18 ವರ್ಷ ಹಳೆಯ ರಾಷ್ಟ್ರೀಯ ದಾಖಲೆ ಮುರಿದ ಭಾರತದ ಮಹಿಳಾ ತಂಡ
ಐಎಎಎಫ್ ವರ್ಲ್ಡ್ ಚಾಲೆಂಜ್ ಅಥ್ಲೆಟಿಕ್ ಟೂರ್ನಿ
ಬೀಜಿಂಗ್, ಮೇ 18: ಐಎಎಎಫ್ ವರ್ಲ್ಡ್ ಚಾಲೆಂಜ್ ಅಥ್ಲೆಟಿಕ್ ಟೂರ್ನಿಯಲ್ಲಿ 4ನೆ ಸ್ಥಾನ ಪಡೆದ ಭಾರತದ 4-100 ಮೀ ಮಹಿಳೆಯರ ರಿಲೇ ತಂಡ 18 ವರ್ಷಗಳ ಹಿಂದಿನ ರಾಷ್ಟ್ರೀಯ ದಾಖಲೆಯನ್ನು ಮುರಿಯಿತು.
ಬುಧವಾರ ಇಲ್ಲಿ ನಡೆದ 4-100 ಮಿ. ರಿಲೇ ಸ್ಪರ್ಧೆಯಲ್ಲಿ ದ್ಯುತಿ ಚಂದ್, ಸೃಬಾನಿ ನಂದಾ, ಎಚ್‌ಎಂ ಜ್ಯೋತಿ ಹಾಗೂ ಮೆರ್ಲಿನ್ ಜೋಸೆಫ್ ಅವರಿದ್ದ ಭಾರತದ ಮಹಿಳಾ ರಿಲೇ ತಂಡ 44.03 ನಿಮಿಷದಲ್ಲಿ ಗುರಿ ತಲುಪಿತು.
ಈ ಮೂಲಕ 18 ವರ್ಷಗಳ ಹಿಂದೆ 1998ರಲ್ಲಿ ಜಪಾನ್‌ನಲ್ಲಿ ನಡೆದ ಸ್ಪರ್ಧೆಯಲ್ಲಿ 44.43 ನಿಮಿಷದಲ್ಲಿ ಗುರಿ ತಲುಪಿ ನ್ಯಾಶನಲ್ ರೆಕಾರ್ಡ್ ಮಾಡಿದ್ದ ಸರಸ್ವತಿ ಡೇ, ರೋಹಿತ್ ಮಿಸ್ತ್ರಿ, ಇಬಿ ಶೈಲಾ ಹಾಗೂ ಪಿ.ಟಿ. ಉಷಾ ಅವರ ದಾಖಲೆಯನ್ನು ಮುರಿದರು.
ಭಾರತೀಯ ತಂಡದಲ್ಲಿ ಮೆರ್ಲಿನ್ ಓಟವನ್ನು ಆರಂಭಿಸಿದರೆ, ಜ್ಯೋತಿ, ಸೃಬಾನಿ ಹಾಗೂ ದುತೀ ಅವರನ್ನು ಓಟದಲ್ಲಿ ಸೇರಿಕೊಂಡರು. ಆತಿಥೇಯ ಚೀನಾ ಎ ಹಾಗೂ ಚೀನಾ ಬಿ ತಂಡ ಮೊದಲ ಹಾಗೂ 3ನೆ ಸ್ಥಾನ ಪಡೆಯಿತು.
ಜಪಾನ್ ಬೆಳ್ಳಿ ಪದಕ ಜಯಿಸಿತು. ಗುರುವಾರ ಬೆಳಗ್ಗೆ ನಡೆಯಲಿರುವ ತೈವಾನ್ ಓಪನ್ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್-2016ರಲ್ಲಿ ಭಾಗವಹಿಸಲು ಭಾರತ ತಂಡ ತೈವಾನ್‌ಗೆ ಪ್ರಯಾಣ ಬೆಳೆಸಲಿದೆ.