×
Ad

ರೈಸಿಂಗ್ ಪುಣೆ ಆಟಕ್ಕೆ ಮಳೆ ಅಡ್ಡಿ

Update: 2016-05-17 23:45 IST

 ವಿಶಾಖಪಟ್ಟಣ, ಮೇ 17: ಐಪಿಎಲ್‌ನ 49ನೆ ಪಂದ್ಯದಲ್ಲಿ ಡೆಲ್ಲಿ ಡೇರ್‌ಡೆವಿಲ್ಸ್ ವಿರುದ್ಧ ಗೆಲುವಿಗೆ 122ರನ್‌ಗಳ ಸವಾಲು ಪಡೆದಿರುವ ರೈಸಿಂಗ್ ಪುಣೆ ಸೂಪರ್‌ಜಯಂಟ್ಸ್ ತಂಡದ ಆಟಕ್ಕೆ ಮಳೆ ಅಡ್ಡಿಪಡಿಸಿದೆ.
ಡಾ.ವೈಎಸ್. ರಾಜಶೇಖರ ರೆಡ್ಡಿ ಎಸಿಎ-ವಿಡಿಸಿಎ ಕ್ರಿಕೆಟ್ ಸ್ಟೇಡಿಯಂನಲ್ಲಿ ಮಂಗಳವಾರ ರಾತ್ರಿ ಪುಣೆ ತಂಡ ಗೆಲುವಿಗೆ 8 ಓವರ್‌ಗಳಲ್ಲಿ 1 ವಿಕೆಟ್ ನಷ್ಟದಲ್ಲಿ 52 ರನ್ ಗಳಿಸಿದ್ದಾಗ ಮಳೆ ಸುರಿದು ಆಟ ಸ್ಥಗಿತಗೊಂಡಿತು.
 ಆರಂಭಿಕ ದಾಂಡಿಗ ಅಜಿಂಕ್ಯ ರಹಾನೆ ಔಟಾಗದೆ 21 ರನ್(23ಎ, 3ಬೌ), ಜಾರ್ಜ್ ಬೈಲಿ ಔಟಾಗದೆ 6 ರನ್ ಗಳಿಸಿ ಆಡುತ್ತಿದ್ದಾಗ ಮಳೆ ಸುರಿಯಿತು. ಆಟ ಸ್ಥಗಿತಗೊಂಡಿತು.
ರೈಸಿಂಗ್ ಪುಣೆ ತಂಡ 3.4 ಓವರ್‌ಗಳಲ್ಲಿ 31 ರನ್ ಗಳಿಸಿದ್ದಾಗ ತಂಡದ ಮೊದಲ ವಿಕೆಟ್ ಉರುಳಿತು. ಆರಂಭಿಕ ದಾಂಡಿಗ ಉಸ್ಮಾನ್ ಖ್ವಾಜಾ 19 ರನ್ (13ಎ,4ಬೌ) ಗಳಿಸಿ ಮೊರಿಸ್ ಎಸೆತದಲ್ಲಿ ಶ್ರೇಯಸ್ ಅಯ್ಯರ್‌ಗೆ ಕ್ಯಾಚ್ ನೀಡಿದರು. ಬಳಿಕ ರಹಾನೆ ಮತ್ತು ಬೈಲಿ ಬ್ಯಾಟಿಂಗ್‌ನ್ನು ಮುಂದುವರಿಸಿದರು.
ಡೆಲ್ಲಿ 121/6: ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಡೆಲ್ಲಿ ಡೇರ್‌ಡೆವಿಲ್ಸ್ ತಂಡ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟದಲ್ಲಿ 121 ರನ್ ಗಳಿಸಿತ್ತು.
ಅಶೋಕ್ ದಿಂಡಾ(3-20) ಮತ್ತು ಆ್ಯಡಮ್ ಝಾಂಪ (3-21) ದಾಳಿಗೆ ಸಿಲುಕಿ ಡೆಲ್ಲಿ ತಂಡದ ಆಟಗಾರರು ರನ್ ಗಳಿಸಲು ಪರದಾಡಿದರು. ಕರುಣ್ ನಾಯರ್(41) ತಂಡದ ಪರ ಗರಿಷ್ಠ ಸ್ಕೋರ್ ದಾಖಲಿಸಿದರು.
 ದಿಂಡಾ ದಾಳಿಯನ್ನು ಎದುರಿಸಲಾರದೆ ಆರಂಭಿಕ ದಾಂಡಿಗರಾದ ಕ್ವಿಂಟನ್ ಡಿ ಕಾಕ್(2) ಮತ್ತು ಶ್ರೇಯಸ್ ಅಯ್ಯರ್(8) ಬೇಗನೆ ವಿಕೆಟ್ ಒಪ್ಪಿಸಿದರು. ಸ್ಯಾಮ್ಸನ್(10) ಎರಡಂಕೆಯ ಸ್ಕೋರ್ ದಾಖಲಿಸಿದರು.
 ಆರ್.ಆರ್ ಪಂತ್ (4) ಮಿಂಚಲಿಲ್ಲ. ಕರುಣ್ ನಾಯರ್ 41 ರನ್(43ಎ, 5ಬೌ) ಮತ್ತು ಜೆ.ಪಿ.ಡುಮಿನಿ(14) ಹೋರಾಟ ನಡೆಸಿದರೂ ತಂಡದ ಸ್ಕೋರ್‌ನ್ನು 100ರ ಗಡಿ ತಲುಪಿಸಲು ಸಾಧ್ಯವಾಗಲಿಲ್ಲ. 18.2 ಓವರ್‌ಗಳಲ್ಲಿ 6 ವಿಕೆಟ್ ನಷ್ಟದಲ್ಲಿ 93 ರನ್ ಗಳಿಸಿದ್ದ ಡೆಲ್ಲಿ ತಂಡದ ಬ್ಯಾಟಿಂಗ್‌ನ್ನು ಮುನ್ನಡೆಸಿದ ಕ್ರಿಸ್ ಮೊರೀಸ್ (ಔಟಾಗದೆ 38) ಮತ್ತು ಕೌಲ್ಟರ್ ನೀಲ್(ಔಟಾಗದೆ 2) ಸ್ಕೋರ್‌ನ್ನು 20 ಓವರ್‌ಗಳಲ್ಲಿ 121ಕ್ಕೆ ಏರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News