ಅರ್ಜುನ್ ಆಯ್ಕೆಯಾಗಿದ್ದು ತೆಂಡುಲ್ಕರ್ ಕಾರಣಕ್ಕಲ್ಲ
ಮುಂಬೈ, ಜೂ.2: ಇತ್ತೀಚೆಗೆ ಪಶ್ಚಿಮ ವಲಯ ಅಂಡರ್-16 ತಂಡಕ್ಕೆ ಸಚಿನ್ ತೆಂಡುಲ್ಕರ್ ಪುತ್ರ ಅರ್ಜುನ್ ಆಯ್ಕೆಯಾಗಿದ್ದರು. ಆಯ್ಕೆಗಾರರು ದೇಶೀಯ ಟೂರ್ನಿಯಲ್ಲಿ ಔಟಾಗದೆ 1,009 ರನ್ ಗಳಿಸಿದ್ದ ಪ್ರಣವ್ ಧನವಾಡೆಯನ್ನು ನಿರ್ಲಕ್ಷಿಸಿ ಅರ್ಜುನ್‌ಗೆ ಮಣೆ ಹಾಕಿರುವ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಕ್ರಿಕೆಟ್ ಅಭಿಮಾನಿಗಳಿಂದ ತೀವ್ರ ಟೀಕೆ-ಟಿಪ್ಪಣಿಗಳು ವ್ಯಕ್ತವಾಗಿದ್ದವು.
ಪ್ರಣವ್‌ರನ್ನು ಕೈಬಿಟ್ಟು ಅರ್ಜುನ್ ತೆಂಡುಲ್ಕರ್‌ರನ್ನು ಪಶ್ವಿಮ ವಲಯದ ಅಂಡರ್-16 ತಂಡಕ್ಕೆ ಆಯ್ಕೆ ಮಾಡಿರುವುದು ವಿವಾದಕ್ಕೆ ಕಾರಣವಾಗಿತ್ತು. ಈ ಆಯ್ಕೆಯ ಹಿಂದೆ ಅರ್ಜುನ್ ತಂದೆ, ಮಾಜಿ ಕ್ರಿಕೆಟಿಗ ಸಚಿನ್ ತೆಂಡುಲ್ಕರ್ ಪ್ರಭಾವವಿರುವ ಬಗ್ಗೆಯೂ ಶಂಕೆ ವ್ಯಕ್ತವಾಗಿತ್ತು.
ರಿಕ್ಷಾ ಚಾಲಕನ ಮಗ ಧನವಾಡೆ ಔಟಾಗದೆ ಬಾರಿಸಿದ್ದ 1,009 ರನ್ ಸಾಧನೆಯನ್ನು ಕಡೆಗಣಿಸಿದ್ದಕ್ಕೂ ಸಾಮಾಜಿಕ ಜಾಲ ತಾಣದಲ್ಲಿ ಆಕ್ರೋಶ ವ್ಯಕ್ತವಾಗಿತ್ತು. ಆದರೆ, ಅರ್ಜುನ್ ಆಯ್ಕೆಯ ಹಿಂದಿನ ನಿಜಾಂಶ ಬೇರೆಯೇ ಇದೆ.
ಅರ್ಜುನ್ ಮುಂಬೈನ ಅಂಡರ್-16 ತಂಡವನ್ನು ರಾಜ್ಯಮಟ್ಟದಲ್ಲಿ ಪ್ರತಿನಿಧಿಸುತ್ತಿದ್ದಾರೆ. ಇದು ಅವರು ವಲಯ ತಂಡಗಳಲ್ಲಿ ಆಯ್ಕೆಯಾಗಲು ಅರ್ಹತಾ ಮಾನದಂಡವಾಗಿದೆ. ಮತ್ತೊಂದೆಡೆ, ಪ್ರಣವ್ ಇನ್ನಷ್ಟೇ ಮುಂಬೈನ ಅಂಡರ್-16 ತಂಡಕ್ಕೆ ಆಯ್ಕೆಯಾಗಬೇಕಾಗಿದೆ.
ಇತ್ತೀಚೆಗಷ್ಟೇ 16ನೆ ವಯಸ್ಸಿಗೆ ಕಾಲಿಟ್ಟಿರುವ ಪ್ರಣವ್, ಭಂಡಾರಿ ಕಪ್‌ನಲ್ಲಿ ಔಟಾಗದೆ 1009 ರನ್ ಗಳಿಸಿ ದಾಖಲೆ ನಿರ್ಮಿಸುವ ಮೊದಲೇ ಮುಂಬೈ ಅಂಡರ್-16 ತಂಡವನ್ನು ಆಯ್ಕೆ ಮಾಡಲಾಗಿತ್ತು.