×
Ad

ಕೊಪಾ ಅಮೆರಿಕ ಟೂರ್ನಿ:ಬ್ರೆಝಿಲ್ ತಂಡಕ್ಕೆ ನೇಮರ್ ಅಲಭ್ಯ

Update: 2016-05-31 23:44 IST

 ಲಾಸ್ ಏಂಜಲಿಸ್, ಮೇ 31: ಎರಡು ವರ್ಷಗಳ ಹಿಂದೆ ನಡೆದ ಫಿಫಾ ವಿಶ್ವಕಪ್‌ನಲ್ಲಿ ಸೆಮಿಫೈನಲ್‌ನಲ್ಲಿ ಹೊರನಡೆದಿದ್ದ ಬ್ರೆಝಿಲ್ ತಂಡ ಕೋಪಾ ಅಮೆರಿಕ ಟೂರ್ನಿಯಲ್ಲಿ ಆಡಲು ಸಜ್ಜಾಗಿದೆ. ಸುಮಾರು ಒಂದು ದಶಕಗಳ ಬಳಿಕ ಕೊಪಾ ಕಪ್ ಗೆಲ್ಲಲು ಬಯಸಿರುವ ಬ್ರೆಝಿಲ್‌ಗೆ ಸ್ಟಾರ್ ಆಟಗಾರ ನೇಮರ್ ಅನುಪಸ್ಥಿತಿ ಕಾಡುತ್ತಿದೆ.

ನೇಮರ್ ಆಗಸ್ಟ್‌ನಲ್ಲಿ ಬ್ರೆಝಿಲ್‌ನ ರಿಯೋ ಡಿಜನೈರೊದಲ್ಲಿ ನಡೆಯಲಿರುವ ಒಲಿಂಪಿಕ್ಸ್ ಗೇಮ್ಸ್‌ನಲ್ಲಿ ಲಭ್ಯವಿರುವ ಉದ್ದೇಶದಿಂದ ಕೋಪಾ ಅಮೆರಿಕ ಟೂರ್ನಿಯಿಂದ ಹೊರಗುಳಿಯಲಿದ್ದಾರೆ. ಬ್ರೆಝಿಲ್ ಈ ತನಕ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕವನ್ನು ಜಯಿಸಿಲ್ಲ. ಈ ಬಾರಿ ಆ ನಿಟ್ಟಿನಲ್ಲಿ ಪ್ರಯತ್ನ ನಡೆಸಲು ಮುಂದಾಗಲಿದೆ. ಕೋಪಾ ಅಮೆರಿಕ ಟೂರ್ನಿಯಲ್ಲಿ ನೇಮರ್ ಮಾತ್ರವಲ್ಲ, ಡಿಫೆಂಡರ್ ಥಿಯಾಗೊ ಸಿಲ್ವಾ ಹಾಗೂ ಡೇವಿಡ್ ಲೂಯಿಝ್ ಕೂಡ ಆಡುತ್ತಿಲ್ಲ.

ಕೋಪಾ ಅಮೆರಿಕ ಟೂರ್ನಿಯಲ್ಲಿ ಬ್ರೆಝಿಲ್ ಉತ್ತಮ ದಾಖಲೆ ಹೊಂದಿದೆ. 1997 ಹಾಗೂ 2007ರ ನಡುವೆ ಟೂರ್ನಮೆಂಟ್‌ನ ಐದು ಆವೃತ್ತಿಯಲ್ಲಿ ಆಡಿದ್ದ ಬ್ರೆಝಿಲ್ ನಾಲ್ಕು ಬಾರಿ ಪ್ರಶಸ್ತಿ ಜಯಿಸಿತ್ತು. 8 ವರ್ಷಗಳ ವಿರಾಮದ ಬಳಿಕ 1975 ರಿಂದ ನಿರಂತರವಾಗಿ ಕೋಪಾ ಅಮೆರಿಕ ಟೂರ್ನಿ ಆರಂಭವಾದ ಬಳಿಕ ಬ್ರೆಝಿಲ್ ಯಶಸ್ವಿ ತಂಡವಾಗಿ ಗುರುತಿಸಿಕೊಂಡಿದೆ.

