ಬೆಂಗಳೂರಿಗೆ ಭರ್ಜರಿ ಜಯ, ಪ್ಲೇ-ಆಸೆ ಜೀವಂತ
ಕೊಹ್ಲಿ-ಕ್ರಿಸ್ ಗೇಲ್ ಆರ್ಭಟ
ಬೆಂಗಳೂರು, ಮೇ 18: ನಾಯಕ ವಿರಾಟ್ ಕೊಹ್ಲಿ ಶತಕ ಹಾಗೂ ಸ್ಫೋಟಕ ದಾಂಡಿಗ ಕ್ರಿಸ್ ಗೇಲ್ ಅರ್ಧಶತಕದ ಕೊಡುಗೆಯ ನೆರವಿನಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ವಿರುದ್ಧ ಡಿ/ಎಲ್ ಪದ್ದತಿಯನ್ವಯ 82 ರನ್ ಅಂತರದಿಂದ ಜಯ ಸಾಧಿಸಿ ಐಪಿಎಲ್ ಪ್ಲೇ-ಆಫ್ ಆಸೆಯನ್ನು ಜೀವಂತವಾಗಿರಿಸಿದೆ.
ಇಲ್ಲಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಬುಧವಾರ ಸುರಿದ ಭಾರೀ ಮಳೆಯಿಂದಾಗಿ ಪಂದ್ಯವು ವಿಳಂಬವಾಗಿ ಆರಂಭವಾಯಿತು. ಪಂದ್ಯವನ್ನು 15 ಓವರ್‌ಗೆ ಕಡಿತಗೊಳಿಸಲಾಯಿತು.
ಟಾಸ್ ಜಯಿಸಿದ ಪಂಜಾಬ್ ತಂಡ ಬೆಂಗಳೂರನ್ನು ಬ್ಯಾಟಿಂಗ್‌ಗೆ ಇಳಿಸಿತು. ಗೆಲ್ಲಲು ಕಠಿಣ ಸವಾಲು ಪಡೆದಿದ್ದ ಪಂಜಾಬ್ ತಂಡ ಮಳೆಯಿಂದಾಗಿ ಪಂದ್ಯ ನಿಂತಾಗ 14ನೆ ಓವರ್‌ನಲ್ಲಿ 9 ವಿಕೆಟ್ ನಷ್ಟಕ್ಕೆ 120 ರನ್ ಗಳಿಸಿತು.
ಡಿಎಲ್ ನಿಯಮದನ್ವಯ ಆರ್‌ಸಿಬಿ ಭರ್ಜರಿ ಜಯ ಸಾಧಿಸಿತು. ಈ ಗೆಲುವಿನ ಮೂಲಕ 13 ಪಂದ್ಯಗಳಲ್ಲಿ 14 ಅಂಕ ಗಳಿಸಿದ ಆರ್‌ಸಿಬಿ ಅಂಕಪಟ್ಟಿಯಲ್ಲಿ 3ನೆ ಸ್ಥಾನಕ್ಕೆ ಜಿಗಿಯಿತು.
ಬೆಂಗಳೂರಿನ ಚಾಹಲ್(4-25), ಅರವಿಂದ್(2-18) ಹಾಗೂ ವ್ಯಾಟ್ಸನ್(2-7) ದಾಳಿಗೆ ಸಿಲುಕಿದ ಪಂಜಾಬ್ ತಂಡದ ಪರ ವೃದ್ಧಿಮಾನ್ ಸಹಾ(24) ಸರ್ವಾಧಿಕ ರನ್ ಬಾರಿಸಿದರು.
ಕೋಲ್ಕತಾ ವಿರುದ್ಧದ ಪಂದ್ಯದ ಕ್ಯಾಚ್ ಪಡೆಯುವಾಗ ಎಡಗೈ ಆಗಿರುವ ಗಾಯಕ್ಕೆ 9 ಹೊಲಿಗೆಯನ್ನು ಹಾಕಿಸಿಕೊಂಡಿದ್ದ ಕೊಹ್ಲಿ ಪಂಜಾಬ್ ವಿರುದ್ಧ ನೋವಿನ ನಡುವೆಯೂ ಭರ್ಜರಿ ಬ್ಯಾಟಿಂಗ್ ಮಾಡಿ ತಂಡ ಬೃಹತ್ ಮೊತ್ತ ಗಳಿಸಲು ನೆರವಾಗಿದ್ದರು. ಈ ಸಾಹಸಕ್ಕೆ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.
