ಡಿಸ್ಕಸ್ ಎಸೆತಗಾರ್ತಿ ಸೀಮಾ ಪೂನಿಯಾ ಒಲಿಂಪಿಕ್ಸ್‌ಗೆ ತೇರ್ಗಡೆ
ಹೊಸದಿಲ್ಲಿ, ಮೇ 29: ಹರ್ಯಾಣದ ಡಿಸ್ಕಸ್ ಎಸೆತಗಾರ್ತಿ ಸೀಮಾ ಅಂಟಿಲ್ ಪೂನಿಯಾ ಮುಂಬರುವ ರಿಯೋ ಡಿ ಜನೈರೊದಲ್ಲಿ ನಡೆಯಲಿರುವ ಒಲಿಂಪಿಕ್ಸ್‌ಗೆ ಅರ್ಹತೆ ಗಿಟ್ಟಿಸಿಕೊಂಡಿದ್ದಾರೆ.
ಕ್ಯಾಲಿಫೋರ್ನಿಯದಲ್ಲಿ ಶನಿವಾರ ನಡೆದ ಯಂಗ್ ಥ್ರೋವರ್ ಕ್ಲಾಸಿಕ್ ಅಥ್ಲೆಟಿಕ್ ಕೂಟದಲ್ಲಿ ಚಿನ್ನದ ಪದಕವನ್ನು ಜಯಿಸಿರುವ ಸೀಮಾ ಒಲಿಂಪಿಕ್ಸ್ ಗೇಮ್ಸ್‌ಗೆ ತೇರ್ಗಡೆಯಾಗಿದ್ದಾರೆ. 32ರ ಹರೆಯದ ಡಿಸ್ಕಸ್ ಎಸೆಗಾರ್ತಿ ಸೀಮಾ 62.62 ಮೀ. ದೂರ ಡಿಸ್ಕಸ್‌ನ್ನು ಎಸೆಯುವ ಮೂಲಕ ಚಿನ್ನದ ಪದಕವನ್ನು ಜಯಿಸಿದರು, ಒಲಿಂಪಿಕ್ಸ್‌ಗೆ ಅರ್ಹತೆ ಪಡೆದರು. ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯಲು 61 ಮೀ. ದೂರ ಎಸೆಯಬೇಕಾಗಿತ್ತು.
ಸೀಮಾರ ಪ್ರತಿಸ್ಪರ್ಧಿ ಅಮೆರಿಕದ ಸ್ಟೀಫನ್ ಬ್ರೌನ್-ಟ್ರಾಫ್ಟನ್ 60.50 ಮೀ. ದೂರ ಡಿಸ್ಕಸ್ ಎಸೆಯುವುದರೊಂದಿಗೆ ಬೆಳ್ಳಿ ಪದಕವನ್ನು ಜಯಿಸಿದರು.
ಸೀಮಾ ಇದುವರೆಗೆ ಅಂತಾರಾಷ್ಟ್ರೀಯ ಮಟ್ಟದ ಟೂರ್ನಿಗಳಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ. 2006ರ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಬೆಳ್ಳಿ ಪದಕವನ್ನು ಜಯಿಸಿರುವ ಸೀಮಾ 2010ರ ಆವೃತ್ತಿಯ ಗೇಮ್ಸ್‌ನಲ್ಲಿ ಕಂಚಿನ ಪದಕ ಜಯಿಸಿದ್ದರು. 2014ರಲ್ಲಿ ಗ್ಲಾಸ್ಗೋ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಬೆಳ್ಳಿ ಪದಕ ಗೆದ್ದುಕೊಂಡಿದ್ದರು.
2014ರ ಏಷ್ಯನ್ ಗೇಮ್ಸ್‌ನಲ್ಲಿ ಚಿನ್ನದ ಪದಕವನ್ನು ಜಯಿಸಿರುವ ಸೀಮಾ ಪೂನಿಯಾ 2004 ಹಾಗೂ 2012ರಲ್ಲಿ ನಡೆದ ಒಲಿಂಪಿಕ್ಸ್‌ನಲ್ಲಿ ದೇಶವನ್ನು ಪ್ರತಿನಿಧಿಸಿದ್ದರು. 2012ರ ಒಲಿಂಪಿಕ್ಸ್‌ನಲ್ಲಿ 13ನೆ ಸ್ಥಾನ ಪಡೆದಿದ್ದ ಸೀಮಾ ಆಗಸ್ಟ್‌ನಲ್ಲಿ ಆರಂಭವಾಗಲಿರುವ ರಿಯೋ 2016ರ ಒಲಿಂಪಿಕ್ಸ್ ಗೇಮ್ಸ್‌ನಲ್ಲಿ ಉತ್ತಮ ಪ್ರದರ್ಶನ ನೀಡುವ ವಿಶ್ವಾಸದಲ್ಲಿದ್ದಾರೆ.