×
Ad

ಚೊಚ್ಚಲ ಪ್ರಶಸ್ತಿಗಾಗಿ ರವಿವಾರ ಬೆಂಗಳೂರು-ಹೈದರಾಬಾದ್ ಪೈಪೋಟಿ

Update: 2016-05-28 23:49 IST

ಆರ್‌ಸಿಬಿಯ ಬ್ಯಾಟಿಂಗ್-ಸನ್‌ರೈಸರ್ಸ್‌ನ ಬೌಲಿಂಗ್ ನಡುವೆ ಸ್ಪರ್ಧೆ

ಬೆಂಗಳೂರು, ಮೇ 28: ಒಂದೂವರೆ ತಿಂಗಳ ಕಾಲ ನಡೆದ 9ನೆ ಆವೃತ್ತಿಯ ಐಪಿಎಲ್ ಟೂರ್ನಿ ಕ್ಲೈಮ್ಯಾಕ್ಸ್ ಹಂತಕ್ಕೆ ತಲುಪಿದ್ದು, ರವಿವಾರ ಇಲ್ಲಿ ನಡೆಯಲಿರುವ ಫೈನಲ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಹಾಗೂ ಡೇವಿಡ್ ವಾರ್ನರ್ ನಾಯಕತ್ವದ ಸನ್‌ರೈಸರ್ಸ್ ಹೈದರಾಬಾದ್ ತಂಡ ಚೊಚ್ಚಲ ಐಪಿಎಲ್ ಟ್ರೋಫಿಗಾಗಿ ಹೋರಾಟ ನಡೆಸಲಿವೆ.

ಆರ್‌ಸಿಬಿಗೆ ಎರಡು ಬಾರಿ ಐಪಿಎಲ್ ಫೈನಲ್ ಆಡಿರುವ ಅನುಭವವಿದೆ. 2009 ಹಾಗೂ 2011ರಲ್ಲಿ ಪ್ರಶಸ್ತಿ ಸುತ್ತಿಗೆ ಪ್ರವೇಶಿಸಿದ್ದ ಬೆಂಗಳೂರು ತಂಡ ರನ್ನರ್ಸ್‌-ಅಪ್‌ಗೆ ತೃಪ್ತಿಪಟ್ಟುಕೊಂಡಿತ್ತು.

2013ರಲ್ಲಿ ಐಪಿಎಲ್‌ಗೆ ಕಾಲಿರಿಸಿದ್ದ ಸನ್‌ರೈಸರ್ಸ್ ಆ ವರ್ಷ ಪ್ಲೇ-ಆಫ್‌ಗೆ ತೇರ್ಗಡೆಯಾಗಿತ್ತು. ಆ ನಂತರದ ಆವೃತ್ತಿಯಲ್ಲಿ ಗಮನಾರ್ಹ ಪ್ರದರ್ಶನ ನೀಡಿರಲಿಲ್ಲ. ಈ ವರ್ಷದ ಐಪಿಎಲ್‌ನಲ್ಲಿ ಆರ್‌ಸಿಬಿ ಉತ್ತಮ ಆರಂಭವನ್ನೂ ಪಡೆದಿದ್ದರೂ ಒಂದು ಹಂತದಲ್ಲಿ ಪ್ಲೇ-ಆಫ್ ತಲುಪುವುದು ಅನುಮಾನವಾಗಿತ್ತು. ಆರ್‌ಸಿಬಿಗೆ ನಾಕೌಟ್ ಹಂತ ತಲುಪಲು ಕೊನೆಯ ನಾಲ್ಕೂ ಪಂದ್ಯಗಳನ್ನು ಗೆಲ್ಲಲೇಬೇಕಾಗಿತ್ತು. ಆ ಕಠಿಣ ಸವಾಲನ್ನು ಮೆಟ್ಟಿನಿಂತ ಆರ್‌ಸಿಬಿ ಮೂರನೆ ಬಾರಿ ಐಪಿಎಲ್ ಟೂರ್ನಿಯಲ್ಲಿ ಫೈನಲ್‌ಗೆ ಲಗ್ಗೆ ಇಡಲು ಯಶಸ್ವಿಯಾಯಿತು.

