×
Ad

ಪಂಜಾಬ್‌ಗೆ 212 ರನ್ ಗುರಿ,ಕೊಹ್ಲಿ-ಕ್ರಿಸ್ ಗೇಲ್ ಆರ್ಭಟ

Update: 2016-05-18 23:40 IST

 ಬೆಂಗಳೂರು, ಮೇ 18: ನಾಯಕ ವಿರಾಟ್ ಕೊಹ್ಲಿ ಶತಕ ಹಾಗೂ ಸ್ಫೋಟಕ ದಾಂಡಿಗ ಕ್ರಿಸ್ ಗೇಲ್ ಅರ್ಧಶತಕ ಕೊಡುಗೆಯ ನೆರವಿನಿಂದ ಆತಿಥೇಯ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಗೆಲುವಿಗೆ 212 ರನ್ ಗುರಿ ನೀಡಿದೆ.

ಇಲ್ಲಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಬುಧವಾರ ಸುರಿದ ಭಾರೀ ಮಳೆಯಿಂದಾಗಿ ಪಂದ್ಯವು ವಿಳಂಬವಾಗಿ ಆರಂಭವಾಯಿತು. ಪಂದ್ಯವನ್ನು 15 ಓವರ್‌ಗೆ ಕಡಿತಗೊಳಿಸಲಾಯಿತು. ಟಾಸ್ ಜಯಿಸಿದ ಪಂಜಾಬ್ ತಂಡ ಬೆಂಗಳೂರನ್ನು ಬ್ಯಾಟಿಂಗ್‌ಗೆ ಇಳಿಸಿತು.

ಮಳೆ ನಿಂತ ಮೇಲೆ ಸಿಡಿಲು-ಗುಡುಗಿನಂತೆ ಆರ್ಭಟಿಸತೊಡಗಿದ ಕ್ರಿಸ್ ಗೇಲ್(73 ರನ್, 32 ಎಸೆತ, 4 ಬೌಂಡರಿ, 8 ಸಿಕ್ಸರ್) ಹಾಗೂ ಭರ್ಜರಿ ಫಾರ್ಮ್‌ನಲ್ಲಿರುವ ಕೊಹ್ಲಿ(113, 50 ಎಸೆತ, 12 ಬೌಂಡರಿ, 8 ಸಿಕ್ಸರ್) ಮೊದಲ ವಿಕೆಟ್‌ಗೆ 11ನೆ ಓವರ್‌ನಲ್ಲಿ 147 ರನ್ ಜೊತೆಯಾಟ ನಡೆಸಿ ಆರ್‌ಸಿಬಿಗೆ ಭದ್ರ ಬುನಾದಿ ಹಾಕಿಕೊಟ್ಟರು.

ಗೇಲ್ 26 ಎಸೆತಗಳಲ್ಲಿ 4 ಬೌಂಡರಿ, 5 ಸಿಕ್ಸರ್ ನೆರವಿನಿಂದ ಅರ್ಧಶತಕ ಪೂರೈಸಿದರು. 8 ಸಿಕ್ಸರ್ ಸಿಡಿಸಿದ ಗೇಲ್ ಆರ್ಭಟಕ್ಕೆ ಕೊನೆಗೂ ಅಕ್ಷರ ಪಟೇಲ್ ತೆರೆ ಎಳೆದರು.

ಗೇಲ್ ನಿರ್ಗಮನದ ಬಳಿಕ ಬ್ಯಾಟಿಂಗ್ ಮುಂದುವರಿಸಿದ ಕೊಹ್ಲಿ ಕೇವಲ 47 ಎಸೆತಗಳಲ್ಲಿ 11 ಬೌಂಡರಿ, 7 ಸಿಕ್ಸರ್‌ಗಳ ಬೆಂಬಲದಿಂದ ಶತಕ ಪೂರೈಸಿದರು. ಈ ವರ್ಷದ ಐಪಿಎಲ್‌ನಲ್ಲಿ ನಾಲ್ಕನೆ ಶತಕ ಬಾರಿಸಿ ದಾಖಲೆ ಬರೆದ ಕೊಹ್ಲಿ ತಂಡದ ಮೊತ್ತವನ್ನು 200ರ ಗಡಿ ತಲುಪಿಸಿ ಸಂದೀಪ್ ಶರ್ಮಗೆ ಔಟಾದರು.

ಔಟಾಗದೆ ಉಳಿದ ಕೆಎಲ್ ರಾಹುಲ್(16) ಹಾಗೂ ವ್ಯಾಟ್ಸನ್ ಬೆಂಗಳೂರು ತಂಡ 15 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 211 ರನ್ ಗಳಿಸಲು ನೆರವಾದರು.

ಪಂಜಾಬ್‌ನ ಬೌಲಿಂಗ್ ವಿಭಾಗದಲ್ಲಿ ಸಂದೀಪ್ ಶರ್ಮ(1-29), ಅಬಾಟ್(1-48) ಹಾಗೂ ಅಕ್ಷರ್ ಪಟೇಲ್(1-46) ತಲಾ ಒಂದು ವಿಕೆಟ್ ಪಡೆದರು. ಸ್ಪಿನ್ನರ್ ಕಾರಿಯಪ್ಪ 3 ಓವರ್‌ಗಳಲ್ಲಿ 55 ರನ್ ನೀಡಿ ಅತ್ಯಂತ ದುಬಾರಿ ಬೌಲರ್ ಎನಿಸಿಕೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News