ಈಡನ್‌ಗಾರ್ಡನ್ಸ್ ಮಾಜಿ ಕ್ಯುರೇಟರ್ ಪ್ರಬೀರ್ ಮುಖರ್ಜಿ ನಿಧನ
ಕೋಲ್ಕತಾ, ಜೂ.1: ಕಳೆದ ಕೆಲವು ಸಮಯದಿಂದ ಲಿವರ್ ಸಮಸ್ಯೆಯಿಂದ ಬಳಲುತ್ತಿದ್ದ ಬಂಗಾಳ ಕ್ರಿಕೆಟ್ ಸಂಸ್ಥೆಯ(ಸಿಎಬಿ) ಮಾಜಿ ಪಿಚ್ ಕ್ಯುರೇಟರ್ ಪ್ರಬೀರ್ ಮುಖರ್ಜಿ ಮಂಗಳವಾರ ರಾತ್ರಿ ನಿಧನರಾಗಿದ್ದಾರೆ. ಅವರಿಗೆ 86 ವರ್ಷ ವಯಸ್ಸಾಗಿತ್ತು.
25 ವರ್ಷಗಳ ಕಾಲ ಕ್ಯುರೇಟರ್ ಆಗಿ ಸೇವೆ ಸಲ್ಲಿಸಿದ್ದ ಮುಖರ್ಜಿ ಬಂಗಾಳ ಹಾಗೂ ಉತ್ತರ ವಲಯ ತಂಡಗಳ ಮ್ಯಾನೇಜರ್ ಆಗಿದ್ದರು. 1979ರಿಂದ ಸಿಎಬಿಯೊಂದಿಗೆ ನಂಟು ಹೊಂದಿದ್ದರು.
ಅತ್ಯಂತ ಕಟ್ಟುನಿಟ್ಟಿನ, ನೇರ ನುಡಿ ವ್ಯಕ್ತಿತ್ವದ ಮುಖರ್ಜಿ ತನ್ನ ದೀರ್ಘ ವೃತ್ತಿಬದುಕಿನಲ್ಲಿ ವಿವಾದಗಳಿಂದಲೂ ಸುದ್ದಿಯಾಗಿದ್ದರು. ಕಳೆದ ವರ್ಷ ಅಕ್ಟೋಬರ್‌ನಲ್ಲಿ ಈಡನ್‌ಗಾರ್ಡನ್ಸ್‌ನಲ್ಲಿ ನಡೆಯಬೇಕಾಗಿದ್ದ ಭಾರತ-ದಕ್ಷಿಣ ಆಫ್ರಿಕ ನಡುವಿನ ಟ್ವೆಂಟಿ-20 ಪಂದ್ಯ ಮಳೆಗಾಹುತಿಯಾದ ನಂತರ ಮುಖರ್ಜಿ ಪಂದ್ಯ ರದ್ದತಿಗೆ ನೈತಿಕ ಹೊಣೆಹೊತ್ತು ತಮ್ಮ ವೃತ್ತಿ ತ್ಯಜಿಸಿದ್ದರು.
ಈಡನ್‌ನ ಹಳೆಯ ಹಾಗೂ ಕಳಪೆ ಒಳಚರಂಡಿ ವ್ಯವಸ್ಥೆ, ಮೈದಾನ ಸಿಬ್ಬಂದಿಗಳ ವೈಫಲ್ಯದಿಂದ ಮಳೆ ನಿಂತರೂ ಪಂದ್ಯ ಪುನರಾರಂಭಗೊಂಡಿರಲಿಲ್ಲ.
ಮುಖರ್ಜಿ ಪಂದ್ಯ ಆರಂಭಕ್ಕೆ ಮೊದಲು ಆಟಗಾರರಿಗೆ ಈಡನ್ ಪಿಚ್‌ಗೆ ಪ್ರವೇಶಕ್ಕೆ ಹಾಗೂ ಪಿಚ್ ಪರೀಕ್ಷಿಸಲು ಅವಕಾಶ ನೀಡುತ್ತಿರಲಿಲ್ಲ. ಒಮ್ಮೆ ರೋಹಿತ್ ಶರ್ಮಗೆ ಪಿಚ್ ಪರೀಕ್ಷಿಸಲು ಅವಕಾಶ ನೀಡದೇ ಸುದ್ದಿಯಾಗಿದ್ದ ಮುಖರ್ಜಿ,2012ರಲ್ಲಿ ಇಂಗ್ಲೆಂಡ್ ವಿರುದ್ಧ ಟೆಸ್ಟ್ ಪಂದ್ಯದಲ್ಲಿ ತಂಡದ ಪರವಾಗಿ ಪಿಚ್ ರಚಿಸಬೇಕೆಂಬ ಧೋನಿ ಆಗ್ರಹಕ್ಕೆ ಸೊಪ್ಪು ಹಾಕದೇ ಪ್ರತಿಭಟನೆ ವ್ಯಕ್ತಪಡಿಸಿದ್ದರು.
ಸಚಿನ್ ತೆಂಡುಲ್ಕರ್ ಹಾಗೂ ರಿಕಿ ಪಾಂಟಿಂಗ್‌ಗೆ ಪಿಚ್‌ನೊಳಗೆ ಪ್ರವೇಶಿಸಲು ಬಿಡದೇ ತನ್ನ ಕರ್ತವ್ಯನಿಷ್ಠೆ ಪ್ರದರ್ಶಿಸಿದ್ದರು.