ಮೇ 22ಕ್ಕೆ ಬಿಸಿಸಿಐ ವಿಶೇಷ ಮಹಾಸಭೆ: ಅಧ್ಯಕ್ಷರಾಗಿ ಅನುರಾಗ್ ಠಾಕೂರ್ ಆಯ್ಕೆ ಸಾಧ್ಯತೆ
ಮುಂಬೈ, ಮೇ 21: ಇಲ್ಲಿ ರವಿವಾರ ನಡೆಯಲಿರುವ ಬಿಸಿಸಿಐನ ವಿಶೇಷ ಸಾಮಾನ್ಯ ಸಭೆಯಲ್ಲಿ(ಎಸ್‌ಜಿಎಂ) ಶಶಾಂಕ್ ಮನೋಹರ್ ರಾಜೀನಾಮೆಯಿಂದ ತೆರವಾಗಿರುವ ಕ್ರಿಕೆಟ್ ಮಂಡಳಿಯ ಅಧ್ಯಕ್ಷ ಸ್ಥಾನಕ್ಕೆ ಅನುರಾಗ್ ಠಾಕೂರ್ ಅವಿರೋಧವಾಗಿ ಆಯ್ಕೆಯಾಗುವ ಸಾಧ್ಯತೆಯಿದೆ. ಮನೋಹರ್ ಬಿಸಿಸಿಐ ಅಧ್ಯಕ್ಷ ಸ್ಥಾನವನ್ನು ತ್ಯಜಿಸಿದ ಬಳಿಕ ಇತ್ತೀಚೆಗೆ ಐಸಿಸಿಯ ಸ್ವತಂತ್ರ ಮುಖ್ಯಸ್ಥರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದರು.
ಪ್ರಸ್ತುತ ಬಿಸಿಸಿಐ ಪ್ರಧಾನ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿರುವ ಠಾಕೂರ್ ಪೂರ್ವ ವಲಯದಿಂದ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾಗುವ ಸಾಧ್ಯತೆಯಿದೆ. ಲೋಕಸಭೆಯಲ್ಲಿ ಬಿಜೆಪಿ ಸಂಸದರಾಗಿರುವ ಠಾಕೂರ್‌ಗೆ ಪೂರ್ವವಲಯದ ಸದಸ್ಯ ರಾಜ್ಯಗಳಾದ ಬಂಗಾಳ, ಅಸ್ಸಾಂ, ಜಾರ್ಖಂಡ್, ತ್ರಿಪುರಾ ಹಾಗೂ ನ್ಯಾಶನಲ್ ಕ್ರಿಕೆಟ್ ಕ್ಲಬ್‌ನ ಸಂಪೂರ್ಣ ಬೆಂಬಲವಿದೆ.
ಜಸ್ಟಿಸ್ ಆರ್‌ಎಂ ಲೋಧಾ ಸಮಿತಿ ಶಿಫಾರಸುಗಳನ್ನು ಜಾರಿಗೊಳಿಸಲು ಸುಪ್ರೀಂಕೋರ್ಟ್‌ನಿಂದ ಒತ್ತಡವನ್ನು ಎದುರಿಸುತ್ತಿರುವ ಬಿಸಿಸಿಐಗೆ 41ರ ಹರೆಯದ ಠಾಕೂರ್ ಸಾರಥ್ಯವಹಿಸಲು ಸಜ್ಜಾಗಿದ್ದಾರೆ.