ಕಳೆದ ಎರಡು ಬಾರಿ ಐಪಿಎಲ್ ಟ್ರೋಫಿ ಗೆಲ್ಲುವುದರಿಂದ ವಂಚಿತವಾಗಿರುವ ಆರ್‌ಸಿಬಿ ಈ ಬಾರಿ ತವರು ನೆಲದಲ್ಲಿ ಪ್ರಶಸ್ತಿ ಎತ್ತಿ ಹಿಡಿಯುವ ಅದಮ್ಯ ವಿಶ್ವಾಸದಲ್ಲಿದೆ.

ಆರ್‌ಸಿಬಿ ಸರಿಯಾದ ಸಮಯಕ್ಕೆ ಗೆಲುವಿನ ಕುದುರೆ ಏರಿದೆ. ಕಳೆದ 5 ಪಂದ್ಯಗಳಲ್ಲಿ ಗುಜರಾತ್ ಲಯನ್ಸ್(144ರನ್), ಕೋಲ್ಕತಾ(9 ವಿಕೆಟ್), ಪಂಜಾಬ್(82ರನ್), ಡೆಲ್ಲಿ(6 ವಿಕೆಟ್) ಹಾಗೂ ಕ್ವಾಲಿಫೈಯರ್-1ರಲ್ಲಿ ಮತ್ತೊಮ್ಮೆ ಗುಜರಾತ್ ತಂಡವನ್ನು ಮಣಿಸಿ ಫೈನಲ್‌ಗೆ ಪ್ರವೇಶಿಸಿತ್ತು. ಕೊಹ್ಲಿ ಹಾಗೂ ಎಬಿಡಿವಿಲಿಯರ್ಸ್ ಆರ್‌ಸಿಬಿಯ ಗೆಲುವಿನ ರೂವಾರಿಗಳಾಗಿದ್ದಾರೆ.

ಕೊಹ್ಲಿ ಬ್ಯಾಟಿಂಗ್‌ನಲ್ಲಿ ಮಾತ್ರವಲ್ಲ ನಾಯಕತ್ವದಿಂದಲೂ ಗಮನ ಸೆಳೆಯುತ್ತಿದ್ದಾರೆ. ಒಂದು ಹಂತದಲ್ಲಿ ಟೂರ್ನಿಯಿಂದ ಹೊರ ಬೀಳುವ ಭೀತಿಯಲ್ಲಿದ್ದ ತಂಡಕ್ಕೆ ಆತ್ಮವಿಶ್ವಾಸ ತುಂಬಿದ್ದಾರೆ. ಸ್ವತಹ ಭರ್ಜರಿ ಬ್ಯಾಟಿಂಗ್ ಹಾಗೂ ಉತ್ತಮ ನಾಯಕತ್ವದಿಂದ ತಂಡವನ್ನು ಪ್ರಶಸ್ತಿ ಸುತ್ತಿಗೆ ತಲುಪಿಸಿದ್ದಾರೆ.

ಕೊಹ್ಲಿ ಜೀವನಶ್ರೇಷ್ಠ ಫಾರ್ಮ್‌ನಲ್ಲಿದ್ದು, 15 ಪಂದ್ಯಗಳಲ್ಲಿ 6 ಅರ್ಧಶತಕ ಹಾಗೂ 4 ಶತಕಗಳ ಸಹಿತ ಒಟ್ಟು 919 ರನ್ ಗಳಿಸಿದ್ದಾರೆ. ಐಪಿಎಲ್‌ನಲ್ಲಿ ಸಾವಿರ ರನ್ ಗಳಿಸಿದ ಮೊದಲ ದಾಂಡಿಗ ಎನಿಸಿಕೊಳ್ಳುವತ್ತ ದಿಟ್ಟ ಹೆಜ್ಜೆ ಇಟ್ಟಿದ್ದಾರೆ. ಕೊಹ್ಲಿಗೆ ಸಾಥ್ ನೀಡುತ್ತಿರುವ ವಿಲಿಯರ್ಸ್ 1 ಶತಕ, 6 ಅರ್ಧಶತಕಗಳಿರುವ 682 ರನ್ ಗಳಿಸಿ ಲೀಗ್‌ನಲ್ಲಿ 3ನೆ ಗರಿಷ್ಠ ಸ್ಕೋರರ್ ಆಗಿ ಹೊರಹೊಮ್ಮಿದ್ದಾರೆ.

