ಕೊಪಾ ಡೆಲ್ ರೇ ಟ್ರೋಫಿ ಬಾಚಿಕೊಂಡ ಬಾರ್ಸಿಲೋನ

Update: 2016-05-23 17:48 GMT

ಮ್ಯಾಡ್ರಿಡ್,ಮೇ 23: ಕೆಲವೇ ವಾರಗಳ ಹಿಂದೆ ಸ್ಪಾನೀಶ್ ಲೀಗ್ ಟ್ರೋಫಿಯನ್ನು ಜಯಿಸಿದ್ದ ಬಾರ್ಸಿಲೋನ ಎಫ್‌ಸಿ ಕೊಪಾ ಡೆಲ್ ರೇ(ಕಿಂಗ್ಸ್ ಕಪ್) ಪ್ರಶಸ್ತಿಯನ್ನು ಜಯಿಸುವ ಮೂಲಕ ಈ ವರ್ಷದ ದೇಶೀಯ ಟೂರ್ನಿಯಲ್ಲಿ ಡಬಲ್ ಪ್ರಶಸ್ತಿ ಜಯಿಸಿದೆ.

ರವಿವಾರ ಇಲ್ಲಿ ನಡೆದ ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ಬಾರ್ಸಿಲೋನ ತಂಡ ಸೆವಿಲ್ಲಾ ತಂಡವನ್ನು 2-0 ಅಂತರದಿಂದ ಮಣಿಸಿತು. ಬಾರ್ಸಿಲೋನದ ಪರ ಹೆಚ್ಚುವರಿ ಸಮಯದಲ್ಲಿ ಜೊರ್ಡಿ ಅಲ್ಬಾ (97ನೆ ನಿಮಿಷ)ಹಾಗೂ ನೇಮರ್(120ನೆ ನಿಮಿಷ) ತಲಾ ಒಂದು ಗೋಲು ಬಾರಿಸಿದರು.

ಬಾರ್ಸಿಲೋನ ಸತತ ಎರಡನೆ ಬಾರಿ ಕೋಪಾ ಡೆಲ್ ರೇ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ. ಈ ವರ್ಷ ಬಾರ್ಸಿಲೋನ ಜಯಿಸಿದ ನಾಲ್ಕನೆ ಪ್ರಶಸ್ತಿ ಇದಾಗಿದೆ. ಅದು ಈಗಾಗಲೇ ಯುರೋಪಿಯನ್ ಸೂಪರ್ ಕಪ್, ಕ್ಲಬ್ ವರ್ಲ್ಡ್‌ಕಪ್ ಹಾಗೂ ಸ್ಪಾನಿಶ್ ಲಾಲಿಗ ಪ್ರಶಸ್ತಿಯನ್ನು ಗೆದ್ದುಕೊಂಡಿದೆ.

ಆಟದ ಅವಧಿಯಲ್ಲಿ ಉಭಯ ತಂಡಗಳು ಗೋಲು ಬಾರಿಸಲು ವಿಫಲವಾದವು. ಹೆಚ್ಚುವರಿ ಸಮಯದಲ್ಲಿ ಲಿಯೊನೆಲ್ ಮೆಸ್ಸಿ ನೀಡಿದ ಪಾಸ್‌ನ್ನು ಎಡಗಾಲಿನ ಮೂಲಕ ಗೋಲಿನ ಬಲೆಗೆ ತಲುಪಿಸಿದ ಅಲ್ಬಾ ಬಾರ್ಸಿಲೋನಕ್ಕೆ 1-0 ಮುನ್ನಡೆ ಒದಗಿಸಿಕೊಟ್ಟರು.

ಅಂತಿಮ ಕ್ಷಣದಲ್ಲಿ ಗೋಲು ಬಾರಿಸಿದ ನೇಮರ್ ಬಾರ್ಸಿಲೋನ 28ನೆ ಬಾರಿ ಟ್ರೋಫಿ ಜಯಿಸಲು ನೆರವಾಗಿದ್ದಾರೆ. ಬಾರ್ಸಿಲೋನ ಒಂದೇ ಋತುವಿನಲ್ಲಿ ಎರಡು ಪ್ರಮುಖ ದೇಶೀಯ ಪ್ರಶಸ್ತಿಯನ್ನು ಜಯಿಸಿರುವುದು ಇದು ಏಳನೆ ಬಾರಿ.

ಬಾರ್ಸಿಲೋನ ಇತ್ತೀಚೆಗೆ 24ನೆ ಬಾರಿ ಸ್ಪಾನಿಶ್ ಲೀಗ್ ಪ್ರಶಸ್ತಿಯನ್ನು ಗೆದ್ದುಕೊಂಡಿತ್ತು.

 ಡಿಫೆಂಡರ್ ಜೇವಿಯರ್ ಮಸ್ಕರೆನೊ ಎದುರಾಳಿ ತಂಡದ ಕೆವಿನ್ ಗಮೆರೊ ಅವರ ಜರ್ಸಿ ಹಿಡಿದೆಳೆದ ತಪ್ಪಿಗೆ ರೆಡ್ ಕಾರ್ಡ್ ಪಡೆದ ಕಾರಣ ಬಾರ್ಸಿಲೋನ 36ನೆ ನಿಮಿಷಗಳ ಬಳಿಕ 10 ಆಟಗಾರರೊಂದಿಗೆ ಆಡಿತು.

ದ್ವಿತೀಯಾರ್ಧದ ಆರಂಭದಲ್ಲೇ ಬಾರ್ಸಿಲೋನದ ಸ್ಟಾರ್ ಆಟಗಾರ ಲೂಯಿಸ್ ಸುಯರೆಝ್ ಸ್ನಾಯು ಸೆಳೆತಕ್ಕೆ ಒಳಗಾಗಿ ಮೈದಾನ ತೊರೆದರು. ಕಳೆದ 5 ಪಂದ್ಯಗಳಲ್ಲಿ 14 ಗೋಲುಗಳನ್ನು ಬಾರಿಸಿದ್ದ ಸುಯರೆಝ್ ಬಾರ್ಸಿಲೋನ ತಂಡ ಸ್ಪಾನಿಶ್ ಲೀಗ್‌ನಲ್ಲಿ ಫೈನಲ್ ತಲುಪಲು ನಿರ್ಣಾಯಕ ಪಾತ್ರವಹಿಸಿದ್ದರು.

ನೇಮರ್ ಸ್ಕೋರ್ ಬಾರಿಸಲು ಯತ್ನಿಸುತ್ತಿದ್ದಾಗ ಅವರನ್ನು ತಳ್ಳಿದ ಸೆವಿಲ್ಲಾ ತಂಡದ ಮಿಡ್‌ಫೀಲ್ಡರ್ ಎವೆರ್ ಬೆನೆಗಾಗೆ ರೆಡ್ ಕಾರ್ಡ್ ದರ್ಶನವಾಯಿತು. ಬೆನೆಗಾ ಅನುಪಸ್ಥಿತಿಯಲ್ಲಿ ಸೆವಿಲ್ಲಾ ತಂಡ 10 ಆಟಗಾರರೊಂದಿಗೆ ಆಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News