ಏಷ್ಯನ್ ಸಿಕ್ಸ್-ರೆಡ್ ಸ್ನೂಕರ್ ಟೂರ್ನಿ: ಪಂಕಜ್ ಅಡ್ವಾಣಿ ಐತಿಹಾಸಿಕ ಸಾಧನೆ

Update: 2016-05-23 17:46 GMT

ಅಬುಧಾಬಿ, ಮೇ 23: ಏಷ್ಯನ್ 6-ರೆಡ್ ಸ್ನೂಕರ್ ಪ್ರಶಸ್ತಿಯನ್ನು ಜಯಿಸಿರುವ ಭಾರತದ ಸ್ನೂಕರ್ ಪಟು ಪಂಕಜ್ ಅಡ್ವಾಣಿ ಅಬುಧಾಬಿಯಲ್ಲಿ ಹೊಸ ಇತಿಹಾಸ ನಿರ್ಮಿಸಿದ್ದಾರೆ.

ಅಡ್ವಾಣಿ 6-ರೆಡ್ ಸ್ನೂಕರ್‌ನಲ್ಲಿ ವರ್ಲ್ಡ್ ಹಾಗೂ ಕಾಂಟಿನೆಂಟಲ್ ಪ್ರಶಸ್ತಿಗಳನ್ನು ಜಯಿಸಿದ ಮೊದಲ ಸ್ನೂಕರ್ ಪಟು ಎಂಬ ಕೀರ್ತಿಗೆ ಭಾಜನರಾಗಿದ್ದಾರೆ.

ಡಬಲ್ ಐಬಿಎಸ್‌ಎಫ್ ವರ್ಲ್ಡ್ ಸಿಕ್ಸ್-ರೆಡ್ ಸ್ನೂಕರ್ ಚಾಂಪಿಯನ್ ಅಡ್ವಾಣಿ ಚುಟುಕು ಮಾದರಿಯ ಗೇಮ್‌ನಲ್ಲಿ ಮತ್ತೊಮ್ಮೆ ಪ್ರಾಬಲ್ಯ ಸಾಧಿಸಿದ್ದು, ಅಗ್ರ ಶ್ರೇಯಾಂಕದ ಮಲೇಷ್ಯಾದ ಕೀನ್ ಹೋ ಮೋ ಅವರನ್ನು 7-5 ಅಂತರದಿಂದ ಮಣಿಸಿದರು.

ಸೆಮಿಫೈನಲ್‌ನಲ್ಲಿ ತನ್ನದೇ ದೇಶದ ಆದಿತ್ಯ ಮೆಹ್ತಾರನ್ನು 6-1 ರಿಂದ ಸೋಲಿಸಿ ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಂಡಿದ್ದರು.

 ಪ್ರಶಸ್ತಿ ಜಯಿಸಿದ ನಂತರ ಸಂತಸ ವ್ಯಕ್ತಪಡಿಸಿದ ಅಡ್ವಾಣಿ, ಇದು ನನ್ನ ಮೊದಲ ವೈಯಕ್ತಿಕ ಏಷ್ಯನ್ ಸ್ನೂಕರ್ ಚಾಂಪಿಯನ್‌ಶಿಪ್ ಆಗಿದ್ದು, ನನಗೆ ತುಂಬಾ ಸಂತೋಷವಾಗುತ್ತಿದೆ. ಕಳೆದ ತಿಂಗಳು ನಡೆದ 15-ರೆಡ್ ಏಷ್ಯನ್ ಸ್ನೂಕರ್ ಪ್ರಶಸ್ತಿಯಿಂದ ವಂಚಿತನಾದ ನಂತರ ಈ ಪ್ರಶಸ್ತಿ ಜಯಿಸಿದ್ದು ತೃಪ್ತಿ ತಂದಿದೆ ಎಂದರು.

ಅಡ್ವಾಣಿ ಅವರು ಆದಿತ್ಯ ಮೆಹ್ತಾ, ಮನನ್ ಚಂದ್ರ ಹಾಗೂ ಕಮಲ್ ಚಾವ್ಲಾ ಅವರೊಂದಿಗೆ ಟೀಮ್ ಇವೆಂಟ್‌ನಲ್ಲಿ ಭಾರತದ ಸವಾಲನ್ನು ಮುನ್ನಡೆಸಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News