ಆರ್‌ಸಿಬಿ 211/3: ಇದಕ್ಕೆ ಮೊದಲು ಸಿಕ್ಸರ್ ಹಾಗೂ ಬೌಂಡರಿ ಸುರಿಮಳೆಗರೆದ ಕ್ರಿಸ್ ಗೇಲ್(73 ರನ್, 32 ಎಸೆತ, 4 ಬೌಂಡರಿ, 8 ಸಿಕ್ಸರ್) ಹಾಗೂ ಭರ್ಜರಿ ಫಾರ್ಮ್‌ನಲ್ಲಿರುವ ಕೊಹ್ಲಿ(113, 50 ಎಸೆತ, 12 ಬೌಂಡರಿ, 8 ಸಿಕ್ಸರ್) ಮೊದಲ ವಿಕೆಟ್‌ಗೆ 11ನೆ ಓವರ್‌ನಲ್ಲಿ 147 ರನ್ ಜೊತೆಯಾಟ ನಡೆಸಿ ಆರ್‌ಸಿಬಿಗೆ ಭದ್ರ ಬುನಾದಿ ಹಾಕಿಕೊಟ್ಟರು. ಗೇಲ್ 26 ಎಸೆತಗಳಲ್ಲಿ 4 ಬೌಂಡರಿ, 5 ಸಿಕ್ಸರ್ ನೆರವಿನಿಂದ ಅರ್ಧಶತಕ ಪೂರೈಸಿದರು.
8 ಸಿಕ್ಸರ್ ಸಿಡಿಸಿದ ಗೇಲ್ ಆರ್ಭಟಕ್ಕೆ ಕೊನೆಗೂ ಅಕ್ಷರ ಪಟೇಲ್ ತೆರೆ ಎಳೆದರು. ಗೇಲ್ ನಿರ್ಗಮನದ ಬಳಿಕ ಬ್ಯಾಟಿಂಗ್ ಮುಂದುವರಿಸಿದ ಕೊಹ್ಲಿ ಕೇವಲ 47 ಎಸೆತಗಳಲ್ಲಿ 11 ಬೌಂಡರಿ, 7 ಸಿಕ್ಸರ್‌ಗಳ ಬೆಂಬಲದಿಂದ ಶತಕ ಪೂರೈಸಿದರು. ಈ ವರ್ಷದ ಐಪಿಎಲ್‌ನಲ್ಲಿ ನಾಲ್ಕನೆ ಶತಕ ಬಾರಿಸಿ ದಾಖಲೆ ಬರೆದ ಕೊಹ್ಲಿ ತಂಡದ ಮೊತ್ತವನ್ನು 200ರ ಗಡಿ ತಲುಪಿಸಿ ಸಂದೀಪ್ ಶರ್ಮಗೆ ಔಟಾದರು.
ಔಟಾಗದೆ ಉಳಿದ ಕೆಎಲ್ ರಾಹುಲ್(16) ಹಾಗೂ ವ್ಯಾಟ್ಸನ್ ಬೆಂಗಳೂರು ತಂಡ 15 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 211 ರನ್ ಗಳಿಸಲು ನೆರವಾದರು.
ಪಂಜಾಬ್‌ನ ಬೌಲಿಂಗ್ ವಿಭಾಗದಲ್ಲಿ ಸಂದೀಪ್ ಶರ್ಮ(1-29), ಅಬಾಟ್(1-48) ಹಾಗೂ ಅಕ್ಷರ್ ಪಟೇಲ್(1-46) ತಲಾ ಒಂದು ವಿಕೆಟ್ ಪಡೆದರು. ಸ್ಪಿನ್ನರ್ ಕಾರಿಯಪ್ಪ 3 ಓವರ್‌ಗಳಲ್ಲಿ 55 ರನ್ ನೀಡಿ ಅತ್ಯಂತ ದುಬಾರಿ ಬೌಲರ್ ಎನಿಸಿಕೊಂಡರು.
ಸ್ಕೋರ್ ವಿವರ
ರಾಯಲ್ ಚಾಲೆಂಜರ್ಸ್ ಬೆಂಗಳೂರು
15 ಓವರ್‌ಗಳಲ್ಲಿ 211/3
ಕ್ರಿಸ್ ಗೇಲ್ ಸಿ ಮಿಲ್ಲರ್ ಬಿ ಪಟೇಲ್ 73
ವಿರಾಟ್ ಕೊಹ್ಲಿ ಸಿ ಮಿಲ್ಲರ್ ಬಿ ಸಂದೀಪ್ 113
ಎಬಿಡಿವಿಲಿಯರ್ಸ್ ಬಿ ಅಬಾಟ್ 00
ಕೆಎಲ್ ರಾಹುಲ್ ಔಟಾಗದೆ 16
ವ್ಯಾಟ್ಸನ್ ಔಟಾಗದೆ 01
ಇತರ 08
ವಿಕೆಟ್ ಪತನ: 1-147, 2-154, 3-199
ಬೌಲಿಂಗ್ ವಿವರ
ಸಂದೀಪ್ ಶರ್ಮ 3-0-29-0
ಮೋಹಿತ್ ಶರ್ಮ 3-0-33-0
ಕೆಜೆ ಅಬಾಟ್ 3-0-48-1
ಕಾರಿಯಪ್ಪ 3-0-55-0
ಅಕ್ಷರ್ ಪಟೇಲ್ 3-0-46-1.
