×
Ad

ವಿಶ್ರಾಂತಿ ರಹಿತ ಆಟ ಮುಸ್ತಫಿಝುರ್‌ಗೆ ಭವಿಷ್ಯಕ್ಕೆ ಮಾರಕ: ಫಿಸಿಯೊ ಆತಂಕ

Update: 2016-06-02 19:36 IST

ಹೊಸದಿಲ್ಲಿ, ಜೂ.2: ಐಪಿಎಲ್ 2016ರ ಟೂರ್ನಮೆಂಟ್‌ನಲ್ಲಿ ಬಾಂಗ್ಲಾದೇಶ ತಂಡದ ಆಟಗಾರ ಮುಸ್ತಫಿಝುರ್ರಹ್ಮಾನ್ ಅತ್ಯುತ್ತಮ ಪ್ರದರ್ಶನ ನೀಡುವ ಮೂಲಕ ಮಿಂಚಿದ್ದಾರೆ. ವಿಶ್ರಾಂತಿ ರಹಿತ ಕ್ರಿಕೆಟ್‌ನ್ನು ಮುಂದುವರಿಸಿದರೆ ಅವರು ಯಾವುದೇ ಸಮಯದಲ್ಲಿ ಗಾಯಗೊಂಡು ಕ್ರಿಕೆಟ್ ಕಣದಿಂದ ದೂರ ಉಳಿಯುವ ಸಾಧ್ಯತೆ ಇದೆ ಎಂದು ಬಿಸಿಬಿ ಫಿಸಿಯೊ ಬೈಝಿದುಲ್ ಇಸ್ಲಾಂ ಅಭಿಪ್ರಾಯಪಟ್ಟಿದ್ದಾರೆ.
ಮುಸ್ತಫಿಝುರ್ರಹ್ಮಾನ್ ಇಂಗ್ಲಿಷ್ ಟ್ವೆಂಟಿ-20 ಟೂರ್ನಮೆಂಟ್‌ನಲ್ಲಿ ಸಸ್ಸೆಕ್ಸ್ ತಂಡದ ಪರ ಪಾಲ್ಗೊಳ್ಳುತ್ತಿದ್ದಾರೆ. ಇದು ಆತಂಕದ ವಿಚಾರವಾಗಿದೆ. ವೇಗದ ಬೌಲರ್ ರಹ್ಮಾನ್ ಗಾಯಗೊಳ್ಳುವ ಭೀತಿ ಇದೆ ಎಂದು ಫಿಸಿಯೊ ಹೇಳಿದ್ದಾರೆ.
 20ರ ಹರೆಯದ ಯುವ ಆಟಗಾರ ಮುಸ್ತಫಿಝುರ್ ಕಳೆದ ಐಪಿಎಲ್ ಟೂರ್ನಿಯಲ್ಲಿ ಸನ್‌ರೈಸರ್ಸ್‌ ಹೈದರಾಬಾದ್ ತಂಡದ ಪರ ಆಡಿದ್ದರು. 16 ಪಂದ್ಯಗಳಲ್ಲಿ 17 ವಿಕೆಟ್ ಉಡಾಯಿಸುವ ಮೂಲಕ ಸನ್‌ರೈಸರ್ಸ್‌ ಹೈದರಾಬಾದ್ ತಂಡವನ್ನು ಚೊಚ್ಚಲ ಚಾಂಪಿಯನ್ ಪಟ್ಟಕ್ಕೆ ಏರಿಸುವಲ್ಲಿ ದೊಡ್ಡ ಕೊಡುಗೆ ನೀಡಿದ್ದರು.
 ಮುಸ್ತಫಿಝುರ್ ಕಳೆದ ಐಪಿಎಲ್ ಟೂರ್ನಿಯಲ್ಲಿ ಉದಯೋನ್ಮುಖ ಆಟಗಾರನಾಗಿ ಹೊರಹೊಮ್ಮಿದ್ದರು. ಈ ಸಾಧನೆ ಮಾಡಿರುವ ಮೊದಲ ಕ್ರಿಕೆಟಿಗ ಮುಸ್ತಫಿಝುರ್. 