ಮೇ 24ರಂದು ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಆರ್‌ಸಿಬಿ ಗೆಲುವಿಗೆ 159 ರನ್ ಬೆನ್ನಟ್ಟುವಾಗ ಒಂದು ಹಂತದಲ್ಲಿ 29 ರನ್‌ಗೆ 5 ವಿಕೆಟ್ ಕಳೆದುಕೊಂಡು ಸೋಲಿನ ಸುಳಿಗೆ ಸಿಲುಕಿತ್ತು. ಆಗ ತಂಡದ ನೆರವಿಗೆ ಬಂದಿದ್ದ ವಿಲಿಯರ್ಸ್ ಔಟಾಗದೆ 79 ರನ್ ಗಳಿಸಿದ್ದಲ್ಲದೆ, ಇಕ್ಬಾಲ್ ಅಬ್ದುಲ್ಲಾ(33)ರೊಂದಿಗೆ 7ನೆ ವಿಕೆಟ್‌ಗೆ 91 ರನ್ ಜೊತೆಯಾಟ ನಡೆಸಿ ತಂಡವನ್ನು ಫೈನಲ್‌ಗೆ ತಲುಪಿಸಿದ್ದರು.

 ಆರ್‌ಸಿಬಿ ಬೌಲಿಂಗ್ ವಿಭಾಗದಲ್ಲಿ ಲೆಗ್ ಸ್ಪಿನ್ನರ್ ಯುಝ್ವೇಂದರ್ ಚಾಹಲ್ 12 ಪಂದ್ಯಗಳಲ್ಲಿ 20 ವಿಕೆಟ್‌ಗಳನ್ನು ಕಬಳಿಸಿ ಸ್ಥಿರ ಪ್ರದರ್ಶನ ನೀಡುತ್ತಿದ್ದಾರೆ. ಗುಜರಾತ್ ವಿರುದ್ಧದ ಕಳೆದ ಪಂದ್ಯದಲ್ಲಿ 42 ರನ್ ಬಿಟ್ಟುಕೊಟ್ಟಿದ್ದರೂ ಫೈನಲ್‌ನಲ್ಲಿ ಆಡುವುದು ಖಚಿತ. ಆಲ್‌ರೌಂಡರ್ ಶೇನ್ ವ್ಯಾಟ್ಸನ್ 15 ಪಂದ್ಯಗಳಲ್ಲಿ 20 ವಿಕೆಟ್ ಪಡೆದಿದ್ದಾರೆ.

ಕಳೆದ ಪಂದ್ಯದಲ್ಲಿ ಸನ್‌ರೈಸರ್ಸ್ ವಿರುದ್ಧ 15 ರನ್‌ಗಳ ಅಂತರದಿಂದ ಸೋತಿರುವ ಆರ್‌ಸಿಬಿಗೆ ರವಿವಾರ ಸೇಡು ತೀರಿಸಿಕೊಳ್ಳಲು ಉತ್ತಮ ಅವಕಾಶ ಲಭಿಸಿದೆ.