ಕಿಂಗ್ಸ್ ಇಲೆವೆನ್ ಪಂಜಾಬ್
14 ಓವರ್‌ಗಳಲ್ಲಿ 120/9
ವಿಜಯ್ ಬಿ ಅರವಿಂದ್ 16
ಅಮ್ಲ ಸಿ ಜೋರ್ಡನ್ ಬಿ ಅರವಿಂದ್ 09
ಸಹಾ ಎಲ್ಬಿಡಬ್ಲು ಚಾಹಲ್ 24
ಮಿಲ್ಲರ್ ಸಿ ಡಿವಿಲಿಯರ್ಸ್ ಬಿ ವ್ಯಾಟ್ಸನ್ 03
ಗುರುಕೀರತ್ ಸಿಂಗ್ ಸಿ ಗೇಲ್ ಬಿ ಚಾಹಲ್ 18
ಅಕ್ಷರ್ ಪಟೇಲ್ ಸಿ ಕೊಹ್ಲಿ ಬಿ ವ್ಯಾಟ್ಸನ್ 13
ಬೆಹರ್ದಿನ್ ಸಿ ವಿಲಿಯರ್ಸ್ ಬಿ ಚಾಹಲ್ 00
ಅಬಾಟ್ ಸಿ ವಿಲಿಯರ್ಸ್ ಬಿ ಚಾಃಲ್ 00
ಎಂ.ಶರ್ಮ ರನೌಟ್ 14
ಕಾರಿಯಪ್ಪ ಔಟಾಗದೆ 12
ಸಂದೀಪ್ ಶರ್ಮ ಔಟಾಗದೆ 05
ಇತರ 06
ವಿಕೆಟ್‌ಪತನ: 1-17, 2-43, 3-53, 4-54, 5-77, 6-79, 7-80, 8-96, 9-105.
ಬೌಲಿಂಗ್ ವಿವರ:
ಬಿನ್ನಿ 1-0-11-0
ಅರವಿಂದ್ 2-0-18-2
ಜೋರ್ಡನ್ 1-0-12-0
ಚಾಹಲ್ 3-0-25-4
ವ್ಯಾಟ್ಸನ್ 2-0-7-2
ಆ್ಯರೊನ್ 1-0-17-0
ಗೇಲ್ 3-0-25-0
ಸಚಿನ್ ಬೇಬಿ 1-0-4-0.
ಅಂಕಿ-ಅಂಶ
4,002: ವಿರಾಟ್ ಕೊಹ್ಲಿ ಐಪಿಎಲ್‌ನಲ್ಲಿ ಒಟ್ಟು 4,002 ರನ್ ಗಳಿಸಿದರು. ಸುರೇಶ್ ರೈನಾ(3,985) ದಾಖಲೆಯನ್ನು ಹಿಂದಿಕ್ಕಿದ ಕೊಹ್ಲಿ ಐಪಿಎಲ್‌ನಲ್ಲಿ 4 ಸಾವಿರ ರನ್ ಗಳಿಸಿದ ಮೊದಲ ಬ್ಯಾಟ್ಸ್‌ಮನ್ ಎನಿಸಿಕೊಂಡರು.
04: ಕೊಹ್ಲಿ ಪ್ರಸ್ತುತ ಐಪಿಎಲ್ ಟೂರ್ನಿಯಲ್ಲಿ ನಾಲ್ಕನೆ ಶತಕ ಬಾರಿಸಿದರು. ಒಂದೆ ಆವೃತ್ತಿಯ ಟೂರ್ನಿಯಲ್ಲಿ ಆಟಗಾರ ಬಾರಿಸಿದ ಗರಿಷ್ಠ ಶತಕ ಇದಾಗಿದೆ.
14.06: ಬೆಂಗಳೂರು ತಂಡ ಪಂಜಾಬ್‌ನ ವಿರುದ್ಧ 14.06ರ ರನ್‌ರೇಟ್‌ನಲ್ಲಿ 15 ಓವರ್‌ಗಳಲ್ಲಿ 211 ರನ್ ಗಳಿಸಿತು.
2,042: ಕೊಹ್ಲಿ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಆಡಿರುವ ಟ್ವೆಂಟಿ-20 ಪಂದ್ಯದಲ್ಲಿ ಒಟ್ಟು 2,042 ರನ್ ಗಳಿಸಿದರು. ಒಂದೇ ಮೈದಾನದಲ್ಲಿ ಟಿ-20ಯಲ್ಲಿ 2000 ಹಾಗೂ ಅದಕ್ಕಿಂತ ಹೆಚ್ಚು ರನ್ ಗಳಿಸಿದ ಮೊದಲ ದಾಂಡಿಗ ಕೊಹ್ಲಿ.
47: ಕೊಹ್ಲಿ ಪಂಜಾಬ್ ವಿರುದ್ಧ 47 ಎಸೆತಗಳಲ್ಲಿ ಶತಕ ಪೂರೈಸಿದರು. ಇದು ಕೊಹ್ಲಿ ಈ ವರ್ಷದ ಐಪಿಎಲ್‌ನಲ್ಲಿ ಬಾರಿಸಿದ 4 ಶತಕಗಳ ಪೈಕಿ ಅತ್ಯಂತ ವೇಗದ ಶತಕವಾಗಿದೆ.