ಅಂಡರ್-16 ತಂಡಕ್ಕೆ ಆಯ್ಕೆಯಾದ ಅರ್ಜುನ್ ತೆಂಡುಲ್ಕರ್!
ಮುಂಬೈ, ಮೇ 31: ಅಂತರ್-ವಲಯ ಟೂರ್ನಮೆಂಟ್‌ನಲ್ಲಿ ಪಶ್ಚಿಮ ವಲಯದ ಅಂಡರ್-16 ತಂಡಕ್ಕೆ ಸಚಿನ್ ತೆಂಡುಲ್ಕರ್ ಪುತ್ರ ಅರ್ಜುನ್ ಆಯ್ಕೆಯಾಗಿದ್ದಾರೆ. ಆದರೆ, ಭಂಡಾರಿ ಕಪ್ ಪಂದ್ಯದಲ್ಲಿ ಔಟಾಗದೆ 1,009 ರನ್ ಗಳಿಸಿ ವಿಶ್ವದ ಗಮನ ತನ್ನತ್ತ ಸೆಳೆದಿದ್ದ ಮುಂಬೈನ ಇನ್ನೋರ್ವ ಬಾಲಕ ಪ್ರಣಯ್ ಧನವಡೆ ಅವರನ್ನು ಆಯ್ಕೆ ಮಾಡದೇ ಇರುವುದಕ್ಕೆ ಟ್ವಿಟರ್‌ನಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ಬರೋಡಾ ಕ್ರಿಕೆಟ್ ಸಂಸ್ಥೆ ಮಂಗಳವಾರ ಮುಂಬರುವ ದೇಶಿಯ ಟೂರ್ನಿಗೆ 15 ಸದಸ್ಯರ ತಂಡವನ್ನು ಘೋಷಿಸಿತ್ತು. ಹುಬ್ಬಳ್ಳಿಯಲ್ಲಿ ನಡೆಯಲಿರುವ ಈ ಟೂರ್ನಿಗೆ ಪ್ರಣವ್‌ರನ್ನು ನಿರ್ಲಕ್ಷಿಸಿರುವ ಆಯ್ಕೆಗಾರರು ಅರ್ಜುನ್‌ರನ್ನು ತಂಡಕ್ಕೆ ಆಯ್ಕೆ ಮಾಡಿ ತಾರತಮ್ಯ ನೀತಿ ಅನುಸರಿಸಿದ್ದಾರೆ.
ಭಂಡಾರಿ ಕಪ್‌ನಲ್ಲಿ ಕೆಸಿ ಗಾಂಧಿ ಹೈಸ್ಕೂಲ್ ಪರ ಆಡಿದ್ದ ಪ್ರಣವ್ ಆರ್ಯ ಗುರುಕುಲ್ ತಂಡದ ವಿರುದ್ಧ 129 ಬೌಂಡರಿ ಹಾಗೂ 59 ಸಿಕ್ಸರ್‌ಗಳ ಸಹಿತ ಔಟಾಗದೆ 1,009 ರನ್ ಗಳಿಸಿ ಹಲವು ದಾಖಲೆಯನ್ನು ಮುರಿದಿದ್ದರು. ಆಲ್‌ರೌಂಡ್ ಆಗಿರುವ ಅರ್ಜುನ್ ಈ ತನಕ ಯಾವುದೇ ದಾಖಲೆಯನ್ನು ನಿರ್ಮಿಸಿಲ್ಲ. ತಂದೆ ಚಾಂಪಿಯನ್ ಬ್ಯಾಟ್ಸ್‌ಮನ್ ಎನ್ನುವುದು ಅರ್ಜುನ್‌ಗೆ ಪ್ಲಸ್ ಪಾಯಿಂಟ್. ಪ್ರಣಯ್ ತಂದೆ ರಿಕ್ಷಾ ಡ್ರೈವರ್. ಅವರಿಗೆ ಆಯ್ಕೆಗಾರರ ಮೇಲೆ ಪ್ರಭಾವ ಬೀರುವಷ್ಟು ಶಕ್ತಿಯಿಲ್ಲ.