ಆರ್‌ಸಿಬಿಯಂತೆಯೇ ಸನ್‌ರೈಸರ್ಸ್ ತಂಡ ಕೂಡ ನಾಯಕ ವಾರ್ನರ್ ಪ್ರದರ್ಶನವನ್ನು ಹೆಚ್ಚು ಅವಲಂಬಿಸಿದೆ. ಸನ್‌ರೈಸರ್ಸ್ ತಂಡ ಪ್ಲೇ-ಆಫ್ ಸುತ್ತಿನಲ್ಲಿ ಸತತ ಎರಡು ಪ್ರಮುಖ ಪಂದ್ಯಗಳನ್ನು ಜಯಿಸಿ ಫೈನಲ್‌ಗೆ ತಲುಪಿದೆ. ಎಲಿಮಿನೇಟರ್ ಸುತ್ತಿನಲ್ಲಿ 2 ಬಾರಿಯ ಚಾಂಪಿಯನ್ ಕೋಲ್ಕತಾವನ್ನು 22 ರನ್‌ಗಳಿಂದ ಮಣಿಸಿದ್ದ ಸನ್‌ರೈಸರ್ಸ್ ಎರಡನೆ ಕ್ವಾಲಿಫೈಯರ್ ಪಂದ್ಯದಲ್ಲಿ ಲಯನ್ಸ್ ತಂಡವನ್ನು 4 ವಿಕೆಟ್‌ಗಳಿಂದ ಸೋಲಿಸಿತ್ತು. ಇದೀಗ ವಾರ್ನರ್ ಭರ್ಜರಿ ಫಾರ್ಮ್‌ನಲ್ಲಿದ್ದಾರೆ. 16 ಪಂದ್ಯಗಳಲ್ಲಿ 8 ಅರ್ಧಶತಕಗಳ ಸಹಿತ ಒಟ್ಟು 799 ರನ್ ಗಳಿಸಿ ತಂಡವನ್ನು ಎಲ್ಲರಿಗೂ ಮಾದರಿಯಾಗಿ ಮುನ್ನಡೆಸುತ್ತಿದ್ದಾರೆ.

ಶುಕ್ರವಾರ 2ನೆ ಕ್ವಾಲಿಫೈಯರ್ ಪಂದ್ಯದಲ್ಲಿ ಲಯನ್ಸ್ ವಿರುದ್ಧ ಔಟಾಗದೆ ಬಾರಿಸಿದ್ದ 93 ರನ್ ಟೂರ್ನಿಯಲ್ಲಿ ವಾರ್ನರ್ ಗಳಿಸಿರುವ ಗರಿಷ್ಠ ಸ್ಕೋರ್. ಲಯನ್ಸ್ ವಿರುದ್ಧ ಏಕಾಂಗಿ ಹೋರಾಟ ನೀಡಿದ್ದ ವಾರ್ನರ್ ತಂಡವನ್ನು ಫೈನಲ್‌ಗೆ ತಲುಪಿಸಿದ್ದಾರೆ. ಸನ್‌ರೈಸರ್ಸ್ ತಂಡದಲ್ಲಿ ವಾರ್ನರ್‌ರಲ್ಲದೆ ಶಿಖರ್ ಧವನ್(473 ರನ್), ಯುವರಾಜ್ ಸಿಂಗ್, ಮೊಸಿಸ್ ಹೆನ್ರಿಕ್ಸ್, ದೀಪಕ್ ಹೂಡ, ನಮನ್ ಓಜಾ ಹಾಗೂ ಬಿಗ್-ಹಿಟ್ಟಿಂಗ್ ಆಲ್‌ರೌಂಡರ್ ಬೆನ್ ಕಟ್ಟಿಂಗ್ ಇದ್ದಾರೆ ಬಲಿಷ್ಠವಾಗಿದೆ ಹೈದರಾಬಾದ್ ಬೌಲಿಂಗ್ ವಿಭಾಗ:

ರವಿವಾರದ ಫೈನಲ್ ಆರ್‌ಸಿಬಿಯ ಬ್ಯಾಟಿಂಗ್ ಹಾಗೂ ಸನ್‌ರೈಸರ್ಸ್‌ನ ಬೌಲಿಂಗ್ ಪಡೆಯ ನಡುವಿನ ಸ್ಪರ್ಧೆ ಎಂದರೂ ತಪ್ಪಲ್ಲ. ಸನ್‌ರೈಸರ್ಸ್ ತಂಡ ವೇಗದ ಬೌಲರ್‌ಗಳನ್ನೇ ಬಲವಾಗಿ ನಂಬಿದೆ. ಎ.30 ರಂದು ಬೆಂಗಳೂರಿನಲ್ಲಿ ನಡೆದಿದ್ದ ಲೀಗ್ ಪಂದ್ಯದಲ್ಲಿ ಆರ್‌ಸಿಬಿ ವಿರುದ್ಧ ಜಯ ಸಾಧಿಸಲು ಬೌಲರ್‌ಗಳು ಶ್ರಮಿಸಿದ್ದರು.

