ಝಿಂಬಾಬ್ವೆ ಟ್ವೆಂಟಿ-20, ಏಕದಿನ ಸರಣಿಗೆ ಟೀಮ್ ಇಂಡಿಯಾ ಪ್ರಕಟ ಧೋನಿ ನಾಯಕ; ಕೊಹ್ಲಿ, ಧವನ್, ರಹಾನೆಗೆ ವಿಶ್ರಾಂತಿ
ಮುಂಬೈ, ಮೇ 23: ಮುಂಬರುವ ಝಿಂಬಾಬ್ವೆ ಟ್ವೆಂಟಿ-20 ಮತ್ತು ಏಕದಿನ ಪ್ರವಾಸ ಸರಣಿಗೆ ಭಾರತ ಕ್ರಿಕೆಟ್ ತಂಡ ಪ್ರಕಟಗೊಂಡಿದ್ದು, ಟ್ವೆಂಟಿ-20 ಮತ್ತು ಏಕದಿನ ಸರಣಿಯಲ್ಲಿ ಮಹೇಂದ್ರ ಸಿಂಗ್ ಧೋನಿ ನಾಯಕರಾಗಿ ಟೀಮ್ ಇಂಡಿಯಾವನ್ನು ಮುನ್ನಡೆಸಲಿದ್ದಾರೆ.
ಜೂನ್ 11ರಂದು ಆರಂಭಗೊಳ್ಳಲಿರುವ ಝಿಂಬಾಬ್ವೆ ಸರಣಿಗೆ ಉಪನಾಯಕ ವಿರಾಟ್ ಕೊಹ್ಲಿ, ಅಗ್ರಸರದಿಯ ದಾಂಡಿಗರಾದ ಶಿಖರ್ ಧವನ್ ಮತ್ತು ಅಜಿಂಕ್ಯ ರಹಾನೆಗೆ ವಿಶ್ರಾಂತಿ ನೀಡಲಾಗಿದೆ.
ಇಂದು ನಡೆದ ಬಿಸಿಸಿಐ ಆಯ್ಕೆ ಸಮಿತಿಯ ಸಭೆಯ ಬಳಿಕ ನೂತನ ಕಾರ್ಯದರ್ಶಿ ಅಜಯ್ ಶಿರ್ಕೆ ತಂಡಕ್ಕೆ ಆಯ್ಕೆಯಾಗಿರುವ ಆಟಗಾರರ ಬಗ್ಗೆ ಮಾಹಿತಿ ನೀಡಿದರು.
ಇದೇ ವೇಳೆ ಜುಲೈ-ಆಗಸ್ಟ್‌ನಲ್ಲಿ ನಡೆಯಲಿರುವ ವೆಸ್ಟ್‌ಇಂಡೀಸ್ ಟೆಸ್ಟ್ ಸರಣಿಗೆ ತಂಡವನ್ನು ಪ್ರಕಟಿಸಲಾಗಿದೆ. ವಿರಾಟ್ ಕೊಹ್ಲಿ ತಂಡದ ನಾಯಕರಾಗಿರುತ್ತಾರೆ. ಮುಂಬಯ ವೇಗಿ ಶಾರ್ದೂಲ್ ಠಾಕೂರ್ ತಂಡದಲ್ಲಿ ಅವಕಾಶ ಗಿಟ್ಟಿಸಿಕೊಂಡಿದ್ದಾರೆ.
ಸೀಮಿತ ಓವರ್‌ಗಳ ತಂಡದಲ್ಲಿ ಕರ್ನಾಟಕದ ಮೂವರು ಆಟಗಾರರಾದ ಕೆ.ಎಲ್. ರಾಹುಲ್, ಮನೀಷ್ ಪಾಂಡೆ ಮತ್ತು ಕರುಣ್ ನಾಯರ್ ಅವಕಾಶ ಗಿಟ್ಟಿಸಿಕೊಂಡಿದ್ದಾರೆ.