2014ರ ಫಿಫಾ ವಿಶ್ವಕಪ್‌ನ ಸೆಮಿಫೈನಲ್‌ನಲ್ಲಿ ಜರ್ಮನಿಯ ವಿರುದ್ಧ 1-7 ಅಂತರದಿಂದ ಹೀನಾಯವಾಗಿ ಸೋತ ಬಳಿಕ ಬ್ರೆಝಿಲ್‌ನ ಪ್ರದರ್ಶನ ಮಟ್ಟದಲ್ಲಿ ಕುಸಿತ ಕಂಡಿದೆ. ಕಳೆದ ವರ್ಷ ಚಿಲಿಯಲ್ಲಿ ನಡೆದಿದ್ದ ಕೋಪಾ ಅಮೆರಿಕ ಟೂರ್ನಿಯಲ್ಲಿ ಕ್ವಾರ್ಟರ್‌ಫೈನಲ್‌ನಲ್ಲೇ ಸೋತಿತ್ತು.

2018ರ ವಿಶ್ವಕಪ್‌ನ ಅರ್ಹತಾ ಅಭಿಯಾನದಲ್ಲಿ ಬ್ರೆಝಿಲ್ ಕಳಪೆ ಆರಂಭ ಪಡೆದಿದೆ. ಈವರೆಗೆ 6 ಪಂದ್ಯಗಳನ್ನಾಡಿರುವ ಬ್ರೆಝಿಲ್ 2 ಜಯ, 3 ಡ್ರಾ ಸಾಧಿಸಿ ಒಟ್ಟು 9 ಅಂಕ ಗಳಿಸಿದೆ. 6ನೆ ಸ್ಥಾನದಲ್ಲಿದೆ. ಚಿಲಿ ವಿರುದ್ಧದ ಮೊದಲ ಅರ್ಹತಾ ಸುತ್ತಿನ ಪಂದ್ಯದಲ್ಲಿ ಸೋತಿರುವ ಬ್ರೆಝಿಲ್, ವೆನೆಝುಯೆಲಾ ಹಾಗೂ ಪೆರು ವಿರುದ್ಧ ಸಮಾಧಾನಕರ ಗೆಲುವು ಸಾಧಿಸಿತ್ತು. ಮಾರ್ಚ್‌ನಲ್ಲಿ ಉರುಗ್ವೆ ವಿರುದ್ಧದ ಪಂದ್ಯದಲ್ಲಿ ಬ್ರೆಝಿಲ್ ಮೊದಲ 25 ನಿಮಿಷಗಳ ಆಟದಲ್ಲಿ 2-0 ಮುನ್ನಡೆಯಲ್ಲಿತ್ತು. ಆದರೆ, 30ನೆ ನಿಮಿಷದಲ್ಲಿ ಗೋಲು ಬಾರಿಸಿದ್ದ ಎಡಿನ್ಸನ್ ಕವಾನಿ ಬ್ರೆಝಿಲ್‌ನ ವಿಶ್ವಾಸಕ್ಕೆ ತಣ್ಣೀರೆರಚಿದ್ದರು.

1994ರ ವಿಶ್ವಕಪ್ ವಿಜೇತ ತಂಡದ ನಾಯಕ ಡುಂಗಾ ಇದೀಗ ಬ್ರೆಝಿಲ್‌ನ ಕೋಚ್ ಆಗಿ ಕಾರ್ಯನಿರ್ವಹಿಸುತ್ತಿದ್ದು, ಡುಂಗಾ ಮಾರ್ಗದರ್ಶನದಲ್ಲಿ ಬ್ರೆಝಿಲ್ ಮಿಶ್ರ ಫಲಿತಾಂಶ ದಾಖಲಿಸಿದೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News