ಮತ್ತೆ ಚಿಗುರೊಡೆದ ಮೇರಿ ಕೋಮ್ ಒಲಿಂಪಿಕ್ಸ್ ಕನಸು
ವೈರ್ಲ್ಡ್‌ಕಾರ್ಡ್ ಪಡೆಯಲು ಭಾರತ ಪ್ರಯತ್ನ ಸಾಧ್ಯತೆ
ಹೊಸದಿಲ್ಲಿ, ಜೂ.1: ಭಾರತದ ಹಿರಿಯ ಬಾಕ್ಸರ್ ಮೇರಿ ಕೋಮ್ ರಿಯೋ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಬೇಕೆಂಬ ಕನಸು ಈಡೇರುವ ಲಕ್ಷಣ ಗೋಚರಿಸುತ್ತಿದೆ.
ಭಾರತೀಯ ಬಾಕ್ಸಿಂಗ್ ಫೆಡರೇಶನ್ ದೇಶದ ಚಾಂಪಿಯನ್ ಬಾಕ್ಸರ್‌ಗೆ ವೈಲ್ಡ್‌ಕಾರ್ಡ್ ನೀಡಲು ಮನವಿ ಸಲ್ಲಿಸುವ ಸಾಧ್ಯತೆಯಿದೆ. ಮಾಜಿ ವಿಶ್ವ ಚಾಂಪಿಯನ್ ಮೇರಿಕೋಮ್ ವೈರ್ಲ್ಡ್‌ಕಾರ್ಡ್‌ನ ಮೂಲಕ ಆಗಸ್ಟ್‌ನಲ್ಲಿ ನಡೆಯಲಿರುವ ರಿಯೋ ಗೇಮ್ಸ್‌ಗೆ ತೆರಳುವ ಅವಕಾಶವಿದೆ ಎನ್ನಲಾಗಿದೆ.
ಮೇರಿಕೋಮ್ ಇತ್ತೀಚೆಗೆ ಒಲಿಂಪಿಕ್ಸ್‌ಗೆ ಅರ್ಹತಾ ಟೂರ್ನಿಯಾಗಿದ್ದ ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಸೋಲುವುದರೊಂದಿಗೆ ರಿಯೋಗೆ ಅರ್ಹತೆ ಪಡೆಯಲು ವಿಫಲರಾಗಿದ್ದರು. ಕಝಕಿಸ್ತಾನದಲ್ಲಿ ನಡೆದಿದ್ದ ವಿಶ್ವ ಬಾಕ್ಸಿಂಗ್ ಟೂರ್ನಿಯಲ್ಲಿ ಮೇರಿ ಸೆಮಿಫೈನಲ್‌ಗೆ ತಲುಪಿದ್ದರೆ, ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯಬಹುದಿತ್ತು.
ಮೇರಿಕೋಮ್ ದೇಶ ಕಂಡ ಅತ್ಯುತ್ತಮ ಅಥ್ಲೀಟ್. ಅವರು ಕ್ರೀಡೆಯಲ್ಲಿ ತೋರಿರುವ ಸಮಗ್ರ ಸಾಧನೆಯನ್ನು ಪರಿಗಣಿಸಿ ವೈರ್ಲ್ಡ್‌ಕಾರ್ಡ್‌ಗೆ ಮನವಿ ಸಲ್ಲಿಸಲು ನಿರ್ಧರಿಸಲಾಗಿದೆ. ಅಂತಾರಾಷ್ಟ್ರೀಯ ಬಾಕ್ಸಿಂಗ್ ಸಂಘಟನೆ(ಎಐಬಿಎ) ಮೇರಿ ಕೋಮ್ ಅರ್ಜಿಯನ್ನು ಪರಿಶೀಲಿಸಿ ಅಂತಿಮ ನಿರ್ಧಾರ ಕೈಗೊಳ್ಳಲಿದೆ ಎಂದು ಬಾಕ್ಸಿಂಗ್ ಇಂಡಿಯಾದ ಹಂಗಾಮಿ ಅಧ್ಯಕ್ಷ ಕಿಶನ್ ನರ್ಸಿ ಹೇಳಿದ್ದಾರೆ.
ಒಲಿಂಪಿಕ್ಸ್‌ನ ಮಹಿಳಾ ಬಾಕ್ಸಿಂಗ್‌ನಲ್ಲಿ 51 ಕೆಜಿ, 60 ಕೆಜಿ ಹಾಗೂ 75 ಕೆಜಿ ವಿಭಾಗಗಳಿದ್ದು, ಪ್ರತಿ ವಿಭಾಗಕ್ಕೆ ಕೇವಲ ಒಂದು ವೈರ್ಲ್ಡ್‌ಕಾರ್ಡ್ ನೀಡಲಾಗುತ್ತದೆ. ಮೇರಿಕೋಮ್ 2012ರ ಲಂಡನ್ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕವನ್ನು ಜಯಿಸಿದ್ದರು. ಈಮೂಲಕ ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಪದಕ ಗೆದ್ದುಕೊಟ್ಟ ಮೊದಲ ಮಹಿಳಾ ಬಾಕ್ಸರ್ ಎಂಬ ಕೀರ್ತಿಗೆ ಭಾಜನರಾಗಿದ್ದರು