ಐಪಿಎಲ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಬೌಲರ್ ಚಾಹಲ್ ಪ್ರಸ್ತುತ ನಡೆಯುತ್ತಿರುವ ಐಪಿಎಲ್ ಟೂರ್ನಮೆಂಟ್‌ನಲ್ಲಿ 19 ವಿಕೆಟ್ ಉಡಾಯಿಸುವ ಮೂಲಕ ಟೂರ್ನಿಯಲ್ಲಿ ಗರಿಷ್ಠ ವಿಕೆಟ್ ಪಡೆದಿರುವ ಬೌಲರ್ ಎನಿಸಿಕೊಂಡಿದ್ದಾರೆ. ಟೆಸ್ಟ್ ತಂಡದಲ್ಲಿ ಅವಕಾಶ ಪಡೆದಿರುವ ಮುಂಬೈನ 24ರ ಹರೆಯದ ಶಾರ್ದೂಲ್ ಠಾಕೂರ್ ತಂಡದಲ್ಲಿ ಏಕೈಕ ಹೊಸಮುಖ. ಕಳೆದ ದಕ್ಷಿಣ ಆಫ್ರಿಕ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಆಡಿದ್ದ ಆಟಗಾರರನ್ನೇ ಟೆಸ್ಟ್ ತಂಡದಲ್ಲಿ ಉಳಿಸಿಕೊಳ್ಳಲಾಗಿದೆ.
ಠಾಕೂರ್ ಮುಂಬೈ ಪರ 14 ದೇಶಿಯ ಪಂದ್ಯಗಳಲ್ಲಿ 41 ವಿಕೆಟ್ ಪಡೆದಿದ್ದಾರೆ. ಅವರ ಅತ್ಯುತ್ತಮ ಪ್ರದರ್ಶನ 107ಕ್ಕೆ 6 ವಿಕೆಟ್.
ವರುಣ್ ಆ್ಯರೊನ್ ಅವರನ್ನು ಟೆಸ್ಟ್ ತಂಡದಿಂದ ಕೈಬಿಡಲಾಗಿದೆ. ವೇಗಿ ಮುಹಮ್ಮದ್ ಶಮಿ ತಂಡಕ್ಕೆ ಮರಳಿದ್ದಾರೆ. ಅಜಿಂಕ್ಯ ರಹಾನೆ ಟೆಸ್ಟ್ ತಂಡಕ್ಕೆ ನೂತನ ಉಪನಾಯಕರಾಗಿ ಆಯ್ಕೆಯಾಗಿದ್ದಾರೆ. ಆಲ್‌ರೌಂಡರ್ ಸ್ಟುವರ್ಟ್ ಬಿನ್ನಿ ತಂಡದಲ್ಲಿ ಅವಕಾಶ ಉಳಿಸಿಕೊಂಡಿದ್ದಾರೆ.
ಐಪಿಎಲ್ ಟೂರ್ನಿಯಲ್ಲಿ ಉತ್ತಮ ಫಾರ್ಮ್‌ನಲ್ಲಿರುವ ಟೀಮ್ ಇಂಡಿಯಾದ ಮಾಜಿ ಆಟಗಾರರಾದ ಗೌತಮ್ ಗಂಭೀರ್, ಹರ್ಭಜನ್ ಸಿಂಗ್, ಯುವರಾಜ್ ಸಿಂಗ್ ಅವರಿಗೆ ಸ್ಥಾನ ನೀಡಲಾಗಿಲ್ಲ. ಟೆಸ್ಟ್ ಸರಣಿಗೆ ತಂಡವನ್ನು ಪ್ರಕಟಿಸಲಾಗಿದ್ದರೂ, ವೇಳಾ ಪಟ್ಟಿ ನಿಗದಿಯಾಗಿಲ್ಲ.
ಜೂನ್ 11ರಿಂದ 20ರ ತನಕ ನಡೆಯಲಿರುವ ಏಕದಿನ ಸರಣಿಗೆ ಗಾಯಗೊಂಡಿರುವ ಹಿನ್ನೆಲೆಯಲ್ಲಿ ಮುರಳಿ ವಿಜಯ್ ಮತ್ತು ಆಶೀಶ್ ನೆಹ್ರಾಗೆ ವಿಶ್ರಾಂತಿ ನೀಡಲಾಗಿದೆ.
