಲಿರುವ ಪಂದ್ಯ: ಕೋಲ್ಕತಾ ಹಾಗೂ ಮುಂಬೈ.
ಡೆಲ್ಲಿ ಡೇರ್ ಡೆವಿಲ್ಸ್: ಡೆಲ್ಲಿ ತಂಡಕ್ಕೆ ಮುಂದಿನ ಸುತ್ತಿಗೆ ತೇರ್ಗಡೆಯಾಗಲು ಉಳಿದ 3 ಪಂದ್ಯಗಳನ್ನು ಜಯಿಸಬೇಕಾಗಿದೆ. ಮುಂದಿನ ಸುತ್ತಿಗೇರಲು ಕನಿಷ್ಠ 14 ಅಂಕದ ಅಗತ್ಯವಿದೆ. ಇತರ ತಂಡಗಳಂತೆ ಡೆಲ್ಲಿ 16 ಇಲ್ಲವೇ 14 ಅಂಕ ಗಳಿಸಿ ಅರ್ಹತೆ ಗಳಿಸಬಹುದು. ನೆಟ್‌ರನ್‌ರೇಟ್-0.038 ಇರುವುದರಿಂದ ದೊಡ್ಡ ಅಂತರದ ಗೆಲುವು ಅಗತ್ಯವಿದೆ.
ತಂಡ ಆಡಲಿರುವ ಪಂದ್ಯ: ಪುಣೆ, ಹೈದರಾಬಾದ್, ಬೆಂಗಳೂರು.
ರಾಯಲ್ ಚಾಲೆಂಜರ್ಸ್ ಬೆಂಗಳೂರು:
ರಾಯಲ್ ಚಾಲೆಂಜರ್ಸ್‌ಗೆ ಉಳಿದ ಎರಡು ಪಂದ್ಯಗಳನ್ನು ಜಯಿಸಿದರೆ, 16 ಅಂಕ ಸಂಪಾದಿಸಿ ಮುಂದಿನ ಸುತ್ತಿಗೇರುವ ಉತ್ತಮ ಅವಕಾಶವಿದೆ. ಒಂದುವೇಳೆ ಬೆಂಗಳೂರು 2 ಪಂದ್ಯ ಜಯಿಸಿದರೆ ಪ್ಲೇ-ಆಫ್ ಸ್ಪರ್ಧೆಯಲ್ಲಿರುವ ಸನ್‌ರೈಸರ್ಸ್, ಕೋಲ್ಕತಾ ಹಾಗೂ ಲಯನ್ಸ್ ತಂಡಗಳ ಪೈಕಿ ಕೇವಲ ಎರಡು ತಂಡಗಳು ಅಂಕಪಟ್ಟಿಯಲ್ಲಿ ಬೆಂಗಳೂರಿಗಿಂತ ಮೇಲಿನ ಸ್ಥಾನ ತಲುಪಬಹುದು. ಉಳಿದೆರಡು ತಂಡಗಳಿಗೆ ಬೆಂಗಳೂರಿಗಿಂತ ಹೆಚ್ಚು ನೆಟ್‌ರೇಟ್ ಗಳಿಸಲು ಸಾಧ್ಯವಿಲ್ಲ. ಬೆಂಗಳೂರು ಪ್ರಸ್ತುತ +0.640 ರನ್‌ರೇಟ್ ಹೊಂದಿದೆ. ಇತರ ಫಲಿತಾಂಶ ಬೆಂಗಳೂರು ಪರವಾಗಿದ್ದರೆ, 14 ಅಂಕ ಗಳಿಸಿದರೂ ಮುಂದಿನ ಸುತ್ತಿಗೇರಬಹುದು.
ತಂಡ ಆಡಲಿರುವ ಪಂದ್ಯ: ಪಂಜಾಬ್, ಡೆಲ್ಲಿ.