ಮಂಗಳವಾರ ಐಪಿಎಲ್‌ನ ಮೊದಲ ಕ್ವಾಲಿಫೈಯರ್

Update: 2016-05-23 17:50 GMT

 ಆರ್‌ಸಿಬಿ-ಗುಜರಾತ್‌ಗೆ ಫೈನಲ್ ತಲುಪುವ ಗುರಿ

ಬೆಂಗಳೂರು, ಮೇ 23: ಅಂಕಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿರುವ ಗುಜರಾತ್ ಲಯನ್ಸ್ ತಂಡವನ್ನು ಮಂಗಳವಾರ ಇಲ್ಲಿ ನಡೆಯಲಿರುವ ಐಪಿಎಲ್‌ನ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಎದುರಿಸಲಿರುವ ವಿರಾಟ್ ಕೊಹ್ಲಿ ನಾಯಕತ್ವದ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡ ಮೊದಲ ಬಾರಿ ಐಪಿಎಲ್ ಪ್ರಶಸ್ತಿ ಜಯಿಸುವತ್ತ ಚಿತ್ತವಿರಿಸಿದೆ.

ಆರ್‌ಸಿಬಿಗೆ ಪ್ಲೇ-ಆಫ್‌ಗೆ ಪಾಸಾಗಲು ಅಂತಿಮ ನಾಲ್ಕು ಪಂದ್ಯಗಳನ್ನು ಗೆಲ್ಲಲೇಬೇಕಾದ ಒತ್ತಡವಿತ್ತು. ತಂಡವನ್ನು ಮುಂಚೂಣಿಯಲ್ಲಿ ನಿಂತು ಮುನ್ನಡೆಸಿದ್ದ ಕೊಹ್ಲಿ ತಂಡಕ್ಕೆ ಸತತ ನಾಲ್ಕು ಪಂದ್ಯಗಳನ್ನು ಗೆಲ್ಲಿಸಿಕೊಡುವ ಮೂಲಕ ಅಂಕಪಟ್ಟಿಯಲ್ಲಿ 2ನೆ ಸ್ಥಾನಿಯಾಗಿ ಪ್ಲೇ-ಆಫ್‌ಗೆ ಲಗ್ಗೆ ಇಡಲು ಕಾರಣರಾದರು. ಆರ್‌ಸಿಬಿ ಐಪಿಎಲ್‌ನ ಲೀಗ್ ಪಂದ್ಯದಲ್ಲಿ ಆಡಿರುವ 14 ಪಂದ್ಯಗಳಲ್ಲಿ 16 ಅಂಕವನ್ನು ಗಳಿಸಿ ಅಂಕಪಟ್ಟಿಯಲ್ಲಿ 2ನೆ ಸ್ಥಾನ ಪಡೆಯಿತು. ಗುಜರಾತ್ ಲಯನ್ಸ್ 14 ಪಂದ್ಯಗಳಲ್ಲಿ 18 ಅಂಕವನ್ನು ಗಳಿಸಿ ಮೊದಲ ಸ್ಥಾನದಲ್ಲಿದೆ.

