ಟೆಸ್ಟ್ ಕ್ರಿಕೆಟ್‌ಗೆ ಶ್ರೀಲಂಕಾದ ವೇಗದ ಬೌಲರ್ ಕುಲಶೇಖರ ವಿದಾಯ
ಕೊಲಂಬೊ, ಜೂ.1: ಸೀಮಿತ ಓವರ್ ಕ್ರಿಕೆಟ್‌ನಲ್ಲಿ ಹೆಚ್ಚು ಗಮನ ನೀಡುವ ಉದ್ದೇಶದಿಂದ ಶ್ರೀಲಂಕಾದ ವೇಗದ ಬೌಲರ್ ನುವಾನ್ ಕುಲಶೇಖರ ಬುಧವಾರ ಟೆಸ್ಟ್ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದರು.
‘‘ನಾನು ಇಂದಿನಿಂದಲೇ ಟೆಸ್ಟ್ ಕ್ರಿಕೆಟ್‌ನಿಂದ ದೂರ ಸರಿಯಲು ನಿರ್ಧರಿಸಿದ್ದೇನೆ. ತುಂಬಾ ಯೋಚಿಸಿದ ನಂತರ ನಿವೃತ್ತಿಗೆ ಇದು ಸರಿಯಾದ ಸಮಯ ಎಂದು ಭಾವಿಸಿದೆ. ಏಕದಿನ ಹಾಗೂ ಟ್ವೆಂಟಿ-20 ಕ್ರಿಕೆಟ್‌ನಲ್ಲಿ ಶ್ರೀಲಂಕಾ ತಂಡದಲ್ಲಿ ಮುಂದುವರಿಯುವ ವಿಶ್ವಾಸದಲ್ಲಿದ್ದೇನೆ’’ ಎಂದು ಶ್ರೀಲಂಕಾ ಕ್ರಿಕೆಟ್‌ಗೆ ಬರೆದಿರುವ ಪತ್ರವೊಂದರಲ್ಲಿ 33ರ ಹರೆಯದ ಕುಲಶೇಖರ ತಿಳಿಸಿದ್ದಾರೆ.
ಕುಲಶೇಖರ ಬೌಲಿಂಗ್‌ನಲ್ಲಿ ವೇಗದ ಕೊರತೆಯಿದ್ದರೂ, ಚೆಂಡನ್ನು ಸ್ವಿಂಗ್ ಮಾಡುವ ಸಾಮರ್ಥ್ಯ ಹೊಂದಿದ್ದರು. ಲಂಕೆಯ ಪರ ಬೌಲಿಂಗ್ ದಾಳಿ ಆರಂಭಿಸುತ್ತಿದ್ದ ಕುಲಶೇಖರ 21 ಟೆಸ್ಟ್ ಪಂದ್ಯಗಳಲ್ಲಿ 48 ವಿಕೆಟ್‌ಗಳನ್ನು ಪಡೆದಿದ್ದಾರೆ. 2005ರಲ್ಲಿ ನೇಪಿಯರ್‌ನಲ್ಲಿ ನ್ಯೂಝಿಲೆಂಡ್ ವಿರುದ್ಧ ಚೊಚ್ಚಲ ಆಡಿರುವ ಕುಲಶೇಖರ ಎರಡು ವರ್ಷಗಳ ಹಿಂದೆ ಲಾರ್ಡ್ಸ್‌ನಲ್ಲಿ ಇಂಗ್ಲೆಂಡ್‌ನ ವಿರುದ್ಧ ಕೊನೆಯ ಪಂದ್ಯ ಆಡಿದ್ದರು.
ಆಸ್ಟ್ರೇಲಿಯ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ 22ಕ್ಕೆ 5 ವಿಕೆಟ್ ಕಬಳಿಸಿರುವ ಕುಲಶೇಖರ 2006ರಲ್ಲಿ ಇಂಗ್ಲೆಂಡ್‌ನ ವಿರುದ್ಧ ಲಾರ್ಡ್ಸ್‌ನಲ್ಲಿ ಚೊಚ್ಚಲ ಅರ್ಧಶತಕ ಬಾರಿಸಿದ್ದರು.
ಏಕದಿನ ಕ್ರಿಕೆಟ್‌ನಲ್ಲಿ 173 ಪಂದ್ಯಗಳನ್ನು ಆಡಿರುವ ಕುಲಶೇಖರ 186 ವಿಕೆಟ್‌ಗಳನ್ನು ಉರುಳಿಸಿದ್ದಾರೆ. ಮಾ.2009ರಲ್ಲಿ ಏಕದಿನ ಕ್ರಿಕೆಟ್‌ನಲ್ಲಿ ನಂ.1 ಬೌಲರ್ ಆಗಿದ್ದರು. ಎ.2008 ರಿಂದ ಮಾ.2009ರ ನಡುವೆ 47 ವಿಕೆಟ್‌ಗಳನ್ನು ಪಡೆದು ಮಿಂಚಿದ್ದರು.