ಫ್ರೆಂಚ್ ಓಪನ್: ಸ್ಟೆಫಿಗ್ರಾಫ್ ಸಾಧನೆ ಸರಿಗಟ್ಟಲು ಸೆರೆನಾ ಚಿತ್ತ
ಪ್ಯಾರಿಸ್, ಮೇ 21: ವಿಶ್ವದ ನಂ.1 ಆಟಗಾರ್ತಿ ಸೆರೆನಾ ವಿಲಿಯಮ್ಸ್ ಫ್ರೆಂಚ್ ಓಪನ್ ಟೂರ್ನಿಯಲ್ಲಿ 22ನೆ ಗ್ರಾನ್‌ಸ್ಲಾಮ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಳ್ಳುವುದರೊಂದಿಗೆ ಸ್ಟೆಫಿಗ್ರಾಫ್ ಸಾಧನೆಯನ್ನು ಸರಿಗಟ್ಟುವ ಕನಸು ಕಾಣುತ್ತಿದ್ದಾರೆ.
34ರ ಹರೆಯದ ಸೆರೆನಾ ಒಂದು ವೇಳೆ ಸ್ಟೆಫಿಗ್ರಾಫ್ ಸಾಧನೆಯನ್ನು ಸರಿಗಟ್ಟಿದರೆ ಟೆನಿಸ್ ಓಪನ್ ಯುಗದ ಅತ್ಯಂತ ಯಶಸ್ವಿ ಮಹಿಳಾ ಆಟಗಾರ್ತಿಯಾಗಿ ಹೊರಹೊಮ್ಮಲಿದ್ದಾರೆ.
ಸೆರೆನಾ ಈ ತನಕ ಜಯಿಸಿರುವ 21 ಗ್ರಾನ್‌ಸ್ಲಾಮ್ ಪ್ರಶಸ್ತಿಗಳ ಪೈಕಿ ಮೂರು ಪ್ರಶಸ್ತಿಗಳನ್ನು ಪ್ಯಾರಿಸ್‌ನಲ್ಲಿ ಜಯಿಸಿದ್ದಾರೆ. ಸೆರೆನಾ ಪ್ಯಾರಿಸ್‌ನಲ್ಲಿ 2002ರಲ್ಲಿ ಮೊದಲ ಬಾರಿ ಪ್ರಶಸ್ತಿ ಜಯಿಸಿದ ನಂತರ 2013 ಹಾಗೂ 2015ರಲ್ಲಿ ಇನ್ನೆರಡು ಪ್ರಶಸ್ತಿಯನ್ನು ಗೆದ್ದುಕೊಂಡಿದ್ದರು.
ಕಳೆದ ವಾರ ರೋಮ್‌ನಲ್ಲಿ 9 ತಿಂಗಳ ಬಿಡುವಿನ ಬಳಿಕ ಪ್ರಶಸ್ತಿಯನ್ನು ಜಯಿಸಿರುವ ಸೆರೆನಾ ಸ್ಲೋವಾಕಿಯದ ಮಗ್ಡಾಲೆನಾ ರಿಬರಿಕೋವಾರನ್ನು ಎದುರಿಸುವ ಮೂಲಕ ಫ್ರೆಂಚ್ ಓಪನ್ ಟೂರ್ನಿಯಲ್ಲಿ ತನ್ನ ಅಭಿಯಾನ ಆರಂಭಿಸಲಿದ್ದಾರೆ.