ಆರ್‌ಸಿಬಿ ಈ ವರ್ಷ ಉತ್ತಮ ಆರಂಭವನ್ನು ಪಡೆದಿರಲಿಲ್ಲ. ಕೊಹ್ಲಿ ನಾಯಕತ್ವದ ಆರ್‌ಸಿಬಿ ತಂಡ ಗುಜರಾತ್ ಲಯನ್ಸ್(144ರನ್), ಕೋಲ್ಕತಾ ನೈಟ್ ರೈಡರ್ಸ್(9 ವಿಕೆಟ್), ಪಂಜಾಬ್(82 ರನ್) ಹಾಗೂ ಡೆಲ್ಲಿ ಡೇರ್‌ಡೆವಿಲ್ಸ್(6 ವಿಕೆಟ್) ವಿರುದ್ಧ ಜಯ ಸಾಧಿಸಿ ಪ್ಲೇ-ಆಫ್‌ನಲ್ಲಿ ಸ್ಥಾನ ಪಡೆದಿದೆ. ಡೆಲ್ಲಿ ವಿರುದ್ಧ ರಾಯ್ಪುರದಲ್ಲಿ ರವಿವಾರ ರಾತ್ರಿ ನಡೆದ ನಿರ್ಣಾಯಕ ಪಂದ್ಯದಲ್ಲಿ ಎದುರಾಳಿ ತಂಡವನ್ನು 138 ರನ್‌ಗೆ ನಿಯಂತ್ರಿಸಿದ್ದ ಆರ್‌ಸಿಬಿ ಕೊಹ್ಲಿ ಮತ್ತೊಮ್ಮೆ ಬಾರಿಸಿದ ಅರ್ಧಶತಕ(ಔಟಾಗದೆ 54) ನೆರವಿನಿಂದ ಸುಲಭ ಜಯ ಸಾಧಿಸಿತು. ಆರ್‌ಸಿಬಿ ಇನ್ನೆರಡು ಪಂದ್ಯಗಳಲ್ಲಿ ಗೆಲುವಿನ ಓಟವನ್ನು ಮುಂದುವರಿಸಿದರೆ ಚೊಚ್ಚಲ ಐಪಿಎಲ್ ಕಿರೀಟವನ್ನು ಧರಿಸಲಿದೆ. ಆರ್‌ಸಿಬಿ 2009 ಹಾಗೂ 2011ರಲ್ಲಿ ರನ್ನರ್‌ಅಪ್‌ಗೆ ತೃಪ್ತಿಪಟ್ಟುಕೊಂಡಿತ್ತು.

 ಆರ್‌ಸಿಬಿ ಕಳೆದ ಪಂದ್ಯದಲ್ಲಿ ತವರು ಮೈದಾನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಲಯನ್ಸ್ ವಿರುದ್ಧ ಪಂದ್ಯವನ್ನು ಭಾರೀ ಅಂತರದಿಂದ(144ರನ್) ಗೆದ್ದುಕೊಂಡು ಐಪಿಎಲ್‌ನಲ್ಲಿ ಹೊಸ ಇತಿಹಾಸ ಬರೆದಿತ್ತು. ಆ ಪಂದ್ಯದಲ್ಲಿ ಎಬಿಡಿ ವಿಲಿಯರ್ಸ್(ಔಟಾಗದೆ 129) ಹಾಗೂ ವಿರಾಟ ಕೊಹ್ಲಿ(109) ಲಯನ್ಸ್ ಬೌಲರ್‌ಗಳನ್ನು ಹಿಗ್ಗಾ-ಮುಗ್ಗಾ ದಂಡಿಸಿದ್ದರು.

ಮಂಗಳವಾರದ ಪಂದ್ಯದಲ್ಲಿ ಮತ್ತೊಮ್ಮೆ ತವರು ಮೈದಾನದ ಲಾಭ ವೆತ್ತುವ ವಿಶ್ವಾಸದಲ್ಲಿದೆ. ಈ ವರ್ಷ ಆರ್‌ಸಿಬಿಯ ಅಮೋಘ ಪ್ರದರ್ಶನಕ್ಕೆ ಪ್ರಮುಖ ಕಾರಣ ನಾಯಕ ಕೊಹ್ಲಿ. ಪ್ರಸ್ತುತ ಐಪಿಎಲ್‌ನಲ್ಲಿ ನಾಲ್ಕು ಶತಕ ಹಾಗೂ 6 ಅರ್ಧಶತಕಗಳ ಸಹಿತ ಒಟ್ಟು 919 ರನ್ ಗಳಿಸಿದ್ದಾರೆ. ದಕ್ಷ ನಾಯಕತ್ವದಿಂದ ಗಮನ ಸೆಳೆದಿರುವ ಕೊಹ್ಲಿ ಟೂರ್ನಿಯ ಆರಂಭದಲ್ಲಿ ನಿರಾಶಾದಾಯಕ ಪ್ರದರ್ಶನ ನೀಡಿದ್ದ ತಂಡಕ್ಕೆ ಆತ್ಮವಿಶ್ವಾಸ ತುಂಬಿದ್ದಾರೆ.