ವೇಗದ ಬೌಲರ್ ಭುವನೇಶ್ವರ ಕುಮಾರ್ 16 ಪಂದ್ಯಗಳಲ್ಲಿ 23 ವಿಕೆಟ್‌ಗಳನ್ನು ಪಡೆಯುವ ಮೂಲಕ ಟೂರ್ನಿಯಲ್ಲಿ ಗರಿಷ್ಠ ವಿಕೆಟ್ ಪಡೆದ ಬೌಲರ್ ಆಗಿದ್ದಾರೆ. ಬಾಂಗ್ಲಾದೇಶದ ವೇಗಿ ಮುಸ್ತಫಿಝುರ್ರಹ್ಮಾನ್(16 ವಿಕೆಟ್, 15 ಪಂದ್ಯ) ನಾಯಕನ ನಿರೀಕ್ಷೆಗಿಂತ ಹೆಚ್ಚು ಪ್ರದರ್ಶನ ನೀಡುತ್ತಿದ್ದಾರೆ. ಗಾಯದ ಸಮಸ್ಯೆಯಿಂದಾಗಿ ಗುಜರಾತ್ ವಿರುದ್ಧದ ಕ್ವಾಲಿಫೈಯರ್ ಪಂದ್ಯದಿಂದ ಹೊರಗುಳಿದಿದ್ದ ರಹ್ಮಾನ್ ಫೈನಲ್‌ನಲ್ಲಿ ಆಡುವ ಸಾಧ್ಯತೆಯಿದೆ.

ಬರಿಂದರ್ ಸ್ರಾನ್ ಟೂರ್ನಿಯ ನಡುವೆಯೇ ತಂಡವನ್ನು ತೊರೆದಿದ್ದ ಹಿರಿಯ ಬೌಲರ್ ಆಶೀಷ್ ನೆಹ್ರಾ ಅನುಪಸ್ಥಿತಿ ಕಾಡದಂತೆ ಪ್ರದರ್ಶನ ನೀಡುತ್ತಿದ್ದಾರೆ.

ತಂಡಗಳ ಸಾಧನೆ

ಆರ್‌ಸಿಬಿ ಒಟ್ಟು ಪಂದ್ಯ: 15

ಗೆಲುವು 9, ಸೋಲು 6

ಸನ್‌ರೈಸರ್ಸ್

ಒಟ್ಟು ಪಂದ್ಯ: 16

 ಜಯ 10, ಸೋಲು 6

ಪಿಚ್ ಹಾಗೂ ಹವಾಗುಣ: ಚಿನ್ನಸ್ವಾಮಿ ಸ್ಟೇಡಿಯಂ ಸಾಮಾನ್ಯವಾಗಿ ಬ್ಯಾಟ್ಸ್‌ಮನ್‌ಗಳ ಸ್ವರ್ಗವಾಗಿದೆ. ಆದರೆ, ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಪಿಚ್ ಎಂದಿನಂತೆ ಇರಲಿಲ್ಲ. ಈ ವರ್ಷದ ಐಪಿಎಲ್‌ನಲ್ಲಿ ಬೆಂಗಳೂರಿನ ಪಿಚ್‌ನಲ್ಲಿ ಮೂರು ಬಾರಿ ತಂಡವೊಂದು 200ಕ್ಕೂ ಅಧಿಕ ರನ್ ಗಳಿಸಿದೆ. ಇದರಲ್ಲಿ 15 ಓವರ್‌ಗಳ ಪಂದ್ಯವೂ ಸೇರಿದೆ. ಆ ಪಂದ್ಯದಲ್ಲೂ 200ಕ್ಕೂ ಅಧಿಕ ರನ್ ಹರಿದಿತ್ತು. ರವಿವಾರ ಸಂಜೆ ಮಳೆ ಬರುವ ಸಾಧ್ಯತೆಯಿದೆ. ಒಂದು ವೇಳೆ ರವಿವಾರದ ಪಂದ್ಯ ಮಳೆಗಾಹುತಿಯಾದರೆ, ಸೋಮವಾರ ಮೀಸಲು ದಿನವನ್ನು ಇಡಲಾಗಿದೆ.

