×
Ad

ಫ್ರೆಂಚ್ ಓಪನ್: 200ನೆ ಗ್ರಾನ್‌ಸ್ಲಾಮ್ ಪಂದ್ಯ ಜಯಿಸಿದ ನಡಾಲ್

Update: 2016-05-26 23:57 IST

ಪ್ಯಾರಿಸ್, ಮೇ 26: ಸ್ಪೇನ್ ಆಟಗಾರ ರಫಲ್ ನಡಾಲ್ ಫ್ರೆಂಚ್ ಓಪನ್‌ನಲ್ಲಿ ಮತ್ತೊಂದು ಮೈಲುಗಲ್ಲು ತಲುಪಿದ್ದಾರೆ.

ಗುರುವಾರ ಇಲ್ಲಿ ನಡೆದ ಪುರುಷರ ಸಿಂಗಲ್ಸ್ ಪಂದ್ಯದಲ್ಲಿ 9 ಬಾರಿಯ ಫ್ರೆಂಚ್ ಓಪನ್ ಚಾಂಪಿಯನ್ ನಡಾಲ್ ಅರ್ಜೆಂಟೀನದ ಫಾಕುಂಡೊ ಬಾಗ್ನಿಸ್‌ರನ್ನು 6-3, 6-0, 6-3 ಸೆಟ್‌ಗಳ ಅಂತರದಿಂದ ಮಣಿಸಿದರು. ಈ ಮೂಲಕ ಗ್ರಾನ್‌ಸ್ಲಾಮ್ ಟೂರ್ನಿಯಲ್ಲಿ 200ನೆ ಪಂದ್ಯವನ್ನು ಜಯಿಸಿದರು.

ನಡಾಲ್ ಗ್ರಾನ್‌ಸ್ಲಾಮ್ ಟೂರ್ನಿಯ ಇತಿಹಾಸದಲ್ಲಿ 200 ಪಂದ್ಯಗಳನ್ನು ಜಯಿಸಿದ ವಿಶ್ವದ 8ನೆ ಆಟಗಾರನಾಗಿದ್ದಾರೆ. ಒಟ್ಟು 302 ಪಂದ್ಯಗಳನ್ನು ಜಯಿಸಿರುವ ರೋಜರ್ ಫೆಡರರ್ ಗರಿಷ್ಠ ಪಂದ್ಯಗಳನ್ನು ಜಯಿಸಿದ ಆಟಗಾರರ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ. ಫೆಡರರ್ ಗಾಯದ ಸಮಸ್ಯೆಯಿಂದಾಗಿ ಈ ವರ್ಷ ಟೂರ್ನಿಯಲ್ಲಿ ಭಾಗವಹಿಸುತ್ತಿಲ್ಲ. 200ನೆ ಗೆಲುವಿನೊಂದಿಗೆ ಅಂತಿಮ 32ರ ಘಟ್ಟವನ್ನು ತಲುಪಿರುವ ನಡಾಲ್ ತಮ್ಮದೇ ದೇಶದ ಮಾರ್ಸೆಲ್ ಗ್ರಾನೊಲ್ಲರ್ಸ್‌ ಅಥವಾ ಫ್ರಾನ್ಸ್‌ನ ನಿಕೊಲಸ್ ಮಹೂಟ್‌ರನ್ನು ಎದುರಿಸಲಿದ್ದಾರೆ.

ಮತ್ತೊಂದು ಸಿಂಗಲ್ಸ್ ಪಂದ್ಯದಲ್ಲಿ ಮಾಲೆಕ್ ಜಝಿರಿ ಅವರನ್ನು 6-1, 2-6, 6-2, 6-4 ಸೆಟ್‌ಗಳ ಅಂತರದಿಂದ ಮಣಿಸಿದ್ದ 7ನೆ ಶ್ರೇಯಾಂಕದ ಥಾಮಸ್ ಬೆರ್ಡಿಕ್ ಮೂರನೆ ಸುತ್ತಿಗೆ ತಲುಪಿದರು.

ಜೊಕೊವಿಕ್‌ಗೆ 50ನೆ ಗೆಲುವಿನ ಸಂಭ್ರಮ

ಅಗ್ರ ಶ್ರೇಯಾಂಕದ ನೊವಾಕ್ ಜೊಕೊವಿಕ್ ಫ್ರೆಂಚ್ ಓಪನ್‌ನಲ್ಲಿ 50ನೆ ಗೆಲುವು ಸಾಧಿಸುವುದರೊಂದಿಗೆ ಮೂರನೆ ಸುತ್ತಿಗೆ ಪ್ರವೇಶಿಸಿದರು.

