×
Ad

ಬೆಳ್ಳಿಗೆ ತೃಪ್ತಿಪಟ್ಟುಕೊಂಡ ಸೋನಿಯಾ ಲಾಥರ್

Update: 2016-05-27 23:13 IST

ವಿಶ್ವ ವನಿತೆಯರ ಬಾಕ್ಸಿಂಗ್ ಚಾಂಪಿಯನ್‌ಶಿಪ್

ಅಸ್ತಾನ, ಮೇ 27: ವಿಶ್ವ ವನಿತೆಯರ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ಸೋನಿಯಾ ಲಾಥರ್ ಫೈನಲ್‌ನಲ್ಲಿ ಸೋಲುವುದರೊಂದಿಗೆ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟುಕೊಂಡರು.

ಶುಕ್ರವಾರ ಇಲ್ಲಿ ನಡೆದ 57 ಕೆಜಿ ತೂಕ ವಿಭಾಗದ ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ 24ರ ಹರೆಯದ ಸೋನಿಯಾ ವಿಶ್ವದ ನಂ.1 ಇಟಲಿಯ ಬಾಕ್ಸರ್ ಅಲೆಸ್ಸಿಯಾ ಮೆಸಿಯಾನೊ ವಿರುದ್ಧ 1-2 ಅಂತರದಿಂದ ಶರಣಾಗಿದ್ದಾರೆ. ಅಲೆಸ್ಸಿಯಾಗೆ ತೀವ್ರ ಪೈಪೋಟಿ ನೀಡಿದ್ದ ಸೋನಿಯಾ ಕೂದಲೆಳೆ ಅಂತರದಿಂದ ವಿಶ್ವ ಚಾಂಪಿಯನ್ ಕಿರೀಟ ಕಳೆದುಕೊಂಡರು.

ಗುರುವಾರ ನಡೆದ ಸೆಮಿ ಫೈನಲ್ ಪಂದ್ಯದಲ್ಲಿ ಕಝಕಿಸ್ತಾನದ ಐಝಾನ್ ಖಾಜಾಬೆಕೊವರನ್ನು 3-0 ಅಂತರದಿಂದ ಸೋಲಿಸಿದ್ದ ಸೋನಿಯಾ ಫೈನಲ್‌ಗೆ ತಲುಪಿದ್ದರು.

ಸೋನಿಯಾ ಸ್ಪರ್ಧಿಸಿರುವ 57 ಕೆಜಿ ತೂಕ ವಿಭಾಗ ಒಲಿಂಪಿಕ್ಸ್‌ನ ಅರ್ಹತಾ ಪಟ್ಟಿಯಲ್ಲಿಲ್ಲ. ಕೇವಲ ಮೂರು ತೂಕ ವಿಭಾಗಗಳಾದ 51 ಕೆ.ಜಿ., 60 ಕೆ.ಜಿ. ಹಾಗೂ 75 ಕೆ.ಜಿ. ವಿಭಾಗದಲ್ಲಿ ಜಯ ಸಾಧಿಸುವ ಬಾಕ್ಸರ್‌ಗೆ ಮಾತ್ರ ಒಲಿಂಪಿಕ್ಸ್‌ನಲ್ಲಿ ಭಾಗವಹಿಸುವ ಅವಕಾಶವಿತ್ತು.

ಇದೇ ಟೂರ್ನಿಯಲ್ಲಿ ಹಿರಿಯ ಬಾಕ್ಸರ್ ಮೇರಿ ಕೋಮ್, ಎಲ್. ಸರಿತಾದೇವಿ ಹಾಗೂ ಪೂಜಾ ರಾಣಿ ಒಲಿಂಪಿಕ್ಸ್ ತೂಕ ವಿಭಾಗದಲ್ಲಿ ಸ್ಪರ್ಧೆಗಿಳಿದಿದ್ದರೂ ಎರಡನೆ ಸುತ್ತಿನಲ್ಲಿ ಸೋಲುವ ಮೂಲಕ ರಿಯೋ ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯುವಲ್ಲಿ ವಿಫಲರಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News