ಝಿಂಬಾಬ್ವೆ ವಿರುದ್ಧದ ಸೀಮಿತ ಓವರ್‌ಗಳ ಸರಣಿಗೆ ತಂಡದಲ್ಲಿ ಹೊಸ ಮುಖಗಳಿಗೆ ಮನ್ನಣೆಯ ಮಣೆ ಹಾಕಲಾಗಿದೆ. ವಿದರ್ಭದ ಎಡಗೈ ಆರಂಭಿಕ ದಾಂಡಿಗ ಫೈಝ್ ಫಝಲ್ , ಆಫ್ ಸ್ಪಿನ್ನರ್ ಜಯಂತ್ ಯಾದವ್, ಪಂಜಾಬ್‌ನ ಮಧ್ಯಮ ಸರದಿ ದಾಂಡಿಗ ಮನ್‌ದೀಪ್ ಸಿಂಗ್ ಮತ್ತು ಚಾಹಲ್ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಆಡುವ ಅವಕಾಶಕ್ಕಾಗಿ ಎದುರು ನೋಡುತ್ತಿದ್ದಾರೆ.
ಝಿಂಬಾಬ್ವೆ ಏಕದಿನ , ಟ್ವೆಂಟಿ-20 ಸರಣಿ: ಎಂಎಸ್ ಧೋನಿ(ನಾಯಕ), ಕೆ.ಎಲ್.ರಾಹುಲ್, ಫೈಝ್ ಫಝಲ್ , ಮನೀಷ್ ಪಾಂಡೆ, ಕರುಣ್ ನಾಯರ್, ಅಂಬಟಿ ರಾಯುಡು, ರಿಶಿ ಧವನ್, ಅಕ್ಷರ್ ಪಟೇಲ್, ಜಯಂತ್ ಯಾದವ್, ಧವಳ್ ಕುಲಕರ್ಣಿ, ಜಸ್‌ಪ್ರೀತ್ ಬುಮ್ರಾ, ಬರೀಂದರ್ ಸ್ರಾನ್, ಮನ್‌ದೀಪ್ ಸಿಂಗ್, ಕೇದಾರ್ ಜಾಧವ್, ಜಯದೇವ್ ಉನದ್ಕಟ್, ಯುಜುವೇಂದ್ರ ಚಾಹಲ್.
ವೆಸ್ಟ್ ಇಂಡೀಸ್ ಟೆಸ್ಟ್ ತಂಡ: ವಿರಾಟ್ ಕೊಹ್ಲ್ಲಿ(ನಾಯಕ), ಮುರಳಿ ವಿಜಯ್, ಶಿಖರ್ ಧವನ್, ಕೆ.ಎಲ್ ರಾಹುಲ್, ಚೇತೇಶ್ವರ ಪೂಜಾರ್, ಅಜಿಂಕ್ಯ ರಹಾನೆ, ರೋಹಿತ್ ಶರ್ಮ, ವೃದ್ಧಿಮನ್ ಸಹಾ, ಆರ್.ಅಶ್ವಿನ್, ರವೀಂದ್ರ ಜಡೇಜ, ಇಶಾಂತ್ ಶರ್ಮ, ಮುಹಮ್ಮದ್ ಶಮಿ, ಭುವನೇಶ್ವರ ಕುಮಾರ್, ಉಮೇಶ್ ಯಾದವ್, ಶಾರ್ದುಲ್ ಠಾಕೂರ್, ಸ್ಟುವರ್ಟ್ ಬಿನ್ನಿ.
ತಂಡದಲ್ಲಿ ಹೊಸ ಪ್ರವೇಶ ಪಡೆದ ಆಟಗಾರರ ಬಗ್ಗೆ ಒಂದಿಷ್ಟು..