ಇಲ್ಲಿ ಗುರುವಾರ ನಡೆದ 2ನೆ ಪಂದ್ಯದಲ್ಲಿ 29ರ ಹರೆಯದ ಜೊಕೊವಿಕ್ ಬೆಲ್ಜಿಯಂನ ಹಿರಿಯ ಆಟಗಾರ ಸ್ಟೀವ್ ಡಾರ್ಸಿಸ್‌ರನ್ನು 7-5, 6-3, 6-4 ಸೆಟ್‌ಗಳ ಅಂತರದಿಂದ ಮಣಿಸಿದರು.

ಎಲ್ಲ ನಾಲ್ಕು ಗ್ರಾನ್‌ಸ್ಲಾಮ್ ಪ್ರಶಸ್ತಿಯನ್ನು ಜಯಿಸಿದ ವಿಶ್ವದ 8ನೆ ಆಟಗಾರ ಎನಿಸಿಕೊಳ್ಳುವತ್ತ ಹೆಜ್ಜೆ ಇಟ್ಟಿರುವ ಜೊಕೊವಿಕ್ ಮುಂದಿನ ಸುತ್ತಿನಲ್ಲಿ ಸ್ಲೋವಾನಿಯ ಮೂಲದ ಬ್ರಿಟನ್ ಆಟಗಾರ ಅಲ್ಝಾಝ್ ಬಿಡಾನೆ ಅವರನ್ನು ಎದುರಿಸಲಿದ್ದಾರೆ.

ಮೂರನೆ ಸುತ್ತಿಗೆ ಸೆರೆನಾ,ಬ್ಯಾಕ್‌ಸಿನ್‌ಸ್ಕಿ

ಪ್ಯಾರಿಸ್, ಮೇ 26: ಅಗ್ರ ಶ್ರೇಯಾಂಕಿತೆ ಹಾಗೂ ಹಾಲಿ ಚಾಂಪಿಯನ್ ಸೆರೆನಾ ವಿಲಿಯಮ್ಸ್ ಫ್ರೆಂಚ್ ಓಪನ್‌ನಲ್ಲಿ ಮೂರನೆ ಸುತ್ತಿಗೆ ಪ್ರವೇಶಿಸಿದ್ದಾರೆ.

ಸೆರೆನಾ ಗುರುವಾರ ನಡೆದ ಮಹಿಳೆಯರ ಸಿಂಗಲ್ಸ್‌ನ ಎರಡನೆ ಸುತ್ತಿನ ಪಂದ್ಯದಲ್ಲಿ ಬ್ರೆಝಿಲ್‌ನ ಟೆಲಿಯಾನಾ ಪೆರೇರರನ್ನು 6-2, 6-1 ಸೆಟ್‌ಗಳ ಅಂತರದಿಂದ ಸೋಲಿಸಿದ್ದಾರೆ.

22ನೆ ಗ್ರಾನ್‌ಸ್ಲಾಮ್ ಪ್ರಶಸ್ತಿಯ ಮೇಲೆ ಕಣ್ಣಿಟ್ಟಿರುವ ಸೆರೆನಾ 1999ರಲ್ಲಿ ಸ್ಟೆಫಿಗ್ರಾಫ್ ನಿರ್ಮಿಸಿದ್ದ 22 ಪ್ರಶಸ್ತಿಗಳ ದಾಖಲೆಯನ್ನು ಮುರಿಯಲು ಎದುರು ನೋಡುತ್ತಿದ್ದಾರೆ.

ಮೂರು ಬಾರಿ ಫ್ರೆಂಚ್ ಓಪನ್ ಪ್ರಶಸ್ತಿಯನ್ನು ಜಯಿಸಿರುವ ಸೆರೆನಾ ವಿಶ್ವದ 81 ರ್ಯಾಂಕಿನ ಆಟಗಾರ್ತಿ ಪೆರೇರ ವಿರುದ್ಧ ಕೇವಲ 66 ನಿಮಿಷಗಳಲ್ಲಿ ಜಯ ಸಾಧಿಸಿದರು.

ಬ್ಯಾಕ್‌ಸಿನ್‌ಸ್ಕಿ ಮೂರನೆ ಸುತ್ತಿಗೆ ಲಗ್ಗೆ

ಪ್ಯಾರಿಸ್, ಮೇ 26: ಫ್ರೆಂಚ್ ಓಪನ್‌ನಲ್ಲಿ ಉತ್ತಮ ದಾಖಲೆಯನ್ನು ಕಾಯ್ದುಕೊಂಡಿರುವ ಟೈಮಿಯಾ ಬ್ಯಾಕ್‌ಸಿನ್‌ಸ್ಕಿ ಮೂರನೆ ಸುತ್ತಿಗೆ ತೇರ್ಗಡೆಯಾಗಿದ್ದಾರೆ.

