×
Ad

ಇಂಡೋನೇಷ್ಯ ಸೂಪರ್ ಸರಣಿ: ಸೈನಾ ಶುಭಾರಂಭ

Update: 2016-05-31 23:41 IST

ಜಕಾರ್ತ, ಮೇ 31: ಮೂರು ಬಾರಿಯ ಚಾಂಪಿಯನ್ ಸೈನಾ ನೆಹ್ವಾಲ್ 900,000 ಡಾಲರ್ ಬಹುಮಾರ ಮೊತ್ತದ ಇಂಡೋನೇಷ್ಯ ಸೂಪರ್ ಸರಣಿಯಲ್ಲಿ ಶುಭಾರಂಭ ಮಾಡಿದ್ದಾರೆ.

ಮಂಗಳವಾರ ನಡೆದ ಮಹಿಳೆಯರ ಸಿಂಗಲ್ಸ್‌ನ ಮೊದಲ ಸುತ್ತಿನ ಪಂದ್ಯದಲ್ಲಿ ಚೈನೀಸ್ ತೈಪೆಯ ಕೆಳ ರ್ಯಾಂಕಿನ ಆಟಗಾರ್ತಿ ಪೈ ಯು ಪೊ ಅವರನ್ನು 21-11, 19-21, 21-15 ಗೇಮ್‌ಗಳ ಅಂತರದಿಂದ ಮಣಿಸಿ ಎರಡನೆ ಸುತ್ತಿಗೆ ತೇರ್ಗಡೆಯಾದರು.

ಒಂದು ಗಂಟೆ ಹಾಗೂ 3 ನಿಮಿಷಗಳ ಪಂದ್ಯದಲ್ಲಿ ಜಯ ಸಾಧಿಸಿರುವ 8ನೆ ಶ್ರೇಯಾಂಕದ ಸೈನಾ ಮುಂದಿನ ಸುತ್ತಿನಲ್ಲಿ ಇಂಡೋನೇಷ್ಯದ ಫಿತ್ರಿಯಾನಿ ಫಿತ್ರಿಯಾನಿ ಅವರನ್ನು ಎದುರಿಸಲಿದ್ದಾರೆ.

ಈ ವರ್ಷ ಚೊಚ್ಚಲ ಪ್ರಶಸ್ತಿಯ ಮೇಲೆ ಕಣ್ಣಿಟ್ಟಿರುವ ಸೈನಾ ಚೈನೀಸ್ ತೈಪೆಯ ಆಟಗಾರ್ತಿಯ ವಿರುದ್ಧ ಮೊದಲ ಗೇಮ್‌ನ್ನು 21-11 ರಿಂದ ಜಯಿಸಿದರು. ಆದರೆ, ಎರಡನೆ ಗೇಮ್‌ನಲ್ಲಿ ತಿರುಗೇಟು ನೀಡಿದ ಪೈ 21-19 ರಿಂದ ಜಯ ಸಾಧಿಸಿದರು. ಮೂರನೆ ಹಾಗೂ ನಿರ್ಣಾಯಕ ಗೇಮ್‌ನಲ್ಲಿ ಎಚ್ಚರಿಕೆಯಿಂದ ಆಡಿದ ಸೈನಾ 21-15 ರಿಂದ ಜಯ ಸಾಧಿಸಿದರು.

ಸೈನಾ 2009, 2010 ಹಾಗೂ 2012ರಲ್ಲಿ ಇಂಡೋನೇಷ್ಯಾ ಓಪನ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದರು.

ಅಶ್ವಿನಿ-ಮನು ಅತ್ರಿ ಸವಾಲು ಅಂತ್ಯ: ಭಾರತದ ಮಿಶ್ರ ಡಬಲ್ಸ್ ಜೋಡಿ ಮನು ಅತ್ರಿ ಹಾಗೂ ಅಶ್ವಿನಿ ಪೊನ್ನಪ್ಪ ಮಂಗಳವಾರ ನಡೆದ ಪ್ರಮುಖ ಸುತ್ತಿನ ಪಂದ್ಯದಲ್ಲಿ ಸಿಂಗಾಪುರದ ಜೋಡಿ ಯಾಂಗ್ ಕೈ ಟೆರ್ರಿ ಹೀ ಹಾಗೂ ವೀ ಹ್ಯಾನ್ ತಾನ್ ವಿರುದ್ಧ ಕಠಿಣ ಹೋರಾಟ ನೀಡಿದರೂ 14-21, 25-27 ಗೇಮ್‌ಗಳ ಅಂತರದಿಂದ ಶರಣಾದರು.

ಸ್ಥಳೀಯ ಆಟಗಾರ್ತಿಯರಾದ ಹೆಂಡ್ರಾ ತಂಜಯ ಹಾಗೂ ಮೊನಿಕಾ ಇಂತಾನ್‌ರನ್ನು 21-18, 21-13 ಗೇಮ್‌ಗಳ ಅಂತರದಿಂದಲೂ, ಮತ್ತೊಂದು ಪಂದ್ಯದಲ್ಲಿ ಇಂಡೋನೇಷ್ಯದ ಜೋಡಿ ದಿದಿತ್ ಜುಯಾಂಗ್ ಹಾಗೂ ಕೆಶ್ಯ ನುರ್ವಿತಾರನ್ನು 19-21, 21-10, 21-11 ಗೇಮ್‌ಗಳ ಅಂತರದಿಂದ ರೋಚಕವಾಗಿ ಮಣಿಸಿದ್ದ ಮನು ಹಾಗೂ ಅಶ್ವಿನಿ ಪ್ರಧಾನ ಸುತ್ತಿಗೆ ತೇರ್ಗಡೆಯಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News