×
Ad

ಭಾರತ-ಪಾಕ್‌ನ್ನು ಉದ್ದೇಶಪೂರ್ವಕವಾಗಿ ಒಂದೇ ಗುಂಪಿನಲ್ಲಿಡಲಾಗುತ್ತದೆ: ಐಸಿಸಿ

Update: 2016-06-02 23:40 IST

 ಲಂಡನ್, ಜೂ.2: ವಿಶ್ವ ಮಟ್ಟದ ಟೂರ್ನಿಗಳಲ್ಲಿ ಭಾರತ ಹಾಗೂ ಪಾಕಿಸ್ತಾನ ತಂಡಗಳಿಗೆ ಉದ್ದೇಶಪೂರ್ವಕವಾಗಿ ಒಂದೇ ಗುಂಪಿನಲ್ಲಿ ಸ್ಥಾನ ನೀಡಲಾಗುತ್ತಿದೆ. ಇದು ಟೂರ್ನಿಯ ಯಶಸ್ಸಿಗೆ ಅತ್ಯಂತ ಮುಖ್ಯವಾಗಿದೆ ಎಂದು ಐಸಿಸಿ ಬಹಿರಂಗಪಡಿಸಿದೆ.

ಮುಂದಿನ ವರ್ಷ ಇಂಗ್ಲೆಂಡ್‌ನಲ್ಲಿ ನಡೆಯಲಿರುವ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತ ಹಾಗೂ ಪಾಕಿಸ್ತಾನ ಒಂದೇ ಗುಂಪಿನಲ್ಲಿದ್ದು, ಗ್ರೂಪ್‌ಹಂತದಲ್ಲಿ ಮುಖಾಮುಖಿಯಾಗಲಿವೆ.

‘‘ನಾವು ಐಸಿಸಿ ಟೂರ್ನಿಗಳಲ್ಲಿ ಭಾರತ-ಪಾಕ್ ಒಂದೇ ಗುಂಪಿನಲ್ಲಿರುವಂತೆ ನೋಡಿಕೊಳ್ಳುತ್ತೇವೆ. ಐಸಿಸಿ ದೃಷ್ಟಿಕೋನದಿಂದ ಇದು ಅತ್ಯಂತ ಮುಖ್ಯ. ಭಾರತ-ಪಾಕ್ ಒಂದೇ ಗುಂಪಿನಲ್ಲಿರುವುದರಿಂದ ಟೂರ್ನಿ ಭಾರೀ ಯಶಸ್ಸು ಸಾಧಿಸುತ್ತದೆ ಎಂದು ಐಸಿಸಿ ಸಿಇಒ ಡೇವ್ ರಿಚರ್ಡ್ಸನ್ ತಿಳಿಸಿದ್ದಾರೆ.

2017ರ ಚಾಂಪಿಯನ್ಸ್ ಟ್ರೋಫಿ ವೇಳಾಪಟ್ಟಿಯನ್ನು ಬುಧವಾರ ಪ್ರಕಟಿಸಲಾಗಿದ್ದು, ಏಷ್ಯಾದ ಬಲಿಷ್ಠ ತಂಡಗಳು ಜೂ.4 ರಂದು ಬರ್ಮಿಂಗ್‌ಹ್ಯಾಮ್‌ನಲ್ಲಿ ಮೊದಲ ಪಂದ್ಯ ಆಡಲಿವೆ.

ಟೆಸ್ಟ್ ಕ್ರಿಕೆಟ್‌ನಲ್ಲಿ ಎರಡು ವಿಭಾಗ ಪರಿಚಯಿಸಲು ಐಸಿಸಿ ಸಿದ್ಧತೆ

ಲಂಡನ್, ಜೂ.2: ಸದ್ಯೋಭವಿಷ್ಯದಲ್ಲಿ ಟೆಸ್ಟ್ ಕ್ರಿಕೆಟ್‌ನ್ನು ಉಳಿಸುವ ಸಲುವಾಗಿ ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್(ಐಸಿಸಿ) ಟೆಸ್ಟ್ ಕ್ರಿಕೆಟ್ ಪಂದ್ಯವನ್ನು ಎರಡು ವಿಭಾಗವಾಗಿ ವಿಭಜಿಸಲು ಚಿಂತನೆ ನಡೆಸುತ್ತಿದೆ.

ಟೆಸ್ಟ್ ಕ್ರಿಕೆಟ್‌ನ ಬಗ್ಗೆ ಕ್ರಿಕೆಟ್ ಅಭಿಮಾನಿಗಳಲ್ಲಿ ಆಸಕ್ತಿ ಹೆಚ್ಚಿಸುವ ಉದ್ದೇಶದಿಂದ ಟೆಸ್ಟ್‌ನಲ್ಲಿ ಎರಡು ವಿಭಾಗವನ್ನು ಪರಿಚಯಿಸಲು ಈವಾರ ಲಾರ್ಡ್ಸ್ ಮೈದಾನದಲ್ಲಿ ನಡೆದ ಐಸಿಸಿ ಸಭೆಯಲ್ಲಿ ಚರ್ಚಿಸಲಾಗಿದೆ ಎಂದು ಐಸಿಸಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡೇವಿಡ್ ರಿಚರ್ಡ್‌ಸನ್ ಹೇಳಿದ್ದಾರೆ.

ಟೆಸ್ಟ್ ಕ್ರಿಕೆಟ್ ಉಳಿಸುವ ನಿಜವಾದ ಇಚ್ಛಾಶಕ್ತಿಯಿದ್ದರೆ ಟೆಸ್ಟ್ ಆಡುವ ತಂಡಗಳ ಸಂಖ್ಯೆಯನ್ನು ಕಡಿಮೆ ಮಾಡಬಾರದು. ನಾವು ಸರಿಯಾದ ಸ್ಪರ್ಧಾತ್ಮಕ ರಚನೆ ರೂಪಿಸಬೇಕು. ದ್ವಿಪಕ್ಷೀಯ ಕ್ರಿಕೆಟ್ ಸರಣಿಯಿಂದ ಟಿವಿ ಹಕ್ಕುಗಳ ಮೂಲಕ ನಮಗೆ ಲಾಭವಿಲ್ಲ ಎಂದು ಹಲವು ಸದಸ್ಯ ರಾಷ್ಟ್ರಗಳು ದೂರುತ್ತಿವೆ. ಎಲ್ಲ ರಾಷ್ಟ್ರಗಳು ಕೆಲವು ಬದಲಾವಣೆ ಹಾಗೂ ಅರ್ಥಗರ್ಭಿತ ಸನ್ನಿವೇಶದ ಅಗತ್ಯವಿದೆ ಎಂದು ಆಗ್ರಹಿಸುತ್ತಿವೆ ಎಂದು ರಿಚರ್ಡ್‌ಸನ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News