ಪಠಾಣ್-ನರೇನ್ ಪರಿಶ್ರಮ; ಕೆಕೆಆರ್ ಪ್ಲೇ ಆಫ್‌ಗೆ ಪಾಸ್
ಕೋಲ್ಕತಾ, ಮೇ 22: ಯೂಸುಫ್ ಪಠಾಣ್ ಮತ್ತು ಮನೀಷ್ ಪಾಂಡೆ ಧವನ್ ಅವರ ಉತ್ತಮ ಬ್ಯಾಟಿಂಗ್, ಸುನೀಲ್ ನರೇನ್‌ರ ಪ್ರಹಾರದ ನೆರವಿನಲ್ಲಿ ಕೋಲ್ಕತಾ ನೈಟ್ ರೈಡರ್ಸ್ ತಂಡ ಇಲ್ಲಿ ನಡೆದ ಐಪಿಎಲ್‌ನ 55ನೆ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ 22 ರನ್‌ಗಳ ಜಯ ಗಳಿಸಿದೆ.
ಕೋಲ್ಕತಾ ಈಡನ್ ಗಾರ್ಡನ್ಸ್‌ನಲ್ಲಿ ನಡೆದ ಪಂದ್ಯದಲ್ಲಿ ಗೆಲುವಿಗೆ 172 ರನ್‌ಗಳ ಸವಾಲನ್ನು ಪಡೆದ ಸನ್‌ರೈಸರ್ಸ್ ತಂಡ ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್‌ಗೆ 149 ರನ್ ಗಳಿಸಿತು.
ಶಿಖರ್ ಧವನ್ 51 ರನ್, ಡೇವಿಡ್ ವಾರ್ನರ್ 18ರನ್, ನಮನ್ ಓಜಾ 19ರನ್, ಯುವರಾಜ್ ಸಿಂಗ್ 15ರನ್, ಕೇನ್ ವಿಲಿಯಮ್ಸನ್ 7 ರನ್, ದೀಪಕ್ ಹೂಡಾ 2ರನ್, ಹೆನ್ರಿಕ್ಸ್ 11 ರನ್, ಕರಣ್ ಶರ್ಮ ಔಟಾಗದೆ 8 ರನ್, ಭುವನೇಶ್ವರ ಕುಮಾರ್ 5ರನ್, ಬಲ್ವಿಂದರ್ ಸ್ರಾನ್ 2 ರನ್ ಗಳಿಸಿದರು.
ಸುನೀಲ್ ನರೇನ್ 26ಕ್ಕೆ 3 ವಿಕೆಟ್, ಕುಲದೀಪ್ ಯಾದವ್ 28ಕ್ಕೆ 2 ವಿಕೆಟ್, ಶಾಕಿಬ್ ಅಲ್ ಹಸನ್ 34ಕ್ಕೆ 1 ವಿಕೆಟ್ ಮತ್ತು ರಜಪೂತ್ 21ಕ್ಕೆ 1 ವಿಕೆಟ್ ಗಳಿಸಿ ಸನ್‌ರೈಸರ್ಸ್ ತಂಡವನ್ನು ಕಡಿಮೆ ಮೊತ್ತಕ್ಕೆ ಕಟ್ಟಿ ಹಾಕಿದರು.
ಟಾಸ್ ಜಯಿಸಿದ ಸನ್‌ರೈಸರ್ಸ್ ತಂಡ ಫೀಲ್ಡಿಂಗ್ ಆಯ್ದುಕೊಂಡಿತ್ತು. ಆರಂಭಿಕ ದಾಂಡಿಗ ರಾಬಿನ್ ಉತ್ತಪ್ಪ (25), ಮುನ್ರೊ (10) , ನಾಯಕ ಗೌತಮ್ ಗಂಭೀರ್(16) ಔಟಾದಾಗ ತಂಡದ ಸ್ಕೋರ್ 7.3 ಓವರ್‌ಗಳಲ್ಲಿ 3 ವಿಕೆಟ್ ನಷ್ಟದಲ್ಲಿ 57 ಆಗಿತ್ತು. ಬಳಿಕ ಮನೀಷ್ ಪಾಂಡೆ ಮತ್ತು ಯೂಸುಫ್ ಪಠಾಣ್ ತಂಡವನ್ನು ಆಧರಿಸಿದರು.
ಪಾಂಡೆ ಮತ್ತು ಪಠಾಣ್ ನಾಲ್ಕನೆ ವಿಕೆಟ್‌ಗೆ 87 ರನ್ ಸೇರಿಸಿದರು. ಪಾಂಡೆ 48 ರನ್(30ಎ, 2ಬೌ,3ಸಿ) ಗಳಿಸಿ ಭುವನೇಶ್ವರ ಕುಮಾರ್ ಎಸೆತಲ್ಲಿ ವಿಲಿಯಮ್ಸನ್‌ಗೆ ಕ್ಯಾಚ್ ನೀಡಿದರು. ಬಳಿಕ ಜೇಸನ್ ಹೋಲ್ಡರ್(3), ಶಾಕಿಬ್ ಅಲ್ ಹಸನ್(7) ಒಂದಂಕೆಯ ಕೊಡುಗೆ ನೀಡಿದರು. ಸೂರ್ಯ ಕುಮಾರ್ ಯಾದವ್ ಔಟಾಗದೆ 6 ರನ್ ಗಳಿಸಿದರು.
ಯೂಸುಫ್ ಪಠಾಣ್ ಔಟಾಗದೆ 52 ರನ್ (34ಎ, 3ಬೌ,2ಸಿ) ಗಳಿಸಿ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.