×
Ad

ಅಂತಿಮ ಓವರ್‌ನಲ್ಲಿ ಧೋನಿ ಆರ್ಭಟ: ಗೆಲುವಿನೊಂದಿಗೆ ಟೂರ್ನಿ ಮುಗಿಸಿದ ಪುಣೆ

Update: 2016-05-21 23:14 IST

ವಿಶಾಖಪಟ್ಟಣ, ಮೇ 21: ಒಂಬತ್ತನೆಯ ಆವೃತ್ತಿಯ ಐಪಿಎಲ್‌ನ ತನ್ನ ಅಂತಿಮ ಲೀಗ್ ಪಂದ್ಯದಲ್ಲಿ ಕೊನೆಯ ಓವರ್‌ನಲ್ಲಿ 23 ರನ್ ಬಾರಿಸಿದ ಎಂ.ಎಸ್. ಧೋನಿ ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ ಪುಣೆ ಸೂಪರ್‌ಜಯಂಟ್ಸ್ ತಂಡಕ್ಕೆ 4 ವಿಕೆಟ್‌ಗಳ ರೋಚಕ ಗೆಲುವು ತಂದುಕೊಟ್ಟರು.

ಇಲ್ಲಿ ಶನಿವಾರ ನಡೆದ 53ನೆ ಐಪಿಎಲ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಪಂಜಾಬ್ ತಂಡ 7 ವಿಕೆಟ್ ನಷ್ಟಕ್ಕೆ 172 ರನ್ ಗಳಿಸಿತು. ಗೆಲ್ಲಲು ಕಠಿಣ ಸವಾಲು ಪಡೆದ ಪುಣೆ ತಂಡ ಒಂದು ಹಂತದಲ್ಲಿ 144 ರನ್‌ಗೆ 6 ವಿಕೆಟ್ ಕಳೆದುಕೊಂಡು ಸೋಲಿನತ್ತ ಮುಖ ಮಾಡಿತ್ತು.

ಪುಣೆಗೆ ಅಂತಿಮ ಓವರ್‌ನಲ್ಲಿ ಗೆಲುವಿಗೆ 23 ರನ್ ಅವಶ್ಯಕತೆಯಿತ್ತು. ಅಕ್ಷರ್ ಪಟೇಲ್ ಎಸೆದ ಅಂತಿಮ ಓವರ್‌ನಲ್ಲಿ 3 ಭರ್ಜರಿ ಸಿಕ್ಸರ್ ಹಾಗೂ 1 ಬೌಂಡರಿ ಬಾರಿಸಿದ ಧೋನಿ ಕೊನೆಯ ಎಸೆತದಲ್ಲಿ ತಂಡಕ್ಕೆ ರೋಚಕ ಗೆಲುವು ತಂದುಕೊಟ್ಟರು.

ಔಟಾಗದೆ 64 ರನ್(32 ಎಸೆತ, 4 ಬೌಂಡರಿ, 5 ಸಿಕ್ಸರ್) ಬಾರಿಸಿದ ಧೋನಿ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದರು. 86 ರನ್‌ಗೆ 5 ವಿಕೆಟ್ ಕಳೆದುಕೊಂಡಿದ್ದಾಗ ಜೊತೆಯಾದ ಧೋನಿ ಹಾಗೂ ತಿಸ್ಸಾರ ಪೆರೇರ(23 ರನ್) 6ನೆ ವಿಕೆಟ್‌ಗೆ 58 ರನ್ ಸೇರಿಸಿ ತಂಡದ ಗೆಲುವಿನ ವಿಶ್ವಾಸ ಹೆಚ್ಚಿಸಿದರು. ಪೆರೇರ ಮೋಹಿತ್ ಶರ್ಮಗೆ ವಿಕೆಟ್ ಒಪ್ಪಿಸಿದಾಗ ಪುಣೆಗೆ 11 ಎಸೆತಗಳಲ್ಲಿ 29 ರನ್ ಅಗತ್ಯವಿತ್ತು. ಆಗ 7ನೆ ವಿಕೆಟ್‌ಗೆ ಅಶ್ವಿನ್‌ರೊಂದಿಗೆ 29 ರನ್ ಸೇರಿಸಿದ ಧೋನಿ ತಂಡ ಗೆಲುವಿನೊಂದಿಗೆ ಟೂರ್ನಿ ಕೊನೆಗೊಳಿಸಲು ನೆರವಾದರು.

