ಚಾಂಪಿಯನ್ಸ್ ಟ್ರೋಫಿ; ಭಾರತಕ್ಕೆ ಮೊದಲ ಪಂದ್ಯದಲ್ಲಿ ಪಾಕ್ ಎದುರಾಳಿ

Update: 2016-06-01 16:50 GMT

ಲಂಡನ್,ಜೂ.1: ಮುಂದಿನ ವರ್ಷ ಲಂಡನ್‌ನಲ್ಲಿ ನಡೆಯಲಿರುವ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಮೆಂಟ್‌ನಲ್ಲಿ ಹಾಲಿ ಚಾಂಪಿಯನ್ ಭಾರತ ತಂಡ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಎದುರಿಸಲಿದೆ.
  2017ರ ಜೂನ್ 1ರಿಂದ 18ರ ತನಕ ಇಂಗ್ಲೆಂಡ್‌ನಲ್ಲಿ ನಡೆಯಲಿರುವ ಟೂರ್ನಮೆಂಟ್‌ನಲ್ಲಿ ಭಾರತ ‘ಬಿ’ ಗುಂಪಿನಲ್ಲಿ ಪಾಕಿಸ್ತಾನ, ದಕ್ಷಿಣ ಆಫ್ರಿಕ, ಶ್ರೀಲಂಕಾ ತಂಡಗಳೊಂದಿಗೆ ಸ್ಥಾನ ಪಡೆದಿದೆ. ಎ’ ಗುಂಪಿನಲ್ಲಿ ಆಸ್ಟ್ರೇಲಿಯ , ನ್ಯೂಝಿಲೆಂಡ್, ಇಂಗ್ಲೆಂಡ್ ಮತ್ತು ಬಾಂಗ್ಲದೇಶ ತಂಡಗಳು ಸ್ಥಾನ ಗಿಟ್ಟಿಸಿಕೊಂಡಿದೆ. ಬಾಂಗ್ಲಾದೇಶ ತಂಡ 2006ರ ಬಳಿಕ ಮೊದಲ ಬಾರಿ ಚಾಂಪಿಯನ್ಸ್ ಟ್ರೋಫಿ ಟೂರ್ನಮೆಂಟ್‌ಗೆ ಅರ್ಹತೆ ಪಡೆದಿದೆ.
ಭಾರತ ಜೂನ್ 4ರಂದು ಎಡ್ಜ್‌ಬಾಸ್ಟನ್‌ನಲ್ಲಿ ಪಾಕಿಸ್ತಾನ ತಂಡವನ್ನು ಎದುರಿಸಲಿದೆ. ಹದಿನೆಂಟು ದಿನಗಳ ಕಾಲ  ನಡೆಯಲಿರುವ ಟೂರ್ನಮೆಂಟ್‌ನ ಫೈನಲ್ ಪಂದ್ಯ ಜೂನ್ 18ರಂದ ಓವಲ್‌ನಲ್ಲಿ ನಡೆಯಲಿದೆ. ಫೈನಲ್ ಪಂದ್ಯ ಒಂದು ವೇಳೆ ಜೂನ್ 18ರಂದು ನಡೆಯಲು ಮಳೆ ಅಥವಾ ಇನ್ಯಾವುದೇ ಕಾರಣದಿಂದ ಅಡ್ಡಿಯಾಗಿ ಆಟ ನಡೆಯದಿದ್ದರೆ ಜೂನ್ 19ರಂದು ಫೈನಲ್‌ಗೆ ಮೀಸಲು ದಿನ ನಿಗದಿಪಡಿಸಲಾಗಿದೆ. ಏಷ್ಯಾದ ಎಲ್ಲ ಬಲಿಷ್ಠ ತಂಡಗಳು ಎಡ್ಜ್‌ಬ್ಯಾಸ್ಟನ್ ಮತ್ತು ಮತ್ತು ಬರ್ಮಿಂಗ್‌ಹ್ಯಾಂ ಕ್ರೀಡಾಂಗಣಗಳಲ್ಲಿ ಪರಸ್ಪರ ಎದುರಿಸಲಿ ವೆ. ಕಾರ್ಡಿಫ್‌ನ ವೇಲ್ಸ್ ಸ್ಟೇಡಿಯಂ ಮತ್ತು ಲಂಡನ್‌ನ ದಿ ಓವಲ್ ಕ್ರೀಡಾಂಗಣಗಳಲ್ಲಿ ಉಳಿದ ಪಂದ್ಯಗಳು ನಡೆಯಲಿದೆ.