ಗುರುವಾರ ಇಲ್ಲಿ ನಡೆದ ಮಹಿಳೆಯರ ಸಿಂಗಲ್ಸ್‌ನ ಎರಡನೆ ಸುತ್ತಿನ ಪಂದ್ಯದಲ್ಲಿ ಬ್ಯಾಕ್‌ಸಿನ್‌ಸ್ಕಿ ಕೆನಡಾದ ಯುಗಿನ್ ಬೌಚರ್ಡ್‌ರನ್ನು 6-4, 6-4 ಸೆಟ್‌ಗಳ ಅಂತರದಿಂದ ಮಣಿಸಿದ್ದಾರೆ.

 ಕಳೆದ ವರ್ಷ ನಡೆದ ಫ್ರೆಂಚ್ ಓಪನ್‌ನಲ್ಲಿ ಸೆಮಿಫೈನಲ್‌ಗೆ ತಲುಪಿದ್ದ ಟೈಮಿಯಾ ಚಾಂಪಿಯನ್ ಸೆರೆನಾ ವಿಲಿಯಮ್ಸ್‌ಗೆ ಶರಣಾಗಿದ್ದರು.

2014ರ ಫ್ರೆಂಚ್ ಓಪನ್‌ನಲ್ಲಿ ಸೆಮಿಫೈನಲ್‌ಗೆ ತಲುಪಿದ್ದ ಬೌಚರ್ಡ್ ಎರಡೂ ಸೆಟ್‌ನಲ್ಲಿ ತೀವ್ರ ಪೈಪೋಟಿ ನೀಡಿದರೂ ಗೆಲುವು ಮರೀಚಿಕೆಯಾಯಿತು.

ಮೂರನೆ ಸುತ್ತಿಗೆ ತಲುಪಿರುವ ಸ್ವಿಸ್‌ನ ನಂ.1 ಆಟಗಾರ್ತಿ ಬ್ಯಾಕ್‌ಸಿನ್‌ಸ್ಕಿ ಫ್ರಾನ್ಸ್‌ನ ಪೌಲಿನ್ ಪಾರ್ಮೆಂಟಿಯೆರ್ ಅಥವಾ ಇರಿನಾ ಪಾಲ್ಕೊನಿ ಅವರನ್ನು ಎದುರಿಸಲಿದ್ದಾರೆ.

ಮಾಜಿ ಫ್ರೆಂಚ್ ಓಪನ್ ಚಾಂಪಿಯನ್ ಅನಾ ಇವಾನೊವಿಕ್ ಅವರು ಕುರುಮಿ ನಾರಾ ಅವರನ್ನು 7-5, 6-1 ಸೆಟ್‌ಗಳ ಅಂತರದಿಂದ ಮಣಿಸಿದರು.

ಪ್ರಿ-ಕ್ವಾರ್ಟರ್ ಫೈನಲ್‌ಗೆ ಪೇಸ್-ಹಿಂಗಿಸ್

ಪ್ಯಾರಿಸ್, ಮೇ 26: ಲಿಯಾಂಡರ್ ಪೇಸ್ ಹಾಗೂ ಮಾರ್ಟಿನಾ ಹಿಂಗಿಸ್ ಫ್ರೆಂಚ್ ಓಪನ್‌ನ ಮಿಶ್ರ ಡಬಲ್ಸ್ ವಿಭಾಗದಲ್ಲಿ ಪ್ರಿ-ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ.

ಕಳೆದ ವರ್ಷ ಮೂರು ಬಾರಿ ಗ್ರಾನ್‌ಸ್ಲಾಮ್ ಪ್ರಶಸ್ತಿಯನ್ನು ಗೆದ್ದುಕೊಂಡಿರುವ ಪೇಸ್ ಹಾಗೂ ಹಿಂಗಿಸ್ ಗುರುವಾರ ಇಲ್ಲಿ ನಡೆದ ಪಂದ್ಯದಲ್ಲಿ ಜರ್ಮನಿ-ಕೊಲಂಬಿಯಾದ ಅನ್ನಾ-ಲೆನಾ ಗ್ರಾಯೆನ್‌ಫೇಲ್ಡ್ ಹಾಗೂ ರಾಬರ್ಟ ಫರ್ಹಾ ಅವರನ್ನು 6-4, 6-4 ಸೆಟ್‌ಗಳ ಅಂತರದಿಂದ ಮಣಿಸಿದ್ದಾರೆ.

ಪೇಸ್-ಹಿಂಗಿಸ್ ಜೋಡಿ ಮುಂದಿನ ಸುತ್ತಿನಲ್ಲಿ ನಾಲ್ಕನೆ ಶ್ರೇಯಾಂಕದ ಜೋಡಿ ಯಾರೊಸ್ಲಾವಾ ಶ್ವೆಡೋವಾ ಹಾಗೂ ಫ್ಲಾರಿನ್ ಮೆರ್ಗಿಯಾರನ್ನು ಎದುರಿಸಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News