ಒಂದು ಹಂತದಲ್ಲಿ ಆರ್‌ಸಿಬಿ ಪ್ಲೇ-ಆಫ್‌ಗೆ ತಲುಪುವುದು ಕನಸಿನ ಮಾತಾಗಿತ್ತು. ಆದರೆ, ನಾಯಕ ಕೊಹ್ಲಿ ಅತ್ಯುತ್ತಮ ಬ್ಯಾಟಿಂಗ್ ಹಾಗೂ ನಾಯಕತ್ವದಿಂದ ತಂಡವನ್ನು ನಾಕೌಟ್ ಹಂತಕ್ಕೆ ತಲುಪಿಸಿದ್ದಾರೆ.

ಕೊಹ್ಲಿಗೆ ಡಿವಿಲಿಯರ್ಸ್, ಕ್ರಿಸ್ ಗೇಲ್ ಹಾಗೂ ಕೆಎಲ್ ರಾಹುಲ್ ಉತ್ತಮ ಸಾಥ್ ನೀಡಿದ್ದಾರೆ. ಡಿವಿಲಿಯರ್ಸ್ 1 ಶತಕ, 5 ಅರ್ಧಶತಕಗಳ ಸಹಿತ ಒಟ್ಟು 603 ರನ್ ಗಳಿಸಿದ್ದಾರೆ. ಗೇಲ್ ಕಳೆದ ಕೆಲವು ಪಂದ್ಯಗಳಲ್ಲಿ ಫಾರ್ಮ್‌ಗೆ ಮರಳಿದ ಸೂಚನೆ ನೀಡಿದ್ದಾರೆ.

  ಆರ್‌ಸಿಬಿಯ ಗೆಲುವಿನ ಓಟದ ಶ್ರೇಯಸ್ಸು ಅನನುಭವಿ ಬೌಲಿಂಗ್ ವಿಭಾಗಕ್ಕೂ ಸೇರಬೇಕಾಗಿದೆ. ಲೆಗ್-ಸ್ಪಿನ್ನರ್ ಯುಜ್ವೇಂದ್ರ ಚಾಹಲ್(11 ಪಂದ್ಯ,19 ವಿಕೆಟ್) ನೇತೃತ್ವದ ಬೌಲಿಂಗ್ ವಿಭಾಗ ಆರ್‌ಸಿಬಿ ಗೆಲುವಿನಲ್ಲಿ ಮಹತ್ವದ ಕಾಣಿಕೆ ನೀಡಿದೆ. ಕೊನೆಯ ಹಂತದಲ್ಲಿ ತಂಡವನ್ನು ಸೇರಿಕೊಂಡಿದ್ದ ಕ್ರಿಸ್ ಜೋರ್ಡನ್ ಡೆತ್ ಓವರ್‌ನಲ್ಲಿ ರನ್‌ಗೆ ಕಡಿವಾಣ ಹಾಕಲು ಯಶಸ್ವಿಯಾಗಿದ್ಧಾರೆ. 16 ವಿಕೆಟ್‌ಗಳನ್ನು ಪಡೆದಿರುವ ಶೇನ್ ವ್ಯಾಟ್ಸನ್ ಬೌಲಿಂಗ್ ವಿಭಾಗಕ್ಕೆ ಬಲ ನೀಡಿದ್ದಾರೆ.

ಸುರೇಶ್ ರೈನಾ ನೇತೃತ್ವದ ಗುಜರಾತ್ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಆರ್‌ಸಿಬಿ ವಿರುದ್ಧ ಕಠಿಣ ಸವಾಲು ಎದುರಿಸಬೇಕಾಗಿದೆ. ಈ ಹಿಂದಿನ ಪಂದ್ಯದಲ್ಲಿ ಗುಜರಾತ್ 144 ರನ್‌ಗಳಿಂದ ಸೋತಿತ್ತು. ಮೊದಲ ಬಾರಿ ಐಪಿಎಲ್ ಆಡುತ್ತಿರುವ ಗುಜರಾತ್ ತಂಡ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಕನಸು ಭಗ್ನಗೊಳಿಸಿ ಪ್ಲೇ-ಆಫ್‌ಗೆ ಲಗ್ಗೆ ಇಟ್ಟಿದೆ.