ಅಂಕಪಟ್ಟಿಯಲ್ಲಿ ಕೊನೆಯ ಎರಡು ಸ್ಥಾನ ಪಡೆದು ಈಗಾಗಲೇ ಪ್ಲೇ-ಆಫ್ ಸ್ಪರ್ಧೆಯಿಂದ ಹೊರ ನಡೆದಿರುವ ಪುಣೆ-ಪಂಜಾಬ್‌ಗೆ ಇದು ಕೇವಲ ಔಪಚಾರಿಕ ಪಂದ್ಯವಾಗಿತ್ತು.

 ಪಂಜಾಬ್ 172/7: ಇದಕ್ಕೆ ಮೊದಲು ಬ್ಯಾಟಿಂಗ್ ಮಾಡಿದ್ದ ಪಂಜಾಬ್ ತಂಡ ನಾಯಕ ಮುರಳಿ ವಿಜಯ್(59ರನ್, 41 ಎಸೆತ, 4 ಬೌಂಡರಿ, 3 ಸಿಕ್ಸರ್) ಹಾಗೂ ಗುರುಕೀರತ್ ಸಿಂಗ್(51 ರನ್, 30 ಎಸೆತ, 3 ಬೌಂಡರಿ,3 ಸಿಕ್ಸರ್) ಬಾರಿಸಿದ ಅರ್ಧಶತಕದ ನೆರವಿನಿಂದ ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್‌ಗಳ ನಷ್ಟಕ್ಕೆ 172 ರನ್ ಕಲೆ ಹಾಕಿತು.

 ಟಾಸ್ ಜಯಿಸಿ ಬ್ಯಾಟಿಂಗ್ ಆಯ್ದುಕೊಂಡಿದ್ದ ಪಂಜಾಬ್‌ನ ಪರ ಮೊದಲ ವಿಕೆಟ್‌ಗೆ 60 ರನ್ ಸೇರಿಸಿದ ವಿಜಯ್ ಹಾಗೂ ಹಾಶಿಮ್ ಅಮ್ಲ(30ರನ್)ಉತ್ತಮ ಆರಂಭವನ್ನು ನೀಡಿದರು. ಆಫ್ರಿಕದ ಹಿರಿಯ ಆಟಗಾರ ಅಮ್ಲ ಆಫ್ ಸ್ಪಿನ್ನರ್ ಆರ್.ಅಶ್ವಿನ್‌ಗೆ ವಿಕೆಟ್ ಒಪ್ಪಿಸಿದರು. ವೃದ್ದಿಮಾನ್ ಸಹಾ(3) ಝಾಂಪ ಬೌಲಿಂಗ್‌ನಲ್ಲಿ ಅಲ್ಪ ಮೊತ್ತಕ್ಕೆ ಔಟಾದರು.

ಆಗ 3ನೆ ವಿಕೆಟ್‌ಗೆ 58 ರನ್ ಜೊತೆಯಾಟ ನಡೆಸಿದ ಗುರುಕೀರತ್ ಸಿಂಗ್ ಹಾಗೂ ವಿಜಯ್ 10ನೆ ಓವರ್‌ನಲ್ಲಿ ತಂಡದ ಮೊತ್ತವನ್ನು 100ರ ಗಡಿ ದಾಟಿಸಿದರು. ಅಶ್ವಿನ್ ಎಸೆತವನ್ನು ಕೆಣಕಲು ಹೋದವಿಜಯ್ ಕ್ಲೀನ್‌ಬೌಲ್ಡಾದರು. ವಿಜಯ್ ನಿರ್ಗಮನದ ಬಳಿಕ ಇರ್ಫಾನ್ ಪಠಾಣ್ ಬೌಲಿಂಗ್‌ನಲ್ಲಿ ಸತತ 2 ಸಿಕ್ಸರ್ ಸಿಡಿಸಿದ ಗುರುಕೀರತ್ 30 ಎಸೆತಗಳಲ್ಲಿ 51 ರನ್ ಗಳಿಸಿದರು. ಗುರುಕೀರತ್ ಆರ್ಭಟಕ್ಕೆ ಅಶ್ವಿನ್ ತೆರೆ ಎಳೆದರು. ವಿಜಯ್ ಹಾಗೂ ಗುರುಕೀರತ್ ಔಟಾದ ಬಳಿಕ ಪಂಜಾಬ್ ಬ್ಯಾಟಿಂಗ್ ಕಳೆಗುಂದಿತು. ಸ್ಪಿನ್ನರ್ ಆರ್.ಅಶ್ವಿನ್(4-34) ಪುಣೆಯ ಪರ ಯಶಸ್ವಿ ಬೌಲರ್ ಎನಿಸಿಕೊಂಡರು.