 2004 ಮತ್ತು 2013ರ ಚಾಂಪಿಯನ್ಸ್ ಟ್ರೋಫಿ ಫೈನಲ್‌ನಲ್ಲಿ ಮುಗ್ಗರಿಸಿದ್ದ್ದ ಇಂಗ್ಲೆಂಡ್ ತಂಡ ಜೂನ್ 1ರಂದು ದಿ ಓವಲ್‌ನಲ್ಲಿ ಬಾಂಗ್ಲಾ ತಂಡವನ್ನು ಎದುರಿಸುವುದರೊಂದಿಗೆ ಚಾಂಪಿಯನ್ಸ್ ಟ್ರೋಫಿ ಟೂರ್ನಮೆಂಟ್‌ಗೆ ಚಾಲನೆ ದೊರೆಯಲಿದೆ. 2015ರ ಐಸಿಸಿ ವಿಶ್ವಕಪ್‌ನ ಫೈನಲ್‌ನಲ್ಲಿ ಮುಖಾಮುಖಿಯಾಗಿದ್ದ ಆಸ್ಟ್ರೇಲಿಯ ಮತ್ತು ನ್ಯೂಝಿಲೆಂಡ್ ತಂಡ ಜೂ.2ರಂದು ಎಡ್ಜ್‌ಬಾಸ್ಟನ್‌ನಲ್ಲಿ ಮುಖಾಮುಖಿಯಾಗಿದೆ. ಜೂನ್ 3ರಂದು ಮಾಜಿ ಚಾಂಪಿಯನ್‌ಗಳಾದ ಶ್ರೀಲಂಕಾ ಮತ್ತು ದಕ್ಷಿಣ ಆಫ್ರಿಕ ತಂಡಗಳು ಪರಸ್ಪರ ಎದುರಿಸಲಿದೆ.
ಟೂರ್ನಮೆಂಟ್‌ನ ಆರಂಭಕ್ಕೆ ಸರಿಯಾಗಿ ಒಂದು ವರ್ಷ ಬಾಕಿ ಉಳಿದಿರುವಾಗ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಮೆಂಟ್‌ನ ವೇಳಾಪಟ್ಟಿಯನ್ನು ಪ್ರಕಟಿಸಿದೆ. ಟೂರ್ನಮೆಂಟ್‌ನಲ್ಲಿ ನಾಕೌಟ್ ಹಂತದ ಮೂರು ಪಂದ್ಯಗಳು ಸೇರಿದಂತೆ 15 ಪಂದ್ಯಗಳು ನಿಗದಿಯಾಗಿದೆ.
ಸೆಪ್ಟಂಬರ್ 30,2015ರಂದು ಐಸಿಸಿ ಏಕದಿನ ರ್ಯಾಂಕಿಂಗ್‌ನಲ್ಲಿ ಅಗ್ರ 8ರಲ್ಲಿ ಸ್ಥಾನ ಪಡೆದ ತಂಡಗಳು ಚಾಂಪಿಯನ್ಸ್ ಟ್ರೋಫಿ ಟೂರ್ನಮೆಂಟ್‌ನಲ್ಲಿ ಅವಕಾಶ ಗಿಟ್ಟಿಸಿಕೊಂಡಿದೆ.
 ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಮೆಂಟ್ ಆರಂಭಕ್ಕೂ ಮೂರು ತಿಂಗಳ ಮುಂಚಿತವಾಗಿ 2019ರ ಐಸಿಸಿ ವಿಶ್ವಕಪ್‌ಗೆ ಅರ್ಹತೆಗೆ ನೆರವಾಗುವ ಪಂದ್ಯಗಳು ಆರಂಭಗೊಳ್ಳುತ್ತದೆ. ಈ ಕಾರಣದಿಂದಾಗಿ ಚಾಂಪಿಯನ್ಸ್ ಟ್ರೋಫಿ ಅತ್ಯಂತ ವಿಶ್ವಕಪ್‌ನಲ್ಲಿ ಆಡುವ ಅರ್ಹತೆ ಪಡೆಯಲು ಅತ್ಯಂತ ಮಹತ್ವದ ಏಕದಿನ ಕ್ರಿಕೆಟ್ ಟೂರ್ನಮೆಂಟ್ ಆಗಿದೆ.
2013ರಲ್ಲಿ ಎಡ್ಜ್‌ಬಾಸ್ಟನ್‌ನಲ್ಲಿ ಮಳೆಬಾಧಿತ ಪಂದ್ಯದಲ್ಲಿ ಭಾರತ ತಂಡ ಪಾಕಿಸ್ತಾನ ವಿರುದ್ಧ ಎಂಟು ವಿಕೆಟ್‌ಗಳ ಜಯ ಗಳಿಸಿತ್ತು. ಫೈನಲ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಐದು ರನ್‌ಗಳ ಜಯ ಗಳಿಸಿ ಎರಡನೆ ಬಾರಿ ಚಾಂಪಿಯನ್ಸ್ ಟ್ರೋಫಿ ಕಿರೀಟ ಧರಿಸಿತ್ತು.
  2009ರಲ್ಲಿ ದಕ್ಷಿಣ ಆಫ್ರಿಕದ ಸೆಂಚೂರಿಯನ್‌ನಲ್ಲಿ ಭಾರತದ ವಿರುದ್ಧ ಪಾಕಿಸ್ತಾನ 54 ರನ್‌ಗಳ ಜಯ ಗಳಿಸಿತ್ತು. ಆಸ್ಟ್ರೇಲಿಯ ತಂಡ 2006ರಲ್ಲಿ ಭಾರತದಲ್ಲಿ ಮತ್ತು 2009ರಲ್ಲಿ ದಕ್ಷಿಣ ಆಫ್ರಿಕದಲ್ಲಿ ನಡೆದ ಟೂರ್ನಮೆಂಟ್‌ನಲ್ಲಿ ಸತತ ಎರಡು ಬಾರಿ ಚಾಂಪಿಯನ್ಸ್ ಟ್ರೋಫಿ ಚಾಂಪಿಯನ್ ಆಗಿತ್ತು.
ಇಂಗ್ಲೆಂಡ್ ಮೂರನೆ ಬಾರಿ ಚಾಂಪಿಯನ್ಸ್ ಟ್ರೋಫಿ ಟೂರ್ನಮೆಂಟ್‌ನ ಆತಿಥ್ಯ ವಹಿಸಿಕೊಂಡಿದೆ. ಇಂಗ್ಲೆಂಡ್ ತನ್ನ ತವರಿನ ನೆಲದಲ್ಲಿ ಎರಡು ಬಾರಿ ಚಾಂಪಿಯನ್ಸ್ ಟ್ರೋಫಿ ಜಯಿಸಿತ್ತು. ಇಂಗ್ಲೆಂಡ್ 2004ರಲ್ಲಿ ವಿಂಡೀಸ್‌ಗೆ ಫೈನಲ್‌ನಲ್ಲಿ 2 ವಿಕೆಟ್‌ಗಳ ಅಂತರದಲ್ಲಿ ಸೋಲು ಅನುಭವಿತ್ತು. 2013ರಲ್ಲಿ ಎಡ್ಜ್‌ಬಾಸ್ಟನ್‌ನಲ್ಲಿ ಭಾರತ ವಿರುದ್ಧ 5 ರನ್‌ಗಳ ಸೋಲು ಅನುಭವಿಸಿ ಪ್ರಶಸ್ತಿ ಎತ್ತುವ ಅವಕಾಶವನ್ನು ಕಳೆದುಕೊಂಡಿತ್ತು.
