ಆರ್‌ಸಿಬಿ-ಡೆಲ್ಲಿಗೆ ಮಾಡು-ಮಡಿ ಪಂದ್ಯ

Update: 2016-05-21 17:49 GMT

 ರಾಯ್‌ಪುರ, ಮೇ 21: ಒಂಬತ್ತನೆ ಆವೃತ್ತಿಯ ಐಪಿಎಲ್ ಟೂರ್ನಿಯ ಕೊನೆಯ ಲೀಗ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ಹಾಗೂ ಡೆಲ್ಲಿ ಡೇರ್ ಡೆವಿಲ್ಸ್ ಪಂದ್ಯ ಮುಖಾಮುಖಿಯಾಗಲಿವೆ.

ವಿರಾಟ್ ಕೊಹ್ಲಿ ನಾಯಕತ್ವದ ಆರ್‌ಸಿಬಿಗೆ ಈ ಪಂದ್ಯ ಅತ್ಯಂತ ಮಹತ್ವದ್ದೆನಿಸಿದೆ. 13 ಪಂದ್ಯಗಳಲ್ಲಿ 14 ಅಂಕವನ್ನು ಗಳಿಸಿರುವ ಬೆಂಗಳೂರು ತಂಡ ಅಂಕಪಟ್ಟಿಯಲ್ಲಿ 3ನೆ ಸ್ಥಾನದಲ್ಲಿದೆ. ಡೆಲ್ಲಿ ತಂಡ 14 ಅಂಕವನ್ನು ಗಳಿಸಿದರೂ ಅಂಕಪಟ್ಟಿಯಲ್ಲಿ 6ನೆ ಸ್ಥಾನದಲ್ಲಿದೆ. ಡೆಲ್ಲಿಗೆ ಹೋಲಿಸಿದರೆ ಆರ್‌ಸಿಬಿಯ ನೆಟ್ ರನ್‌ರೇಟ್ ಉತ್ತಮವಾಗಿದೆ.

ನಾಯಕ ಕೊಹ್ಲಿಯ ಭರ್ಜರಿ ಪ್ರದರ್ಶನದ ನೆರವಿನಿಂದ ಬೆಂಗಳೂರು ತಂಡ ಹ್ಯಾಟ್ರಿಕ್ ಗೆಲುವು ಸಾಧಿಸಿದೆ. ಜೀವನಶ್ರೇಷ್ಠ ಫಾರ್ಮ್‌ನಲ್ಲಿರುವ ಕೊಹ್ಲಿ ನಾಲ್ಕು ಶತಕಗಳನ್ನು ಬಾರಿಸಿದ್ದು, 13 ಪಂದ್ಯಗಳಲ್ಲಿ ಒಟ್ಟು 865 ರನ್ ಗಳಿಸಿದ್ದಾರೆ. ಕೋಲ್ಕತಾ ವಿರುದ್ಧದ ಪಂದ್ಯದ ವೇಳೆ ಫೀಲ್ಡಿಂಗ್ ಮಾಡುವಾಗ ಎಡಗೈಗೆ ಗಾಯವಾಗಿದ್ದರೂ ಅದನ್ನು ಲೆಕ್ಕಿಸದೇ ಪಂಜಾಬ್ ವಿರುದ್ಧ ತಂಡದ ಹಿತಕ್ಕಾಗಿ ಅಮೋಘ ಪ್ರದರ್ಶನ ನೀಡಿದ್ದಾರೆ.

ಕೊಹ್ಲಿ, ಎಬಿಡಿವಿಲಿಯರ್ಸ್ ಹಾಗೂ ಕ್ರಿಸ್ ಗೇಲ್ ಸಿಡಿದು ನಿಂತರೆ ಯಾವುದೇ ಎದುರಾಳಿ ತಂಡ ತತ್ತರಗೊಳ್ಳುವುದು ಗ್ಯಾರಂಟಿ. ಆರ್‌ಸಿಬಿ ಈ ವರ್ಷ ಮೂರು ಬಾರಿ 200ಕ್ಕೂ ಅಧಿಕ ರನ್ ಗಳಿಸಿರುವುದು ತಂಡದ ಬ್ಯಾಟಿಂಗ್ ಶಕ್ತಿಗೆ ಸಾಕ್ಷಿಯಾಗಿದೆ. ಬೌಲಿಂಗ್ ವಿಭಾಗದಲ್ಲಿ ಸ್ಪಿನ್-ವೇಗಿ ಜೋಡಿ ಯುಝ್ವೇಂದರ್ ಚಾಹಲ್ ಹಾಗೂ ಶೇನ್ ವ್ಯಾಟ್ಸನ್ ತಲಾ 16 ವಿಕೆಟ್‌ಗಳನ್ನು ಪಡೆದು ಮಿಂಚಿದ್ದಾರೆ.

ಮತ್ತೊಂದೆಡೆ, ಸತತ ಎರಡು ಪಂದ್ಯಗಳಲ್ಲಿ ಸೋತ ಬಳಿಕ ಸನ್‌ರೈಸರ್ಸ್ ವಿರುದ್ಧ ಅಂತಿಮ ಎಸೆತದಲ್ಲಿ ಆರು ವಿಕೆಟ್‌ಗಳ ಅಂತರದಿಂದ ಜಯ ಸಾಧಿಸಿರುವ ಡೆಲ್ಲಿ ತಂಡ ಪ್ಲೇ-ಆಫ್ ಹಂತಕ್ಕೇರುವ ವಿಶ್ವಾಸವನ್ನು ಜೀವಂತವಾಗಿರಿಸಿಕೊಂಡಿದೆ. ಝಹೀರ್ ಖಾನ್ ನೇತೃತ್ವದ ಡೆಲ್ಲಿ ಅಸ್ಥಿರ ಪ್ರದರ್ಶನ ನೀಡುತ್ತಿದೆ.

ಆದ್ಯಾಗೂ ಪ್ಲೇಆಫ್‌ನಲ್ಲಿ ಸ್ಥಾನ ಗಿಟ್ಟಿಸಿಕೊಳ್ಳುವ ಸ್ಪರ್ಧೆಯಲ್ಲಿದೆ. ಡೆಲ್ಲಿಯ ಬ್ಯಾಟಿಂಗ್ ವಿಭಾಗ ಕ್ವಿಂಟನ್ ಡಿಕಾಕ್‌ರನ್ನು ಹೆಚ್ಚು ಅವಲಂಬಿಸಿದೆ. ಕರುಣ್ ನಾಯರ್ ಹಾಗೂ ಸಂಜು ಸ್ಯಾಮ್ಸನ್ ತಂಡದ ಗೆಲುವಿಗೆ ಮಹತ್ವದ ಕಾಣಿಕೆ ನೀಡುತ್ತಿದ್ದಾರೆ.

 ಆಲ್‌ರೌಂಡರ್ ಕಾರ್ಲಸ್ ಬ್ರಾತ್‌ವೈಟ್ ಸ್ಥಿರ ಪ್ರದರ್ಶನ ನೀಡಲು ವಿಫಲರಾಗಿದ್ದಾರೆ. ಯಾವುದೇ ಸಮಯದಲ್ಲಿ ಪಂದ್ಯದ ಚಿತ್ರಣ ಬದಲಿಸುವ ಬ್ರಾತ್‌ವೈಟ್ ತಂಡದ ಪ್ರಮುಖ ಆಟಗಾರನಾಗಿದ್ದಾರೆ.

ಪಂದ್ಯದ ಸಮಯ: ರಾತ್ರಿ 8:00

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News