×
Ad

ಉಬೇರ್ ಕಪ್: ಭಾರತದ ಮಹಿಳಾ ಬ್ಯಾಡ್ಮಿಂಟನ್ ತಂಡ ಕ್ವಾರ್ಟರ್‌ಫೈನಲ್‌ಗೆ

Update: 2016-05-18 23:46 IST

ನ್ಶಾನ್(ಚೀನಾ), ಮೇ 18: ಮೂರನೆ ಹಾಗೂ ಅಂತಿಮ ಡಿ ಗುಂಪಿನ ಪಂದ್ಯದಲ್ಲಿ ಜಪಾನ್ ವಿರುದ್ಧ 2-3 ಅಂತರದಿಂದ ಸೋತ ಹೊರತಾಗಿಯೂ ಭಾರತೀಯ ಮಹಿಳಾ ತಂಡ ಉಬೇರ್ ಕಪ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಕ್ವಾರ್ಟರ್ ಫೈನಲ್‌ಗೆ ತಲುಪಿದೆ.

ಭಾರತ ತಂಡ ‘ಡಿ’ ಗುಂಪಿನಲ್ಲಿ ಜಪಾನ್ ಬಳಿಕ 2ನೆ ಸ್ಥಾನದಲ್ಲಿದ್ದ ಕಾರಣ ನಾಕೌಟ್ ಹಂತಕ್ಕೆ ತೇರ್ಗಡೆಯಾಯಿತು. ಭಾರತ ತಂಡ ಆಸ್ಟ್ರೇಲಿಯ ಹಾಗೂ ಜರ್ಮನಿ ವಿರುದ್ಧ ಜಯ ಸಾಧಿಸಿತ್ತು.

ಇದೇ ವೇಳೆ, ಪುರುಷರ ತಂಡ ಥಾಮಸ್ ಕಪ್‌ನಲ್ಲಿ ಕಳಪೆ ಪ್ರದರ್ಶನ ಮುಂದುವರಿಸಿದ್ದು, ಬಿ ಗುಂಪಿನ ಕೊನೆಯ ಪಂದ್ಯದಲ್ಲಿ ಇಂಡೋನೇಷ್ಯಾದ ವಿರುದ್ಧ 0-5 ಅಂತರದಿಂದ ಸೋತು ಟೂರ್ನಿಯಿಂದ ಹೊರ ನಡೆದಿದೆ.

ಭಾರತದ ಪುರುಷರ ತಂಡ ಥಾಯ್ಲೆಂಡ್ ಹಾಗೂ ಹಾಂಕಾಂಗ್‌ನ ವಿರುದ್ಧದ ಮೊದಲೆರಡು ಪಂದ್ಯಗಳನ್ನು ಸೋತಿದ್ದು, ಚೀನಾದಲ್ಲಿ ಒಂದೂ ಗೆಲುವು ಸಾಧಿಸದೇ ಸ್ವದೇಶಕ್ಕೆ ವಾಪಸಾಗಿದೆ.

ಉಬೇರ್ ಕಪ್‌ನ ಮಹಿಳೆಯರ ಸಿಂಗಲ್ಸ್‌ನಲ್ಲಿ ಶಟ್ಲರ್‌ಗಳಾದ ಸೈನಾ ನೆಹ್ವಾಲ್ ಹಾಗೂ ಪಿ.ವಿ.ಸಿಂಧು ನೇರ ಸೆಟ್‌ಗಳಿಂದ ಜಯ ಸಾಧಿಸಿದ್ದಾರೆ. ಆದರೆ, ಎರಡು ಡಬಲ್ಸ್ ಪಂದ್ಯ ಹಾಗೂ ಮೂರನೆ ಸಿಂಗಲ್ಸ್ ಪಂದ್ಯದಲ್ಲಿ ಸೋತು 2014ರ ರನ್ನರ್ ಅಪ್ ಜಪಾನ್‌ಗೆ 2-3 ಅಂತರದಿಂದ ಶರಣಾಯಿತು.

ಸೈನಾ ವಿಶ್ವದ ನಂ.5ನೆ ಆಟಗಾರ್ತಿ ನೊರೊಮಿ ಒಕುಹರಾರನ್ನು 18-21, 6-21 ಸೆಟ್‌ಗಳಿಂದ ಸೋಲಿಸಿ ಕಳೆದ ವರ್ಷದ ದುಬೈ ವರ್ಲ್ಡ್ ಸೂಪರ್ ಸರಣಿಯ ಸೋಲಿಗೆ ಸೇಡು ತೀರಿಸಿಕೊಂಡರು.

ಎರಡನೆ ಸಿಂಗಲ್ಸ್‌ನಲ್ಲಿ ಪಿ.ವಿ ಸಿಂಧು ವಿಶ್ವದ ನಂ.11ನೆ ಆಟಗಾರ್ತಿ ಅಕಾನೆ ಯಮಗುಚಿ ವಿರುದ್ಧ 21-11, 21-18 ಗೇಮ್‌ಗಳ ಅಂತರದಿಂದ ಗೆಲುವು ಸಾಧಿಸಿ ಭಾರತಕ್ಕೆ 2-0 ಮುನ್ನಡೆ ಒದಗಿಸಿಕೊಟ್ಟರು.

ಜ್ವಾಲಾ ಗುಟ್ಟಾ ಹಾಗೂ ಸಿಕ್ಕಿ ರೆಡ್ಡಿ ವಿಶ್ವದ ನಂ.1 ಜೋಡಿ ಮಿಸಾಕಿ ಮಟ್ಸುಟೊಮ ಹಾಗೂ ಅಯಾಕಾ ತಕಹಶಿ ವಿರುದ್ಧ 11-21, 8-21 ಗೇಮ್‌ಗಳ ಅಂತರದಿಂದ ಸುಲಭವಾಗಿ ಶರಣಾದರು.

ಮೂರನೆ ಸಿಂಗಲ್ಸ್ ಪಂದ್ಯದಲ್ಲಿ ಋತ್ವಿಕಾ ಶಿವಾನಿ ವಿಶ್ವದ ನಂ.12ನೆ ಆಟಗಾರ್ತಿ ಸಯಾಕಾ ಸಾಟೊ ವಿರುದ್ಧ 7-21, 14-21 ಸೆಟ್‌ಗಳ ಅಂತರದಿಂದ ಸೋತರು.

ನಿರ್ಣಾಯಕ ಮಹಿಳೆಯರ ಡಬಲ್ಸ್‌ನಲ್ಲಿ ಅಶ್ವಿನಿ ಪೊನ್ನಪ್ಪ-ಸಿಂಧು ಜೋಡಿ ಶಿಝುಕಾ ಮಟ್ಸುಯೊ ಹಾಗೂ ಮ್ಯಾಮಿ ನೈಟೊ ವಿರುದ್ಧ 21-15, 19-21, 16-21 ಗೇಮ್‌ಗಳ ಅಂತರದಿಂದ ಸೋತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News