ಗುಜರಾತ್ ಗ್ರೂಪ್ ಹಂತದಲ್ಲಿ ಆರ್‌ಸಿಬಿ ವಿರುದ್ಧ ಆಡಿರುವ 2 ಪಂದ್ಯಗಳಲ್ಲಿ 1ರಲ್ಲಿ 6 ವಿಕೆಟ್‌ಗಳ ಜಯ ಗಳಿಸಿದರೆ, ಮತ್ತೊಂದರಲ್ಲಿ ಹೀನಾಯ ಸೋಲುಂಡಿತ್ತು. ರೈನಾ ಪಡೆ ಕಳೆದ ಪಂದ್ಯದ ಸೋಲಿಗೆ ಸೇಡು ತೀರಿಸಿಕೊಂಡು ಚೊಚ್ಚಲ ಫೈನಲ್ ಪ್ರವೇಶಿಸುವ ಕನಸು ಕಾಣುತ್ತಿದೆ. ಗುಜರಾತ್ ತಂಡ ಟೂರ್ನಿಯ ಆರಂಭದಲ್ಲಿ ಭರ್ಜರಿ ಆರಂಭ ಪಡೆದರೆ, ಟೂರ್ನಿಯ ಅಂತ್ಯದಲ್ಲಿ ಸತತ ಸೋಲು ಅನುಭವಿಸಿತ್ತು.

ಗುಜರಾತ್ ತಂಡದ ಬ್ಯಾಟಿಂಗ್ ಕ್ರಮಾಂಕದಲ್ಲಿ ಆ್ಯರೊನ್ ಫಿಂಚ್(11ಪಂದ್ಯ, 339ರನ್), ಬ್ರೆಂಡನ್ ಮೆಕಲಮ್(14, 321 ರನ್), ಡ್ವೇಯ್ನೆ ಸ್ಮಿತ್(10, 250 ರನ್), ರೈನಾ(13 ಪಂದ್ಯ, 397 ರನ್), ದಿನೇಶ್ ಕಾರ್ತಿಕ್(283 ರನ್) ಹಾಗೂ ಡರೆನ್ ಬ್ರಾವೊ ಅವರಿದ್ದಾರೆ.

ಬೌಲಿಂಗ್ ವಿಭಾಗದಲ್ಲಿ ವೇಗಿದ್ವಯರಾದ ಬ್ರಾವೊ ಹಾಗೂ ಧವಳ್ ಕುಲಕರ್ಣಿಯನ್ನು ಅವಲಂಭಿಸಿದೆ. ಬ್ರಾವೊ 15 ಹಾಗೂ ಕುಲಕರ್ಣಿ 14 ವಿಕೆಟ್‌ಗಳನ್ನು ಪಡೆದಿದ್ದಾರೆ.

ಮಂಗಳವಾರದ ಪಂದ್ಯದಲ್ಲಿ ಸೋಲುವ ತಂಡಕ್ಕೆ ಮತ್ತೊಂದು ಅವಕಾಶವಿದೆ. ಸೋತ ತಂಡ ಎಲಿಮಿನೇಟರ್‌ನಲ್ಲಿ ಸೆಣಸಲಿರುವ ಸನ್‌ರೈಸರ್ಸ್ ಹೈದರಾಬಾದ್ ಅಥವಾ ಕೋಲ್ಕತಾ ತಂಡವನ್ನು 2ನೆ ಕ್ವಾಲಿಫೈಯರ್ ಪಂದ್ಯದಲ್ಲಿ ಎದುರಿಸಲಿದೆ. ಆರ್‌ಸಿಬಿ ಹಾಗೂ ಗುಜರಾತ್ ತಂಡಗಳು ರವಿವಾರದ ಫೈನಲ್‌ಗೆ ನೇರ ಪ್ರವೇಶ ಪಡೆಯುವ ವಿಶ್ವಾಸದಲ್ಲಿವೆ.

ಪಂದ್ಯದ ಸಮಯ:ರಾತ್ರಿ 8:00

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News