16 ವರ್ಷಗಳ ನಂತರ ಫ್ರೆಂಚ್ ಓಪನ್‌ನ ದಿನದ ಎಲ್ಲ ಪಂದ್ಯಗಳು ರದ್ದು
Update: 2016-05-30 23:52 IST
ಪ್ಯಾರಿಸ್, ಮೇ 30: ಸುಮಾರು 16 ವರ್ಷಗಳ ಬಳಿಕ ಫ್ರೆಂಚ್ ಓಪನ್‌ನಲ್ಲಿ ದಿನದ ಎಲ್ಲ ಪಂದ್ಯಗಳು ಮಳೆಗಾಹುತಿಯಾಗಿವೆ. ಭಾರೀ ಮಳೆಯಿಂದಾಗಿ ಸೋಮವಾರ ನಿಗದಿಯಾಗಿದ್ದ ಎಲ್ಲ ಪಂದ್ಯಗಳು ರದ್ದಾಗಿವೆ ಎಂದು ಆಯೋಜಕರು ತಿಳಿಸಿದ್ದಾರೆ.
8 ಕ್ವಾರ್ಟರ್‌ಫೈನಲ್ ಪಂದ್ಯಗಳು ಸೋಮವಾರ ನಡೆಯಬೇಕಾಗಿತ್ತು. ಮಂಗಳವಾರವೂ ಮಳೆ ಸುರಿಯುವ ಸಾಧ್ಯತೆಯಿದೆ. ಮಂಗಳವಾರ ಮೂರು ಕ್ವಾರ್ಟರ್ ಫೈನಲ್ ಪಂದ್ಯಗಳು ನಿಗದಿಯಾಗಿವೆ.
ಪುರುಷರ ಸಿಂಗಲ್ಸ್‌ನಲ್ಲಿ ಆ್ಯಂಡಿ ಮರ್ರೆ ಹಾಗೂ ರಿಚರ್ಡ್ ಗ್ಯಾಸ್ಕಟ್, ಹಾಲಿ ಚಾಂಪಿಯನ್ ಸ್ಟಾನ್ ವಾವ್ರಿಂಕ, ಮಹಿಳೆಯರ ಸಿಂಗಲ್ಸ್‌ನಲ್ಲಿ ಶೆಲ್ಬಿ ರೋಜರ್ಸ್ ಹಾಗೂ ಮುಗುರುಝ ನಡುವೆ ಪಂದ್ಯ ನಡೆಯಬೇಕಾಗಿದೆ.
ಈ ವರ್ಷದ ಫ್ರೆಂಚ್ ಓಪನ್‌ನ ಮೊದಲ ದಿನ ಮಳೆಯಿಂದಾಗಿ ಪಂದ್ಯ ವಿಳಂಬವಾಗಿ ಆರಂಭವಾಗಿತ್ತು. 4 ಗಂಟೆಯಲ್ಲಿ 32 ಪಂದ್ಯಗಳ ಪೈಕಿ 10 ಪಂದ್ಯಗಳು ಮುಗಿದಿದ್ದವು. 2ನೆ ದಿನ ಎರಡೂವರೆ ಗಂಟೆ ವಿಳಂಬವಾಗಿ ಪಂದ್ಯ ಆರಂಭವಾಗಿತ್ತು.