ಕೊಪಾ ಅಮೆರಿಕ ಟೂರ್ನಿ: ಬ್ರೆಝಿಲ್ ತಂಡದಲ್ಲಿ ಕಾಕಾ ಅಲಭ್ಯ
ಲಾಸ್ ಏಂಜಲಿಸ್, ಜೂ.2: ಕೊಪಾ ಅಮೆರಿಕ ಫುಟ್ಬಾಲ್ ಟೂರ್ನಿ ಆರಂಭಕ್ಕೆ ಕ್ಷಣಗಣನೆ ಆರಂಭವಾಗಿರುವಂತೆಯೇ ಬ್ರೆಝಿಲ್ ತಂಡದಲ್ಲಿ ಆಟಗಾರರ ಗಾಯಾಳು ಬಿಕ್ಕಟ್ಟು ಉಲ್ಬಣಿಸಿದೆ. ಬ್ರೆಝಿಲ್‌ನ ಹಿರಿಯ ಸ್ಟ್ರೈಕರ್ ಕಾಕಾ ಸ್ನಾಯು ಸೆಳೆತದ ಹಿನ್ನೆಲೆಯಲ್ಲಿ ಕೋಪಾ ಅಮೆರಿಕ ಟೂರ್ನಿಯಿಂದ ಹಿಂದೆ ಸರಿದಿದ್ದಾರೆ.
ಶನಿವಾರ ಇಕ್ವಾಡಾರ್ ತಂಡದ ವಿರುದ್ಧ ಆಡುವ ಮೂಲಕ ಟೂರ್ನಿಯಲ್ಲಿ ಅಭಿಯಾನ ಆರಂಭಿಸಲಿರುವ ಬ್ರೆಝಿಲ್‌ಗೆ ಆಟಗಾರರ ಗಾಯಾಳು ಸಮಸ್ಯೆ ತಲೆನೋವಾಗಿ ಪರಿಣಮಿಸಿದೆ. ಕಾಕಾ ಗಾಯಗೊಂಡು ಟೂರ್ನಿಯಿಂದ ಹಿಂದೆ ಸರಿಯುತ್ತಿರುವ ಬ್ರೆಝಿಲ್‌ನ ಐದನೆ ಆಟಗಾರ. ಬೆಯರ್ನ್ ಮ್ಯೂನಿಕ್‌ನ ಡೌಗ್ಲಾಸ್ ಕಾಸ್ಟಾ ಗಾಯಗೊಂಡ ಕಾರಣ ಬದಲಿ ಆಟಗಾರನಾಗಿ ಆಯ್ಕೆಯಾಗಿದ್ದ ಕಾಕಾ ಇದೀಗ ಗಾಯದ ಪಟ್ಟಿಗೆ ಸೇರಿದ್ದಾರೆ. ರಿಕಾರ್ಡೊ ಒಲಿವೆರಾ ಸ್ಯಾಂಟೊಸ್, ಗೋಲ್‌ಕೀಪರ್ ಎಡರ್ಸನ್ ಹಾಗೂ ಬಾರ್ಸಿಲೋನದ ಮಿಡಿಡ್‌ಫೀಲ್ಡರ್ ರಫಿನ್ಹಾ ಈಗಾಗಲೇ ಗಾಯದ ಸಮಸ್ಯೆಯಿಂದಾಗಿ ಟೂರ್ನಿಯಿಂದ ಹೊರ ನಡೆದಿದ್ದಾರೆ.
34ರ ಹರೆಯದ ಆಕ್ರಮಣಕಾರಿ ಆಟಗಾರ ಕಾಕಾ ಇದೇ ಮೊದಲ ಬಾರಿ ಕೊಪಾ ಅಮೆರಿಕ ಟೂರ್ನಿಯಲ್ಲಿ ಸ್ಪರ್ಧಿಸಲು ಎದುರು ನೋಡುತ್ತಿದ್ದರು. ಆದರೆ, ಲಾಸ್‌ಏಂಜಲೀಸ್‌ನಲ್ಲಿ ನಡೆದ ತಂಡದ ತರಬೇತಿ ಶಿಬಿರದಲ್ಲಿ ಕಾಕಾಗೆ ಗಾಯದ ಸಮಸ್ಯೆ ಕಾಣಿಸಿಕೊಂಡಿದ್ದು, ಟೂರ್ನಿಯಲ್ಲಿ ಆಡಬೇಕೆಂಬ ಅವರ ಕನಸು ಭಗ್ನಗೊಂಡಿದೆ.
‘‘ತರಬೇತಿ ಶಿಬಿರದ ವೇಳೆ ಕಾಕಾ ಗಾಯಗೊಂಡಿದ್ದರು. ಎಂಆರ್‌ಐ ಸ್ಕಾನಿಂಗ್‌ನಲ್ಲಿ ಸಣ್ಣ ಸಮಸ್ಯೆ ಕಂಡುಬಂದಿದೆ. ಅವರಿಗೆ ಚೇತರಿಸಿಕೊಳ್ಳಲು 15 ರಿಂದ 25ದಿನಗಳು ಬೇಕಾಗಬಹುದು ಎಂದು ವೈದ್ಯರು ತಿಳಿಸಿದ್ದಾರೆ ಎಂದು ಬ್ರೆಝಿಲ್ ಫುಟ್ಬಾಲ್ ಕಾನ್ಫಡರೇಶನ್ ಅಧಿಕಾರಿ ಗಿಲ್ಮರ್ ರಿನಾಲ್ಡಿ ಹೇಳಿದ್ದಾರೆ.
ಮಾಜಿ ಫಿಫಾ ವಿಶ್ವದ ವರ್ಷದ ಆಟಗಾರ ಪ್ರಶಸ್ತಿ ವಿಜೇತ ಆಟಗಾರ ಕಾಕಾ ಅವರ ಬದಲಿಗೆ ಸಾವೊಪೌಲೊದ ಪೌಲೊ ಹೆನ್ರಿಕ್ಸ್ ಗಾನ್ಸೊಗೆ ಅವಕಾಶ ಕಲ್ಪಿಸಲಾಗಿದೆ. ಬ್ರೆಝಿಲ್ ಅಧಿಕಾರಿಗಳು ಈಗಾಗಲೇ ಸಾವೊಪೌಲೊ ಕ್ಲಬ್‌ನೊಂದಿಗೆ ಮಾತನಾಡಿದೆ.
100ನೆ ಆವೃತ್ತಿಯ ಕೊಪಾ ಅಮೆರಿಕ ಟೂರ್ನಿ ಶುಕ್ರವಾರ ಸ್ಯಾಂಟಾಕ್ಲಾರಾದಲ್ಲಿ ಆರಂಭವಾಗಲಿದ್ದು, ಮೊದಲ ಪಂದ್ಯದಲ್ಲಿ ಆತಿಥೇಯ ಅಮೆರಿಕ ತಂಡ ಕೊಲಂಬಿಯಾವನ್ನು ಎದುರಿಸಲಿದೆ. ಟೂರ್ನಿಯಲ್ಲಿ 16 ತಂಡಗಳನ್ನು 4 ಗುಂಪುಗಳಾಗಿ ವಿಭಜಿಸಲಾಗಿದ್ದು, ಜೂ.26 ರಂದು ಫೈನಲ್ ಪಂದ್ಯ ನಡೆಯುವುದು.