ಅಂಕಿ-ಅಂಶ: * ಕೊಹ್ಲಿ ಇನ್ನು 81 ರನ್ ಗಳಿಸಿದರೆ ಐಪಿಎಲ್ ಋತುವಿನಲ್ಲಿ 1000 ರನ್ ಗಳಿಸಿದ ಮೊದಲ ಬ್ಯಾಟ್ಸ್‌ಮನ್ ಎನಿಸಿಕೊಳ್ಳುತ್ತಾರೆ.

*ಈ ವರ್ಷ ಕೊಹ್ಲಿ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಆಡಿರುವ 8 ಇನಿಂಗ್ಸ್‌ಗಳಲ್ಲಿ ಆರು ಬಾರಿ 50ಕ್ಕೂ ಅಧಿಕ ರನ್ ಗಳಿಸಿದ್ದಾರೆ. ಇದರಲ್ಲಿ 3 ಶತಕ ಹಾಗೂ 3 ಅರ್ಧಶತಕಗಳಿವೆ. ಲಯನ್ಸ್ ವಿರುದ್ಧದ ಮೊದಲ ಕ್ವಾಲಿಫೈಯರ್‌ನಲ್ಲಿ ಶೂನ್ಯ ಸಂಪಾದಿಸಿದ್ದಾರೆ.

*ಈ ವರ್ಷದ ಐಪಿಎಲ್‌ನಲ್ಲಿ ರನ್ ಚೇಸಿಂಗ್ ವೇಳೆ ವಾರ್ನರ್ 468 ರನ್ ಗಳಿಸಿದ್ದಾರೆ. ಇದು ಐಪಿಎಲ್ ಇತಿಹಾಸದಲ್ಲಿ ಬ್ಯಾಟ್ಸ್‌ಮನ್ ಓರ್ವನ ಅಪೂರ್ವ ಸಾಧನೆಯಾಗಿದೆ. 

ಸಂಭಾವ್ಯ ತಂಡಗಳು: ಆರ್‌ಸಿಬಿ: 1.ಕ್ರಿಸ್ ಗೇಲ್, 2.ವಿರಾಟ್ ಕೊಹ್ಲಿ(ನಾಯಕ), 3.ಎಬಿಡಿ ವಿಲಿಯರ್ಸ್, 4.ಕೆಎಲ್ ರಾಹುಲ್(ವಿ.ಕೀ.)5. ಶೇನ್ ವ್ಯಾಟ್ಸನ್, 6.ಸ್ಟುವರ್ಟ್ ಬಿನ್ನಿ,7. ಸಚಿನ್ ಬೇಬಿ, 8. ಕ್ರಿಸ್ ಜೋರ್ಡನ್, 9. ಇಕ್ಬಾಲ್ ಅಬ್ದುಲ್ಲಾ, 10.ಎಸ್.ಅರವಿಂದ್,11. ಯುರ್ವೆುಂದ್ರ ಚಾಹಲ್.

ಸನ್‌ರೈಸರ್ಸ್ ಹೈದರಾಬಾದ್:1. ಡೇವಿಡ್‌ವಾರ್ನರ್(ನಾಯಕ), 2. ಶಿಖರ್ ಧವನ್, 3. ಎಂ. ಹೆನ್ರಿಕ್ಸ್, 4.ಯುವರಾಜ್ ಸಿಂಗ್, 5. ದೀಪಕ್ ಹೂಡಾ, 6. ಬೆನ್ ಕಟ್ಟಿಂಗ್ಸ್, 7. ನಮನ್ ಓಜಾ(ವಿ.ಕೀ.)8. ಭುವನೇಶ್ವರ ಕುಮಾರ್, 9. ಬಿಪುಲ್ ಶರ್ಮ, 10. ಬರೀಂದರ್ ಸ್ರಾನ್, 11.ಮುಸ್ತಫಿಝುರ್ರಹ್ಮಾನ್/ಟ್ರೆಂಟ್ ಬೌಲ್ಟ್.

ಪಂದ್ಯ ಆರಂಭದ ಸಮಯ: ರಾತ್ರಿ 8:00

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News