ಐಪಿಎಲ್‌ನಲ್ಲಿ ಆಡಿರುವ ಮುಸ್ತಫಿಝರ್‌ಗೆ ಫಿಟ್‌ನೆಸ್ ಸಮಸ್ಯೆಯಿಂದ ಬಳಲುತ್ತಿಲ್ಲ. ಆದರೆ ಆದರೆ ಇದನ್ನೇ ಮುಂದುವರಿಸಿದರೆ ಅವರ ಆರೋಗ್ಯದ ಮೇಲೆ ಪರಿಣಾಮ ಉಂಟಾಗಲಿದೆ. ಗಾಯದಿಂದ ಚೇತರಿಸಿಕೊಂಡ ಬಳಿಕ ಅವರಿಗೆ 19 ಪಂದ್ಯಗಳನ್ನು ಆಡಲು ಅನುಮತಿ ನೀಡಲಾಗಿತ್ತು ಎಂದು ಬಿಸಿಬಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ನಿಝಾಮುದ್ದೀನ್ ಚೌದರಿ ತಿಳಿಸಿದ್ದಾರೆ.
ಮುಸ್ತಫಿಝುರ್ ಕಳೆದ ಜನವರಿಯಲ್ಲಿ ಭುಜನೋವಿನ ಕಾರಣಕ್ಕಾಗಿ ಝಿಂಬಾಬ್ವೆ ವಿರುದ್ಧದ ಎರಡು ಟ್ವೆಂಟಿ-20 ಪಂದ್ಯಗಳಲ್ಲಿ ಆಡಿರಲಿಲ್ಲ. ಇದೇ ಕಾರಣದಿಂದಾಗಿ ಅವರು ಯುಎಇಯಲ್ಲಿ ನಡೆದ ಮೊದಲ ಆವೃತ್ತಿಯ ಪಾಕಿಸ್ತಾನ ಸೂಪರ್ ಲೀಗ್‌ನಿಂದ ದೂರ ಉಳಿದಿದ್ದರು.
 ತವರಲ್ಲಿ ನಡೆದ ಏಷ್ಯಾಕಪ್ ಟೂರ್ನಮೆಂಟ್‌ನಲ್ಲಿ ಮುಸ್ತಫಿಝುರ್ ತಂಡಕ್ಕೆ ವಾಪಸಾಗಿದ್ದರೂ ಶ್ರೀಲಂಕಾ ವಿರುದ್ಧ ಮತ್ತು ಫೈನಲ್ ಪಂದ್ಯದಲ್ಲಿ ಆಡಿರಲಿಲ್ಲ.ಭಾರತದಲ್ಲಿ ನಡೆದ ಐಸಿಸಿ ಟ್ವೆಂಟಿ-20 ಟೂರ್ನಿಯ ನಾಲ್ಕು ಪಂದ್ಯಗಳಲ್ಲೂ ಅವರು ಭಾಗವಹಿಸಿರಲಿಲ್ಲ.
ಐಪಿಎಲ್ ಟೂರ್ನಿಯಲ್ಲಿ ಭಾಗವಹಿಸಿ ತವರಿಗೆ ಮರಳಿದ ಮುಸ್ತಫಿಝುರ್ ಅವರನ್ನು ಅಭಿಮಾನಿಗಳು ಭವ್ಯ ಸ್ವಾಗತಿಸಿ ನೀಡಿ ಬರಮಾಡಿಕೊಂಡರು. ವಿಮಾನ ನಿಲ್ದಾಣದಲ್ಲಿ ನೂರಾರು ಮಂದಿ ಅಭಿಮಾನಿಗಳು ಮುಸ್ತಫಿಝುರ್ ಅವರನ್ನು ಅಭಿನಂದಿಸಿದರು. ಬಾಂಗ್ಲದೇಶದ ಉಪ ಸಚಿವರೊಬ್ಬರು ‘‘ನ್ಯಾಶನಲ್ ಹೀರೊ ’’ ಎಂದು ಬಣ್ಣಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News