ಐಸಿಸಿ ಟೆಸ್ಟ್ ರ್ಯಾಂಕಿಂಗ್: ಆ್ಯಂಡರ್ಸನ್ ನಂ.1 ಬೌಲರ್

Update: 2016-05-31 18:22 GMT

ಹೊಸದಿಲ್ಲಿ, ಮೇ31: ಶ್ರೀಲಂಕಾ ವಿರುದ್ಧ ಇದೀಗ ನಡೆಯುತ್ತಿರುವ ಟೆಸ್ಟ್ ಸರಣಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡುತ್ತಿರುವ ಇಂಗ್ಲೆಂಡ್‌ನ ವೇಗದ ಬೌಲರ್ ಜೇಮ್ಸ್ ಆ್ಯಂಡರ್ಸನ್ ವೃತ್ತಿಜೀವನದಲ್ಲಿ ಮೊದಲ ಬಾರಿ ಐಸಿಸಿ ರ್ಯಾಂಕಿಂಗ್‌ನಲ್ಲಿ ಟೆಸ್ಟ್ ಕ್ರಿಕೆಟ್‌ನಲ್ಲಿ ನಂ.1 ಬೌಲರ್ ಆಗಿ ಹೊರ ಹೊಮ್ಮಿದ್ದಾರೆ.

33ರ ಹರೆಯದ ಆ್ಯಂಡರ್ಸನ್ ಹೆಡ್ಡಿಂಗ್ಲೆಯಲ್ಲಿ ನಡೆದ ಮೊದಲ ಟೆಸ್ಟ್‌ನಲ್ಲಿ 10 ವಿಕೆಟ್ ಗೊಂಚಲು ಹಾಗು ಚೆಸ್ಟರ್-ಲೇ-ಸ್ಟ್ರೀಟ್‌ನಲ್ಲಿ ನಡೆದ ಎರಡನೆ ಟೆಸ್ಟ್‌ನಲ್ಲಿ ಒಟ್ಟು 8 ವಿಕೆಟ್‌ಗಳನ್ನು ಉರುಳಿಸುವ ಮೂಲಕ ಇಂಗ್ಲೆಂಡ್ ತಂಡ ಲಂಕೆಯ ವಿರುದ್ಧ 2-0 ಅಂತರದಿಂದ ಟೆಸ್ಟ್ ಸರಣಿ ಜಯಿಸುವಲ್ಲಿ ಮಹತ್ವದ ಕೊಡುಗೆ ನೀಡಿದ್ದರು.

ಸೋಮವಾರ ಕೊನೆಗೊಂಡ ಲಂಕೆಯ ವಿರುದ್ಧದ ಎರಡನೆ ಟೆಸ್ಟ್‌ನಲ್ಲಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದಿದ್ದ ಆ್ಯಂಡರ್ಸನ್ ಐಸಿಸಿ ಟೆಸ್ಟ್ ಬೌಲರ್‌ಗಳ ರ್ಯಾಂಕಿಂಗ್‌ನಲ್ಲಿ ಸಹ ಆಟಗಾರ ಸ್ಟುವರ್ಟ್ ಬಿನ್ನಿ ಹಾಗೂ ಭಾರತದ ಸ್ಪಿನ್ನರ್ ಆರ್.ಅಶ್ವಿನ್‌ರನ್ನು ಹಿಂದಕ್ಕೆ ತಳ್ಳಿ ನಂ.1 ಸ್ಥಾನಕ್ಕೆ ಲಗ್ಗೆ ಇಟ್ಟಿದ್ದಾರೆ.

ಇಂಗ್ಲೆಂಡ್ ಬೌಲರ್‌ಗಳು ಐಸಿಸಿ ರ್ಯಾಂಕಿಂಗ್‌ನಲ್ಲಿ ಅಗ್ರ ಸ್ಥಾನ ಪಡೆದಿರುವುದು ಇದು ನಾಲ್ಕನೆ ಬಾರಿ ಎಂದು ಐಸಿಸಿ ದೃಢಪಡಿಸಿದೆ. 1980ರಲ್ಲಿ ಇಯಾನ್ ಬೋಥಮ್, 2004ರಲ್ಲಿ ಸ್ಟೀವ್ ಹಾರ್ಮಿಸನ್ ಹಾಗೂ ಈವರ್ಷದ ಜನವರಿಯಲ್ಲಿ ಬ್ರಾಡ್ ನಂ.1 ಸ್ಥಾನಕ್ಕೇರಿದ್ದರು.

ಒಟ್ಟು 451 ವಿಕೆಟ್ ಪಡೆದಿರುವ ಆ್ಯಂಡರ್ಸನ್ ಇಂಗ್ಲೆಂಡ್‌ನ ಪರ ಗರಿಷ್ಠ ವಿಕೆಟ್ ಪಡೆದ ಬೌಲರ್ ಎನಿಸಿಕೊಂಡಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News