. *ಫೈಝಿ ಫಝಲ್: ನಾಗ್ಪುರದ 30ರ ಹರೆಯದ ಫೈಝ್ ಯಾಕೂಬ್ ಫಝಲ್ ವಿದರ್ಭ ತಂಡದ ಆರಂಭಿಕ ದಾಂಡಿಗ. 2003ರಲ್ಲಿ ನಾಗ್ಪುರದಲ್ಲಿ ಜಮ್ಮು ಮತ್ತು ಕಾಶ್ಮೀರ ತಂಡದ ವಿರುದ್ಧದ ಪಂದ್ಯದಲ್ಲಿ ಆಡುವ ಮೂಲಕ ಪ್ರಥಮ ದರ್ಜೆ ಕ್ರಿಕೆಟ್ ಪ್ರವೇಶಿಸಿದ್ದರು.
79 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿರುವ ಅವರು 40.15 ಸರಾಸರಿಯಂತೆ 5,341 ರನ್ ದಾಖಲಿಸಿದ್ದಾರೆ. 11 ಶತಕ ಮತ್ತು 27 ಅರ್ಧಶತಕ ಗಳಿಸಿದ್ದಾರೆ. ಗರಿಷ್ಠ ವೈಯಕ್ತಿಕ ಸ್ಕೋರ್ ಔಟಾಗದೆ 200 ರನ್. ಮಧ್ಯಮ ವೇಗದ ಬೌಲರ್ ಆಗಿರುವ ಫಝಲ್ 20 ವಿಕೆಟ್ ಗಳಿಸಿದ್ದಾರೆ. ಅತ್ಯುತ್ತಮ 48ಕ್ಕೆ 4 ವಿಕೆಟ್.
ಮುಂಬೈ ವಿರುದ್ಧ ಇರಾನಿ ಟ್ರೋಫಿ ಪಂದ್ಯದಲ್ಲಿ ಶೇಷ ಭಾರತ ತಂಡದ ಪರ 125 ರನ್ ದಾಖಲಿಸಿ ತಂಡಕ್ಕೆ 480 ರನ್‌ಗಳ ಕಠಿಣ ಸವಾಲನ್ನು ಬೆನ್ನಟ್ಟಲು ನೆರವಾಗಿದ್ದರು. ದೇವಧರ್ ಟ್ರೋಫಿ ಟೂರ್ನಿಯಲ್ಲಿ ಭಾರತ ಎ ತಂಡದಲ್ಲಿ 1 ಶತಕ ಮತ್ತು 1 ಅರ್ಧಶತಕ , ವಿಜಯ್ ಹಜಾರ್ ಟ್ರೋಫಿಯಲ್ಲಿ 2015-16ರಲ್ಲಿ 7 ಇನಿಂಗ್ಸ್‌ಗಳಲ್ಲಿ52 ಸರಾಸರಿಯಂತೆ 312ರನ್.
ಸೈಯದ್ ಮುಸ್ತಾಕ್ ಅಲಿ ಟ್ರೋಫಿ 9 ಇನಿಂಗ್ಸ್‌ಗಳಲ್ಲಿ 205 ರನ್ ದಾಖಲಿಸಿದ್ದರು.
ಫಝಲ್ ಪ್ರಸ್ತುತ ಐಪಿಎಲ್ ತಂಡದಲ್ಲಿ ಇಲ್ಲ. 2011ರಲ್ಲಿ ರಾಜಸ್ಥಾನ ತಂಡದಲ್ಲಿದ್ದರು.