ದಕ್ಷಿಣ ಆಫ್ರಿಕ ತಂಡ ಬಾಂಗ್ಲಾದ ಢಾಕಾದಲ್ಲಿ 1998ರಲ್ಲಿ ನಡೆದ ಚಾಂಪಿಯನ್ಸ್ ಟ್ರೋಫಿಯ ಚೊಚ್ಚಲ ಟೂರ್ನಮೆಂಟ್‌ನಲ್ಲಿ ಪ್ರಶಸ್ತಿ ಬಾಚಿಕೊಂಡಿತ್ತು. 2002ರಲ್ಲಿ ಭಾರತ ಮತ್ತು ಶ್ರೀಲಂಕಾ ಪ್ರಶಸ್ತಿಯನ್ನು ಹಂಚಿಕೊಂಡಿತ್ತು.
ಚಾಂಪಿಯನ್ಸ್ ಟ್ರೋಫಿ ವೇಳಾ ಪಟ್ಟಿ

ಜೂ.01-ಇಂಗ್ಲೆಂಡ್-ಬಾಂಗ್ಲಾದೇಶ , ದಿ ಓವಲ್

ಜೂ.02-ಆಸ್ಟ್ರೇಲಿಯ-ನ್ಯೂಝಿಲೆಂಡ್, ಎಡ್ಜ್‌ಬ್ಯಾಸ್ಟನ್
ಜೂ.03-ಶ್ರೀಲಂಕಾ-ದ.ಆಫ್ರಿಕ, ದಿ ಓವಲ್
ಜೂ.04-ಭಾರತ-ಪಾಕಿಸ್ತಾನ, ಎಡ್ಜ್‌ಬ್ಯಾಸ್ಟನ್
ಜೂ.05-ಆಸ್ಟ್ರೇಲಿಯ-ಬಾಂಗ್ಲಾದೇಶ, ದಿ ಓವಲ್
ಜೂ.06-ಇಂಗ್ಲೆಂಡ್-ನ್ಯೂಝಿಲೆಂಡ್, ಕಾರ್ಡಿಫ್
ಜೂ.07-ಪಾಕಿಸ್ತಾನ-ದ.ಆಫ್ರಿಕ , ಎಡ್ಜ್‌ಬಾಸ್ಟನ್
ಜೂ.08-ಭಾರತ-ಶ್ರೀಲಂಕಾ, ದಿ ಓವಲ್
ಜೂ.09-ನ್ಯೂಝಿಲೆಂಡ್-ಬಾಂಗ್ಲಾದೇಶ, ಕಾರ್ಡಿಫ್
ಜೂ.10-ಇಂಗ್ಲೆಂಡ್-ಆಸ್ಟ್ರೇಲಿಯ, ಎಡ್ಜ್‌ಬ್ಯಾಸ್ಟನ್
ಜೂ.11-ಭಾರತ-ದಕ್ಷಿಣ ಆಫ್ರಿಕ, ದಿ ಓವಲ್
ಜೂ.12-ಶ್ರೀಲಂಕಾ-ಪಾಕಿಸ್ತಾನ, ಕಾರ್ಡಿಫ್
ಜೂ.14-ಮೊದಲ ಸೆಮಿಫೈನಲ್(ಎ1-ಬಿ2), ಕಾರ್ಢಿಫ್
ಜೂ.15-ಎರಡನೆ ಸೆಮಿಫೈನಲ್(ಎ2-ಬಿ 1), ಎಡ್ಜ್‌ಬಾಸ್ಟನ್
ಜೂ.18-ಫೈನಲ್, ದಿ ಓವಲ್
ಜೂ.19-ಮೀಸಲು ದಿನ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News