ಮೇರಿ ಕೋಮ್ ಒಲಿಂಪಿಕ್ಸ್ ಕನಸು ಭಗ್ನ
ಅಸ್ಟಾನಾ(ಕಝಕ್‌ಸ್ತಾನ), ಮೇ 21: ಐದು ಬಾರಿ ವಿಶ್ವ ಚಾಂಪಿಯನ್ ಆಗಿರುವ ಭಾರತದ ಹಿರಿಯ ಬಾಕ್ಸರ್ ಮೇರಿ ಕೋಮ್ ಅವರ ಸತತ ಎರಡನೆ ಒಲಿಂಪಿಕ್ಸ್‌ನಲ್ಲಿ ಭಾಗವಹಿಸುವ ಕನಸು ಭಗ್ನಗೊಂಡಿದೆ.
ಒಲಿಂಪಿಕ್ಸ್‌ಗೆ ಅರ್ಹತಾ ಟೂರ್ನಿಯಾಗಿದ್ದ ಎಐಬಿಎ ಮಹಿಳೆಯರ ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಮೇರಿ ಕೋಮ್ ಸೋಲುವ ಮೂಲಕ ಒಲಿಂಪಿಕ್ಸ್‌ನಲ್ಲಿ ಆಡುವ ವಿಶ್ವಾಸ ಕಮರಿಹೋಗಿದೆ.
2012ರ ಲಂಡನ್ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕವನ್ನು ಜಯಿಸಿದ್ದ ಮೇರಿ ಕೋಮ್ ಶನಿವಾರ ಇಲ್ಲಿ ನಡೆದ ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನ ಎರಡನೆ ಸುತ್ತಿನ ಪಂದ್ಯದಲ್ಲಿ 51 ಕೆ.ಜಿ. ತೂಕ ವಿಭಾಗದಲ್ಲಿ ಜರ್ಮನಿಯ ಅಝಿಝ್ ನಿಮಾನಿ ವಿರುದ್ಧ 0-2 ಅಂತರದಿಂದ ಸೋತಿದ್ದಾರೆ.
ಈ ಟೂರ್ನಿಯಲ್ಲಿ ಸೆಮಿಫೈನಲ್‌ಗೆ ತಲುಪುವ ಬಾಕ್ಸರ್ ಮುಂಬರುವ ರಿಯೋ ಗೇಮ್ಸ್‌ನಲ್ಲಿ ಭಾಗವಹಿಸಲಿದ್ದಾರೆ. ಮೇರಿ ವಿರುದ್ಧ ಜಯ ಸಾಧಿಸಿರುವ ನಿಮಾನಿ ಮುಂದಿನ ಸುತ್ತಿನಲ್ಲಿ ಇಟಲಿಯ ಅಗ್ರ ಶ್ರೇಯಾಂಕದ ಬಾಕ್ಸರ್ ಡೇವಿಡ್ ಮರ್ಝಿಯಾರನ್ನು ಎದುರಿಸಲಿದ್ದಾರೆ.
ಮಣಿಪುರದ ಮೇರಿ ಕೋಮ್ ಮೊದಲ ಹಾಗೂ ಎರಡನೆ ಸುತ್ತಿನ ಅರಂಭದಲ್ಲಿ ಆಕ್ರಮಣಕಾರಿ ಆಟದಿಂದ ಗಮನ ಸೆಳೆದರು. ಆದರೆ, ತಿರುಗೇಟು ನೀಡಿದ ನಿಮಾನಿ 2-0 ಅಂತರದಿಂದ ಜಯ ಸಾಧಿಸಿದ್ದಾರೆ. ರಿಯೋ ಒಲಿಂಪಿಕ್ಸ್‌ನಲ್ಲಿ 51 ಕೆಜಿ, 60 ಕೆಜಿ ಹಾಗೂ 75 ಕೆಜಿ ವಿಭಾಗದಲ್ಲಿ ಅರ್ಹತೆ ಪಡೆಯಲು ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಶಿಪ್ ಕೊನೆಯ ಅರ್ಹತಾ ಟೂರ್ನಿಯಾಗಿದೆ.