*ಜಯಂತ್ ಯಾದವ್: ದಿಲ್ಲಿಯ ಬೌಲರ್ 26 ಹರೆಯದ ಜಯಂತ್ ಯಾದವ್ 40 ಪ್ರಥಮ ದರ್ಜೆ ಪಂದ್ಯಗಳಲ್ಲಿ 1,463 ರನ್ ಗಳಿಸಿದ್ದಾರೆ. 2 ಶತಕ ಹಾಗೂ ಅರ್ಧಶತಕ 5, ಗರಿಷ್ಠ ವೈಯಕ್ತಿಕ ಸ್ಕೋರ್ 211, 110 ವಿಕೆಟ್ ಪಡೆದಿದ್ದಾರೆ. ಅತ್ಯುತ್ತಮ 64ಕ್ಕೆ 7
* ಯುಜುವೇಂದ್ರ ಚಾಹಲ್:ಹರ್ಯಾಣದ 25ರ ಹರೆಯದ ಲೆಗ್‌ಬ್ರೇಕ್ ಗೂಗ್ಲಿ ಬೌಲರ್ ಯುಜುವೇಂದ್ರ ಚಾಹಲ್ 20 ಪ್ರಥಮ ದರ್ಜೆ ಪಂದ್ಯಗಳಲ್ಲಿ 37 ವಿಕೆಟ್ ಪಡೆದಿದ್ದಾರೆ. ಅತ್ಯುತ್ತಮ ಪ್ರದರ್ಶನ 22ಕ್ಕೆ 4.
*ಕರುಣ್ ನಾಯರ್:ಕರ್ನಾಟಕದ 26ರ ಕರ್ನಾಟಕದ ಅಗ್ರ ಸರದಿಯ ದಾಂಡಿಗ ಕರುಣ್ ನಾಯರ್ 32 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿದ್ದಾರೆ. 7 ಶತಕ ಮತ್ತು 10 ಅರ್ಧಶತಕ ದಾಖಲಿಸಿದ್ದಾರೆ. ಗರಿಷ್ಠ ವೈಯಕ್ತಿಕ ಸ್ಕೋರ್ 328, ಒಟ್ಟು ರನ್ 4,880. ಡೆಲ್ಲಿ ಡೇರ್ ಡೆವಿಲ್ಸ್ ತಂಡದ ನಾಯರ್ 357ರನ್ ಗಳಿಸಿದ್ದಾರೆ. ಸನ್‌ರೈಸರ್ಸ್ ವಿರುದ್ಧ 83 ರನ್ ಗಳಿಸಿ ತಂಡಕ್ಕೆ ಗೆಲುವು ತಂದು ಕೊಟ್ಟಿದ್ದರು. ಕಳೆದ ರಣಜಿಯಲ್ಲಿ 7 ಪಂದ್ಯಗಳಲ್ಲಿ 500 ರನ್ ದಾಖಲಿಸಿದ್ದರು.
*ಮನ್‌ದೀಪ್ ಸಿಂಗ್:ಪಂಜಾಬ್‌ನ 24ರ ಹರೆಯದ ಮನ್‌ದೀಪ್ ಸಿಂಗ್ 57 ಪ್ರಥಮ ದರ್ಜೆ ಪಂದ್ಯಗಳಲ್ಲಿ 3,699 ರನ್ ದಾಖಲಿಸಿದ್ದಾರೆ. ಗರಿಷ್ಠ ವೈಯಕ್ತಿಕ ಸ್ಕೋರ್ 235 . ವಿಜಯ್ ಹಜಾರ್ ಟ್ರೋಫಿಯಲ್ಲಿ 7 ಪಂದ್ಯಗಳಲ್ಲಿ 394 ರನ್ ಗಳಿಸಿದ್ದಾರೆ.
*ಲೋಕೇಶ್ ರಾಹುಲ್ ಟೆಸ್ಟ್ ತಂಡದ ಆಟಗಾರ . ಕರ್ನಾಟದ ರಾಹುಲ್ ಇದೀಗ ಸೀಮಿತ ಓವರ್‌ಗಳ ತಂಡದಲ್ಲೂ ಸ್ಥಾನ ಪಡೆದಿದ್ದಾರೆ. ಆರ್‌ಸಿಬಿ ತಂಡದ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಆಗಿರುವ ರಾಹುಲ್ 12 ಪಂದ್ಯಗಳಲ್ಲಿ 4 ಅರ್ಧಶತಕಗಳನ್ನು ಒಳಗೊಂಡ 386 ರನ್ ದಾಖಲಿಸಿದ್ದಾರೆ
. ,,,,,,,,,,,,,,