ಸ್ಕೋರ್ ವಿವರ

ಕಿಂಗ್ಸ್ ಇಲೆವೆನ್ ಪಂಜಾಬ್

20 ಓವರ್‌ಗಳಲ್ಲಿ 172/7

ಅಮ್ಲ ಸಿ ಬೈಲಿ ಬಿ ಅಶ್ವಿನ್ 30

ವಿಜಯ್ ಬಿ ಅಶ್ವಿನ್ 59

ಸಹಾ ಸಿ ಅಶ್ವಿನ್ ಬಿ ಝಾಂಪ 03

ಗುರುಕೀರತ್ ಸಿ ಚಾಹರ್ ಬಿ ಅಶ್ವಿನ್ 51

ಡೇವಿಡ್ ಮಿಲ್ಲರ್ ಎಲ್‌ಬಿಡಬ್ಲು ಅಶ್ವಿನ್ 07

ಬೆಹರ್ದಿನ್ ಸಿ ರಹಾನೆ ಬಿ ದಿಂಡಾ 05

ಅಕ್ಷರ್ ಪಟೇಲ್ ಸಿ ತಿವಾರಿ ಬಿ ಪೆರೇರ 01

ರಿಷಿ ಧವನ್ ಔಟಾಗದೆ 11

ಅಬಾಟ್ ಔಟಾಗದೆ 01

ಇತರ 04

ವಿಕೆಟ್ ಪತನ: 1-60, 2-65, 3-123, 4-150, 5-154, 6-160, 7-160.

ಬೌಲಿಂಗ್ ವಿವರ

ಇರ್ಫಾನ್ ಪಠಾಣ್ 4-0-37-0

ಅಶೋಕ್ ದಿಂಡಾ 3-0-16-1

ಚಾಹರ್ 3-0-28-0

ಪೆರೇರ 2-0-24-1

ಆರ್.ಅಶ್ವಿನ್ 4-0-34-4

ಝಾಂಪ 4-0-32-1

ರೈಸಿಂಗ್ ಪುಣೆ ಸೂಪರ್‌ಜಯಂಟ್ಸ್

20 ಓವರ್‌ಗಳಲ್ಲಿ 173/6

ಅಜಿಂಕ್ಯ ರಹಾನೆ ಸಿ ಸಹಾ ಬಿ ಸಂದೀಪ್ ಶರ್ಮ 19

ಖ್ವಾಜಾ ಸಿ ಮಿಲ್ಲರ್ ಬಿ ಸಿಂಗ್ 30

ಜಾರ್ಜ್ ಬೈಲಿ ಸ್ಟಂ.ಸಹಾ ಬಿ ಪಟೇಲ್ 09

ಎಸ್.ತಿವಾರಿ ಸಿ ಬೆಹರ್ದಿನ್ ಬಿ ಸಿಂಗ್ 17

ಎಂಎಸ್ ಧೋನಿ ಔಟಾಗದೆ 64

ಇರ್ಫಾನ್ ಪಠಾಣ್ ಸಿ ಸಹಾ ಬಿ ಧವನ್ 02

ಪೆರೇರ ಸಿ ಸಹಾ ಬಿ ಶರ್ಮ 23

ಆರ್.ಅಶ್ವಿನ್ ಔಟಾಗದೆ 01

ಇತರ 08

ವಿಕೆಟ್ ಪತನ: 1-35, 2-47, 3-78, 4-80, 5-86, 6-144.

ಬೌಲಿಂಗ್ ವಿವರ:

ಸಂದೀಪ್ ಶರ್ಮ 4-0-29-1

ಮೋಹಿತ್ ಶರ್ಮ 4-0-39-1

ಕೈಲ್ ಅಬಾಟ್ 3-0-25-0

ಅಕ್ಷರ್ ಪಟೇಲ್ 4-0-43-1

ಗುರುಕೀರತ್ ಸಿಂಗ್ 2-0-15-2

ರಿಷಿ ಧವನ್ 3-0-21-1

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News